
ನವದೆಹಲಿ: ಈ ವರ್ಷದ ಏಪ್ರಿಲ್‌ನಿಂದ ಜುಲೈ ನಡುವೆ ನಿವೃತ್ತರಾಗಲಿರುವ 20 ರಾಜ್ಯಗಳ 59 ರಾಜ್ಯಸಭಾ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಆತ್ಮೀಯ ವಿದಾಯ ಕೋರಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ದ್ವೈವಾರ್ಷಿಕ ವಿದಾಯ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ‘ಇಂತಹ ಕ್ಷಣಗಳು ಪಕ್ಷಭೇದಗಳನ್ನು ಕರಗಿಸಿಬಿಡುತ್ತವೆ. ಸಂಸತ್ತು ಮುಕ್ತ ವಿಶ್ವವಿದ್ಯಾಲಯ ಇದ್ದಂತೆ. ರಾಜಕಾರಣದಲ್ಲಿ ಪೂರ್ಣವಿರಾಮ ಎಂಬುದೇ ಇಲ್ಲ. ನಿಮ್ಮ ಕೊಡುಗೆಗಳು ರಾಷ್ಟ್ರೀಯ ಜೀವನದ ಶಾಶ್ವತ ಭಾಗವಾಗಿ ಉಳಿಯುತ್ತವೆ’ ಎಂದು ಹಿರಿಯ ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ದೇವೇಗೌಡರು, ಖರ್ಗೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ರನ್ನು ‘ದಿಗ್ಗಜರು’ ಎಂದು ಬಣ್ಣಿಸಿದ ಮೋದಿ, ‘ಇವರೆಲ್ಲಾ ತಮ್ಮ ಅರ್ಧ ಜೀವನವನ್ನು ಸಂಸತ್ತಿನ ಕಲಾಪಗಳಲ್ಲೇ ಕಳೆದಿದ್ದಾರೆ. ಅವರು ಇಂದಿಗೂ ಹುರುಪಿನೊಂದಿಗೆ ಕಲಾಪಗಳಲ್ಲಿ ಭಾಗಿ ಆಗುವುದು ಅನುಕರಣೀಯ. ಇದು ಸಣ್ಣ ಸಾಧನೆಯೂ ಅಲ್ಲ’ ಎಂದು ಹೊಗಳಿಗೆಯ ಮಾತುಗಳನ್ನಾಡಿದರು. ದೇವೇಗೌಡರನ್ನು ‘ಸದನಕ್ಕೆ ಮಹತ್ತರ ಸ್ಥಾನಮಾನ ತಂದುಕೊಟ್ಟ ಗೌರವಾನ್ವಿತರು’ ಎಂದರೆ, ‘ಖರ್ಗೆಯವರು ಉಭಯ ಸದನಗಳ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಧ್ವನಿ’ ಎಂದು ಮೋದಿ ಹೇಳಿದರು.
ಸದಾ ರಾಜಕೀಯ ಭಿನ್ನಮತಗಳಿಂದಾಗಿ ಗದ್ದಲದ ಗೂಡಾಗಿರುತ್ತಿದ್ದ ಮೇಲ್ಮನೆಯಲ್ಲಿ ತಮ್ಮ ವಿದಾಯ ಭಾಷಣ ಮಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರ ಬಗ್ಗೆ ನೀಡಿದ ಹೇಳಿಕೆ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿತು. ‘ದೇವೇಗೌಡರೊಂದಿಗೆ 54 ವರ್ಷಗಳ ಒಡನಾಟವಿದೆ. ಆದರೆ ಏನಾಯಿತೋ ಗೊತ್ತಿಲ್ಲ, ನಮ್ಮನ್ನು ಪ್ರೀತಿಸಿದವರು ಬಳಿಕ ಮೋದಿ ಜತೆ ಮದುವೆಯಾಗಿಬಿಟ್ಟರು’ ಎಂದು ಗೌಡರು ಕಾಂಗ್ರೆಸ್ ಬಿಟ್ಟು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡದ್ದನ್ನು ಉಲ್ಲೇಖಿಸಿ ಖರ್ಗೆ ಹಾಸ್ಯ ಮಾಡಿದರು.
ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲೂ ಕಾಂಗ್ರೆಸ್ ಜತೆಗಿದ್ದ ಜನತಾ ದಳ(ಜೆಡಿಎಸ್) ಬಳಿಕ ಬಿಜೆಪಿ ಜತೆ ಕೈಜೋಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.