ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ ಲಾಭದಿಂದ ಬಾಡಿಗೆದಾರರು ವಂಚಿತರಾಗುವ ಸಾಧ್ಯತೆಯಿದೆ. ಏಕೆಂದರೆ, 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್ ನೀಡುವ ಈ ಯೋಜನೆಯ ಮಾರ್ಗಸೂಚಿಯನ್ನು ಇಂಧನ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ.
ಬೆಂಗಳೂರು (ಜೂ.06): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ ಲಾಭದಿಂದ ಬಾಡಿಗೆದಾರರು ವಂಚಿತರಾಗುವ ಸಾಧ್ಯತೆಯಿದೆ. ಏಕೆಂದರೆ, 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್ ನೀಡುವ ಈ ಯೋಜನೆಯ ಮಾರ್ಗಸೂಚಿಯನ್ನು ಇಂಧನ ಇಲಾಖೆ ಸೋಮವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ಹಲವು ಆರ್.ಆರ್.ಸಂಖ್ಯೆ ಹೊಂದಿದ್ದರೆ, ಆ ಪೈಕಿ ಒಂದಕ್ಕೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.
ತನ್ಮೂಲಕ ಬಾಡಿಗೆ ಮನೆಗಳಲ್ಲಿ ವಾಸಿಸುವವರು ‘ಗೃಹಜ್ಯೋತಿ’ ಯೋಜನೆಯ ಲಾಭದಿಂದ ವಂಚಿತರಾಗುವ ಸಾಧ್ಯತೆಯಿದೆ. ಏಕೆಂದರೆ, ಮನೆ ಮಾಲಿಕನೇ ತನ್ನ ಬಾಡಿಗೆ ಮನೆಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕಗಳಿಗೆ ತನ್ನದೇ ಹೆಸರಿನಲ್ಲಿ ಆರ್.ಆರ್.ಸಂಖ್ಯೆ ಹೊಂದಿರುತ್ತಾನೆ. ಹೀಗೆ ಆತ ಹಲವು ಆರ್.ಆರ್. ಸಂಖ್ಯೆ ಹೊಂದಿರುವಾಗ ಆತನಿಗೆ ಒಂದು ಆರ್.ಆರ್. ಸಂಖ್ಯೆಗೆ ಮಾತ್ರ ಸೌಲಭ್ಯ ದೊರೆಯುತ್ತದೆ. ಹೀಗಾಗಿ ಬಾಡಿಗೆದಾರರಿಗೆ ಈ ಸೌಲಭ್ಯ ದೊರೆಯುವ ಸಾಧ್ಯತೆಯಿಲ್ಲ.
ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ: ರಿಷಬ್ ಶೆಟ್ಟಿ
ಜೂ.2ರಂದು ನಡೆದಿದ್ದ ಸಚಿವ ಸಂಪುಟ ಸಭೆ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಶೇ.60ರಷ್ಟು ಮಂದಿ ಬಾಡಿಗೆ ಮನೆಗಳಲ್ಲಿರುವವರೇ ಇದ್ದಾರೆ. ಇದು ಸರ್ಕಾರದ ಗಮನದಲ್ಲಿದೆ. ಬಾಡಿಗೆಗಿರುವ ಬಡವನ ಮನೆಯಲ್ಲೂ ಜ್ಯೋತಿ ಬೆಳಗಬೇಕು. ಹೀಗಾಗಿ ಬಾಡಿಗೆದಾರರನ್ನು ಹೊರಗಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಆದರೆ, ಮಂಗಳವಾರ ಪ್ರಕಟಗೊಂಡಿರುವ ಮಾರ್ಗಸೂಚಿಯಲ್ಲಿ ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ (ಆರ್.ಆರ್. ನಂಬರ್) ಒಂದು ಸ್ಥಾವರಕ್ಕೆ ಮಾತ್ರ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರು ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಮಾರ್ಗಸೂಚಿಯಲ್ಲಿ ಯೋಜನೆ ಗೃಹ ಬಳಕೆಗೆ ಮಾತ್ರ ಅನ್ವಯವಾಗಲಿದ್ದು, ವಾಣಿಜ್ಯ ಉದ್ದೇಶಕ್ಕೆ ಈ ಯೋಜನೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜತೆಗೆ ಫಲಾನುಭವಿಗಳು ತಮ್ಮ ಕಸ್ಟಮರ್ ಐಡಿಯನ್ನು (ಬಳಕೆದಾರರ ಗುರುತಿನ ಸಂಖ್ಯೆ) ಆಧಾರ್‌ಗೆ ಜೋಡಿಸಬೇಕು.
ಉಚಿತ ವಿದ್ಯುತ್ ಬಿಲ್ಲಿಂಗ್ ಹೇಗೆ?
1. ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸಬೇಕು. ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್ ಬಿಲ್ ನೀಡಬೇಕು. ಗ್ರಾಹಕರು ಸಂಬಂಧಪಟ್ಟ ಶುಲ್ಕವನ್ನು ಪಾವತಿಸಬೇಕು. ಅರ್ಹ ಯುನಿಟ್ ಅಥವಾ ಮೊತ್ತಕ್ಕಿಂತ ಒಳಗಡೆ ಬಿಲ್ ಆಗಿದ್ದರೆ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ನೀಡಬೇಕು.
2. ಅರ್ಹ ಮೊತ್ತ ಅಂದರೆ, ಕಳೆದ 12 ತಿಂಗಳ ಸರಾಸರಿ ಆಧರಿಸಿ ಶೇ.10ರಷ್ಟುಹೆಚ್ಚುವರಿ ಯುನಿಟ್ ವಿದ್ಯುತ್ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಜತೆಗೆ ಗರಿಷ್ಠ 200 ಯುನಿಟ್ ಮಿತಿ ನಿಗದಿ ಮಾಡಲಾಗಿದೆ. ಕಳೆದ ವರ್ಷದ ಸರಾಸರಿಯ ಮೇಲೆ ಶೇ.10ಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಹೆಚ್ಚುವರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕು. 200 ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದರೆ ಪೂರ್ಣ ಬಿಲ್ ಪಾವತಿಸಬೇಕು.
ಬಾಕಿ ಪಾವತಿಸದಿದ್ದರೆ ಸಂಪರ್ಕ ಕಡಿತ: ಜೂ.30ರ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗಾಗಿ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಜತೆಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹಜ್ಯೋತಿಯಡಿ ಸೇರಿಸಲಾಗುವುದು. ಗ್ರಾಹಕರಿಗೆ ನೀಡಿದ ಉಚಿತ ಮೊತ್ತವನ್ನು ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಹಾಯಧನದ ಮೂಲಕ ನೀಡಲಾಗುವುದು ಎಂದೂ ಹೇಳಲಾಗಿದೆ.
ಉಚಿತ ವಿದ್ಯುತ್ ಪಡೆಯುವುದು ಹೇಗೆ?
- ಅರ್ಜಿದಾರರು ಎಸ್ಕಾಂನ ಕಸ್ಟಮರ್ ಐಡಿಯನ್ನು (ಬಳಕೆದಾರರ ಗುರುತಿನ ಸಂಖ್ಯೆ) ಆಧಾರ್‌ಗೆ ಜೋಡಿಸಬೇಕು
- ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
- ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ
- ವಾಣಿಜ್ಯ ಉದ್ದೇಶಗಳಿಗೆ ಅನ್ವಯವಾಗುವುದಿಲ್ಲ
- ಯಾವಾಗಿನಿಂದ ಅರ್ಜಿ ಸಲ್ಲಿಸಬೇಕು ಮತ್ತು ದಾಖಲೆಗಳು ಯಾವ್ಯಾವುದು ಬೇಕು ಎಂಬುದನ್ನು ಇನ್ನೂ ತಿಳಿಸಿಲ್ಲ
ಗ್ಯಾರಂಟಿ ಜಾರಿಗೆ ಕಾಂಗ್ರೆಸ್‌ನವರು ತೆರಿಗೆ ಹೆಚ್ಚಿಸ್ತಾರೆ: ಶಾಸಕ ಬಿ.ವೈ.ವಿಜಯೇಂದ್ರ
ಬಾಡಿಗೆದಾರರಿಗೆ ಯೋಜನೆ ಅನ್ವಯವಾಗಲ್ಲ ಎಂದು ನಾವು ಹೇಳಿಲ್ಲ. ಸರ್ಕಾರದ ನಿರ್ಧಾರದಂತೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಒಬ್ಬರ ಹೆಸರಿನಲ್ಲಿ ಹೆಚ್ಚು ಆರ್.ಆರ್. ನಂಬರ್ ಇದ್ದರೆ ಒಂದಕ್ಕೆ ಮಾತ್ರ ಯೋಜನೆ ಅನ್ವಯವಾಗುತ್ತದೆ. ಇದರಿಂದ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಅನ್ಯಾಯವಾಗುವುದಾದರೆ ನಮ್ಮ ಗಮನಕ್ಕೆ ತರಲಿ. ನಾವು ಅಧಿಕಾರಿಗಳಿಂದ ಹೊಸದಾಗಿ ಪ್ರಸ್ತಾವನೆ ತರಿಸಿಕೊಂಡು ಪರಿಶೀಲಿಸುತ್ತೇವೆ. ಈವರೆಗೆ ನಮ್ಮ ಗಮನಕ್ಕೆ ಯಾರೂ ತಂದಿಲ್ಲ.
- ಗೌರವ ಗುಪ್ತಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ