
ನವದೆಹಲಿ: 'ಅವರು (ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ) ನಮ್ಮನ್ನು (ಕಾಂಗ್ರೆಸ್) ಪ್ರೇಮಿಸಿದರು ಆದರೆ, ನರೇಂದ್ರ ಮೋದಿ (ಬಿಜೆಪಿ) ಅವರನ್ನ ಮದುವೆಯಾದರು' ಎಂದು ರಾಜ್ಯಸಭೆಯ ನಿರ್ಗಮಿತ ಸದಸ್ಯರಿಗೆ ಬೀಳ್ಕೊಡುಗೆ ನೀಡುವ ಭಾಷಣದ ವೇಳೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು. ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಾಲೆಳೆಯುವ ಮೂಲಕ ಇಡೀ ಸದನ ನಗೆಗಡಲಲ್ಲಿ ತೇಲುವಂತೆ ಮಾಡಿದರು.
ರಾಜ್ಯಸಭೆಯ ನಿರ್ಗಮಿತ ಸದಸ್ಯರಿಗೆ ಬೀಳ್ಕೊಡುಗೆ ನೀಡುವ ಭಾಷಣದ ವೇಳೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಇಂದು ರಾಜಕೀಯ ಕಿತ್ತಾಟದ ಬದಲು ಹಾಸ್ಯ ಮತ್ತು ಚುಚ್ಚುಮಾತಿನ ಪ್ರಸಂಗವೊಂದು ನೆರೆದಿದ್ದವರನ್ನು ರಂಜಿಸಿತು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ವ್ಯಂಗ್ಯವಾಡಿದ ಖರ್ಗೆ, 'ದೇವೇಗೌಡರು ಮತ್ತು ನಾನು ಕಳೆದ 54 ವರ್ಷಗಳಿಂದ ಸ್ನೇಹಿತರು. ಅವರೊಂದಿಗೆ ನಾನು ಬಹಳ ಹತ್ತಿರದಿಂದ ಕೆಲಸ ಮಾಡಿದ್ದೇನೆ. ಆದರೆ ಇತ್ತೀಚೆಗೆ ಏನಾಯಿತು ಎಂದು ನನಗಂತೂ ಗೊತ್ತಿಲ್ಲ. ಅವರು ನಮ್ಮನ್ನು (ಕಾಂಗ್ರೆಸ್) ಪ್ರೀತಿಸಿದರು, ಆದರೆ ಕೊನೆಗೆ ಮದುವೆಯಾಗಿದ್ದು ಮಾತ್ರ ನರೇಂದ್ರ ಮೋದಿ ಅವರನ್ನ!' ಎಂದು ಕಿಚಾಯಿಸಿದರು. ಖರ್ಗೆ ಅವರ ಈ ಚತುರ 'ಮದುವೆ' ಹೋಲಿಕೆಯನ್ನು ಕೇಳಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಿದ್ದು ಬಿದ್ದು ನಕ್ಕರು.
ತಮ್ಮ ಭಾಷಣದಲ್ಲಿ ದೇವೇಗೌಡರೊಂದಿಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಖರ್ಗೆ, 'ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಸಾರ್ವಜನಿಕ ಬದುಕಿನಲ್ಲಿರುವವರಿಗೆ ದೇಶಸೇವೆಯ ಉತ್ಸಾಹ ಎಂದಿಗೂ ಕುಂದುವುದಿಲ್ಲ. ಸಾರ್ವಜನಿಕ ಸೇವೆಯಲ್ಲಿರುವವರು ಎಂದಿಗೂ ನಿವೃತ್ತರಾಗುವುದಿಲ್ಲ. ಅವರು ಸದಾ ಕ್ರಿಯಾಶೀಲರಾಗಿರುತ್ತಾರೆ' ಎಂದು ಗೌಡರ ರಾಜಕೀಯ ಬದ್ಧತೆಯನ್ನು ಶ್ಲಾಘಿಸಿದರು.
ಖರ್ಗೆ ಅವರ ಭಾಷಣದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಹಿರಿಯ ನಾಯಕರ ಸಂಸದೀಯ ಅನುಭವವನ್ನು ಕೊಂಡಾಡಿದರು. 'ಹೆಚ್.ಡಿ. ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸದೀಯ ಕೆಲಸಗಳಲ್ಲಿ ಕಳೆದಿದ್ದಾರೆ. ಇವರ ಅನುಭವ ದೇಶಕ್ಕೆ ಆಸ್ತಿ. ಹೊಸದಾಗಿ ಆಯ್ಕೆಯಾಗಿ ಬರುವ ಸಂಸದರು ಈ ಹಿರಿಯ ನಾಯಕರಿಂದ ಸಂಸದೀಯ ನಡವಳಿಕೆ ಮತ್ತು ಕೆಲಸದ ಬಗ್ಗೆ ಕಲಿಯಬೇಕಾದ್ದು ಬಹಳಷ್ಟಿದೆ' ಎಂದು ಸಲಹೆ ನೀಡಿದರು.
ಕರ್ನಾಟಕದಲ್ಲಿ ಇತ್ತೀಚೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ರಾಷ್ಟ್ರ ರಾಜಕಾರಣದಲ್ಲೂ ಸಂಚಲನ ಮೂಡಿಸಿತ್ತು. ಈ ಮೈತ್ರಿಯನ್ನು ಕಾಂಗ್ರೆಸ್ ನಿರಂತರವಾಗಿ ಟೀಕಿಸುತ್ತಲೇ ಬಂದಿದೆ. ಆದರೆ ಇಂದು ಖರ್ಗೆ ಅವರು ಅದನ್ನು ಅತ್ಯಂತ ಹಾಸ್ಯಮಯವಾಗಿ, ಸದನದ ಘನತೆಗೆ ತಕ್ಕಂತೆ ಮಂಡಿಸಿದ್ದು ವಿಶೇಷವಾಗಿತ್ತು. ದೇವೇಗೌಡರು ಕೂಡ ಖರ್ಗೆ ಅವರ ಮಾತನ್ನು ನಗುಮುಖದಿಂದಲೇ ಆಲಿಸಿದ್ದು ಸದನದ ಸೌಹಾರ್ದತೆಗೆ ಸಾಕ್ಷಿಯಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.