ಜಿಎನ್‌ಡಿ ಪ್ರಕರಣದಲ್ಲಿ ನನ್ನ ಮಗನ ಹಸ್ತಕ್ಷೇಪವಿಲ್ಲ: ಸಚಿವ ರಹೀಮ್‌ ಖಾನ್

By Kannadaprabha NewsFirst Published Jun 3, 2024, 4:52 PM IST
Highlights

ನಗರದ ಗುರುನಾನಕ ದೇವ್‌ (ಜಿಎನ್‌ಡಿ) ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜೈಶ್ರೀರಾಮ ಹಾಡಿಗೆ ವಿರೋಧಿಸಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿ ಘಟನೆ ಸಂಬಂಧ ಬಿಜೆಪಿಯವರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಶುದ್ಧ ಸುಳ್ಳು ಹಾಗೂ ರಾಜಕೀಯ ಪ್ರೇರಿತವಾಗಿವೆ ಎಂದು ಸಚಿವ ರಹೀಮ್‌ ಖಾನ್‌ ಸ್ಪಷ್ಟಪಡಿಸಿದ್ದಾರೆ. 

ಬೀದರ್‌ (ಜೂ.03): ನಗರದ ಗುರುನಾನಕ ದೇವ್‌ (ಜಿಎನ್‌ಡಿ) ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜೈಶ್ರೀರಾಮ ಹಾಡಿಗೆ ವಿರೋಧಿಸಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿ ಘಟನೆ ಸಂಬಂಧ ಬಿಜೆಪಿಯವರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಶುದ್ಧ ಸುಳ್ಳು ಹಾಗೂ ರಾಜಕೀಯ ಪ್ರೇರಿತವಾಗಿವೆ ಎಂದು ಸ್ಥಳೀಯ ಶಾಸಕರೂ ಆಗಿರುವ ಪೌರಾಡಳಿತ, ಹಜ್‌ ಖಾತೆ ಸಚಿವ ರಹೀಮ್‌ ಖಾನ್‌ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ್ದು ಜಿಎನ್‌ಡಿ ಕಾಲೇಜಿನಲ್ಲಿ ನಡೆದ ಘಟನೆ ದುರದೃಷ್ಟಕರ. ಇದು ಖಂಡನೀಯ. ಜಾತಿ, ಧರ್ಮದ ಹೆಸರಿನಲ್ಲಿ ಜಗಳ, ಗಲಾಟೆ, ಹೊಡೆದಾಟ ಮಾಡುವದನ್ನು ನಾಗರಿಕ, ಸಭ್ಯ ಸಮಾಜ ಇದಕ್ಕೆ ಒಪ್ಪುವುದಿಲ್ಲ. ಅಂದು ನಡೆದ ಘಟನೆ ನಾನು ಖಂಡಿಸುತ್ತೇನೆ. 

ಆದರೆ ಈ ಘಟನೆ ಕುರಿತು ಬಿಜೆಪಿಯವರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತ, ವಿನಾಃಕಾರಣ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಈ ಘಟನೆಗೂ ನಾನು ಮತ್ತು ನನ್ನ ಪುತ್ರನಿಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನಾನೇನೂ ಹಸ್ತಕ್ಷೇಪ ಮಾಡಿಲ್ಲ. ಯಾರ ಮೇಲೆ ಒತ್ತಡವೂ ಹೇರಿಲ್ಲ. ಕಳೆದ ಎರಡು ವಾರಗಳಿಂದ ನನ್ನ ಪುತ್ರ ಇರ್ಷಾದ್‌ ಸ್ಥಳೀಯವಾಗಿಯೇ ಇಲ್ಲ. ವಿನಾಃಕಾರಣ ಇದರಲ್ಲಿ ನಮ್ಮ ಹೆಸರು ತರಲಾಗುತ್ತಿದೆ. ಘಟನೆ ಸಂಬಂಧ ವಿದ್ಯಾರ್ಥಿಗಳು ನೀಡಿದ ದೂರು, ಪ್ರತಿ ದೂರಿನ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Latest Videos

ಲಿಂಗಾಯತ ಧರ್ಮ ಅರ್ಥೈಸಿಕೊಳ್ಳುವ ಅಗತ್ಯವಿದೆ: ಸಚಿವ ಸತೀಶ ಜಾರಕಿಹೊಳಿ

ತಪ್ಪು ಯಾರೇ ಮಾಡಿದರೂ ಕಾನೂನಿನ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇಲ್ಲಿ ಯಾರ ಮೇಲೂ ಒತ್ತಡ ಹೇರುವ, ಯಾರಿಗಾದರೂ ನಾನು ಕಿರಿಕಿರಿ ನೀಡುವ ಪ್ರಶ್ನೆಯೇ ಉದ್ಭವಿಸದು. ಅಂಥ ಮನೋಭಾವ, ಮನಸ್ಥಿತಿಯುಳ್ಳ ವ್ಯಕ್ತಿಯೂ ನಾನಲ್ಲ. ಬಿಜೆಪಿಯ ಕೆಲವರು ಮಾಡುತ್ತಿರುವ ಸುಳ್ಳು ಆರೋಪಗಳು ನನಗೆ ಅತೀವ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ನಿಮಿತ್ತ ಅಂದು ನಾನು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇತರರು ಪೂರ್ವನಿಗದಿಯಂತೆ ಜಿಎನ್‌ಡಿ ಎಂಜಿನಿಯರಿಂಗ್‌ ಕಾಲೇಜಿಗೆ ಪ್ರಚಾರಕ್ಕಾಗಿ ಹೋಗಿದ್ದೇವೆ. 

ನಾವು ಅಲ್ಲಿಗೆ ಹೋಗುವ ಎರಡ್ಮೂರು ಗಂಟೆ ಮುಂಚೆಯೇ ವಿದ್ಯಾರ್ಥಿಗಳ ನಡುವೆ ಗಲಾಟೆ ಆಗಿತ್ತು. ಅಲ್ಲಿಗೆ ಹೋದ ಬಳಿಕ ನಮಗೂ ಘಟನೆ ಬಗ್ಗೆ ಗೊತ್ತಾಗಿದೆ. ಆದರೆ ನಾವು ಉದ್ದೇಶಪೂರ್ವಕವಾಗಿ ಅಲ್ಲಿಗೆ ಹೋಗಿ ಹಲ್ಲೆ ಮಾಡಿದವರ ಪರವಾಗಿ ನಿಂತಿದ್ದೇವೆ, ಹಲ್ಲೆಗೊಳಗಾದವರ ಮೇಲೆ ಪ್ರಕರಣ ದಾಖಲಿಸಲು ಪೊಲೀಸರ ಮೇಲೆ ಒತ್ತಡ ಹೇರಿದ್ದೇವೆ ಎಂದು ಆರೋಪ ಮಾಡುತ್ತಿರುವುದು ಬಿಜೆಪಿಯವರ ಕಟ್ಟುಕತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಜೀವಮಾನದಲ್ಲಿ ನಾನು ಎಂದೂ ಜಾತಿ ರಾಜಕೀಯ ಮಾಡಿಲ್ಲ. ಧರ್ಮದ ಹೆಸರಿನಲ್ಲೂ ರಾಜಕೀಯ ಮಾಡಿಲ್ಲ. ಎಲ್ಲ ಸಮಾಜದವರನ್ನು ಒಂದೇ ದೃಷ್ಟಿಯಿಂದ ನೋಡಿ ಸೌಹಾರ್ದತೆಯಿಂದ ನಡೆಯುತ್ತಿದ್ದೇನೆ. 

ನಾಲ್ಕು ಬಾರಿ ಬೀದರ್‌ ಕ್ಷೇತ್ರದ ಮತದಾರರು ನನಗೆ ಶಾಸಕನನ್ನಾಗಿ ಆಯ್ಕೆ ಮಾಡಿದ್ದೇ ಇದಕ್ಕೆ ನಿದರ್ಶನವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಸರ್ವ ಸಮಾಜದ ಹಿತಕ್ಕಾಗಿ ಉಸಿರು ಇರುವವರೆಗೆ ದುಡಿಯುವ ಸಂಕಲ್ಪ ಮಾಡಿ ನಾನು ಕೆಲಸ ಮಾಡುತ್ತಿದ್ದೇನೆ. ಸತ್ಯ ಏನೆಂಬುವದನ್ನು ಅರಿತು ಬಿಜೆಪಿಯವರು ಹೇಳಿಕೆ ಕೊಡಬೇಕು ಎಂದಿದ್ದಾರೆ. ರಾಜಕೀಯ ಲಾಭ, ರಾಜಕೀಯ ಸ್ವಾರ್ಥಕ್ಕಾಗಿ ಸುಳ್ಳು ಹೇಳಿಕೆ ನೀಡಿ ದ್ವೇಷ ಹುಟ್ಟಿಸುವ, ಸಮಾಜದಲ್ಲಿ ಅನಗತ್ಯ ಅಶಾಂತಿ ಮೂಡಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ್ದಾರೆ. 

ರಾಜ್ಯದಲ್ಲಿ ಹೂಡಿಕೆ ಇಳಿಕೆಗೆ ಕೇಂದ್ರ, ಬಿಜೆಪಿ ಕಾರಣ: ಸಚಿವ ಎಂ.ಬಿ ಪಾಟೀಲ್‌

ಈ ವಿಷಯದ ಬಗ್ಗೆ ಕಾಲೇಜು ಆಡಳಿತ ಮಂಡಳಿ ಸಹ ಗಮನಹರಿಸಿ ತಪ್ಪಿತಸ್ಥರ ಮೇಲೆ ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ಮುಂದೆ ಈ ತರಹದ ಘಟನೆಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ. ನನ್ನ ಕೊನೆಯ ಉಸಿರಿರುವರೆಗೆ ಎಲ್ಲಾ ಜಾತಿ ಸಮುದಾಯದವರಿಗೆ ಒಂದೇ ಭಾವನೆಯಿಂದ ನೋಡುತ್ತೇನೆ. ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಜಿಎನ್ ಡಿ ಕಾಲೇಜಿನ ಘಟನೆಯನ್ನು ರಾಜಕೀಯ ಸ್ವಾರ್ಥದ ಲಾಭಕ್ಕೆ ಯಾರೂ ಬಳಸಿಕೊಳ್ಳಬಾರದು. ಶಾಂತಿಗೆ ಹೆಸರುವಾಸಿಯಾದ ಬೀದರ್‌ನಲ್ಲಿ ಅಶಾಂತಿ ಸೃಷ್ಟಿಸಲು, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯಾರೂ ಪ್ರಯತ್ನ ಮಾಡಬಾರದು ಎಂದು ರಹೀಮ್‌ ಖಾನ್‌ ಮನವಿ ಮಾಡಿದ್ದಾರೆ.

click me!