ಮಹಿಳೆಯರೇ... ಜೂ.11ರಿಂದ ಐಡಿ ತೋರಿಸಿ, ಬಸ್ಸಲ್ಲಿ ಫ್ರೀ ಓಡಾಡಿ

By Kannadaprabha NewsFirst Published Jun 6, 2023, 3:00 AM IST
Highlights

ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜೂನ್‌ 11ರಿಂದ ಅವಕಾಶ ಕಲ್ಪಿಸುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ‘ಶಕ್ತಿ’ ಗ್ಯಾರಂಟಿ ಯೋಜನೆ ಜಾರಿಗೂ ಷರತ್ತುಗಳನ್ನು ಅನ್ವಯಿಸಿ ಸೋಮವಾರ ಅಧಿಕೃತ ಆದೇಶ ಹೊರಡಿಸಲಾಗಿದೆ. 

ಬೆಂಗಳೂರು (ಜೂ.06): ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜೂನ್‌ 11ರಿಂದ ಅವಕಾಶ ಕಲ್ಪಿಸುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ‘ಶಕ್ತಿ’ ಗ್ಯಾರಂಟಿ ಯೋಜನೆ ಜಾರಿಗೂ ಷರತ್ತುಗಳನ್ನು ಅನ್ವಯಿಸಿ ಸೋಮವಾರ ಅಧಿಕೃತ ಆದೇಶ ಹೊರಡಿಸಲಾಗಿದೆ. ಮಂಗಳವಾರ ವಿವರವಾದ ಮಾರ್ಗಸೂಚಿ ಹೊರಬೀಳಲಿದೆ. ಪ್ರಸ್ತುತ ಆದೇಶದ ಪ್ರಕಾರ, ಹವಾನಿಯಂತ್ರಿತ ಮತ್ತು ಇತರೆ ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಮತ್ತು ವೇಗದೂತ ಸಾರಿಗೆ ಬಸ್ಸುಗಳಲ್ಲಿ ವಿದ್ಯಾರ್ಥಿನಿಯರೂ ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೂ (ತೃತೀಯ ಲಿಂಗಿಗಳಿಗೂ) ರಾಜ್ಯದೊಳಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮುಂದಿನ ಮೂರು ತಿಂಗಳೊಳಗೆ ಉಚಿತ ಪ್ರಯಾಣ ಸೌಲಭ್ಯ ಪಡೆಯುವ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಶಕ್ತಿ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ. ಅಲ್ಲಿಯವರೆಗೆ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಸೇರಿದಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ವಿತರಿಸಲಾಗಿರುವ ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. 

ಇಂದಿನಿಂದಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ: ಮಾಜಿ ಸಿಎಂ ಬೊಮ್ಮಾಯಿ

ಸಾರಿಗೆ ಇಲಾಖೆಯಡಿ ಬರುವ ನಾಲ್ಕೂ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಸಿಟಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡ್ಲ್ಯುಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕೆಕೆಆರ್‌ಟಿಸಿ) ವ್ಯಾಪ್ತಿಯ ಎಲ್ಲಾ ನಗರ ಸಾರಿಗೆ, ಸಾಮಾನ್ಯ ಬಸ್ಸುಗಳು ಹಾಗೂ ವೇಗದೂತ ಸಾರಿಗೆ ಬಸ್ಸುಗಳಲ್ಲಿ ಜೂನ್‌ 11ರಿಂದ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಒದಗಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ. ಈ ಮಧ್ಯೆ, ಉಚಿತ ಪ್ರಯಾಣಕ್ಕೆ ಅವಕಾಶವಿರುವ ಬಸ್ಸುಗಳಲ್ಲಿ ಮುಂಗಡ ಆಸನ ಕಾಯ್ದಿರಿಸಿರುವುದು ಸೇರಿದಂತೆ ಇನ್ನಿತರೆ ಅಂಶಗಳನ್ನೊಳಗಂಡ ವಿವರವಾದ ಮಾರ್ಗಸೂಚಿಯು ಮಂಗಳವಾರ ಹೊರಬೀಳುವ ಸಾಧ್ಯತೆ ಇದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಷರತ್ತುಗಳೇನು?
ರಾಜ್ಯದೊಳಗೆ ಮಾತ್ರ ಪ್ರಯಾಣ:
ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ (ಎಲ್ಲಾ ಅಂತರರಾಜ್ಯ ಸಾರಿಗೆ ಬಸ್‌ಗಳನ್ನು ಹೊರತುಪಡಿಸಿ) ಈ ಯೋಜನೆಯು ಅನ್ವಯಿಸುತ್ತದೆ. ಅರ್ಥಾತ್‌ ಅಂತರರಾಜ್ಯ ಸಾರಿಗೆ ಬಸ್‌ಗಳಿಗೆ ಅನ್ವಯಿಸುವುದಿಲ್ಲ.

ಐಷಾರಾಮಿ ಬಸ್ಸುಗಳಲ್ಲಿಲ್ಲ ಅವಕಾಶ: ಐಷಾರಾಮಿ ಬಸ್‌ಗಳಾದ ರಾಜಹಂಸ, ಎಸಿ ರಹಿತ ಸ್ಲೀಪರ್‌ ಹಾಗೂ ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್‌ ಕ್ಲಾಸ್‌, ಐರಾವತ ಗೋಲ್ಡ್‌ ಕ್ಲಾಸ್‌, ಅಂಬಾರಿ, ಅಂಬಾರಿ ಡ್ರೀಮ್‌ ಕ್ಲಾಸ್‌, ಅಂಬಾರಿ ಉತ್ಸವ್‌, ಇ.ವಿ. ಪವರ್‌ ಪ್ಲಸ್‌ (ಎ.ಸಿ.ಬಸ್‌ಗಳು) ಇವುಗಳಿಗೆ ರಾಜ್ಯ ಸರ್ಕಾರ ನೀಡುವ ಉಚಿತ ಪ್ರಯಾಣ ಅನ್ವಯಿಸುವುದಿಲ್ಲ.

ಪುರುಷರಿಗೆ ಶೇ.50ರಷ್ಟು ಮೀಸಲು: ಬಿಎಂಟಿಸಿ ಬಸ್ಸುಗಳನ್ನು ಹೊರತುಪಡಿಸಿ, ಕೆಎಸ್‌ಆರ್‌ಟಿಸಿ, ಎನ್‌ಡ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿಯ ಎಲ್ಲಾ ಬಸ್ಸುಗಳಲ್ಲಿ (ಅಂತರರಾಜ್ಯ, ಎ.ಸಿ. ಮತ್ತು ಐಷಾರಾಮಿ, ಬಸ್‌ಗಳನ್ನು ಹೊರತುಪಡಿಸಿ) ಶೇ.50ರಷ್ಟುಆಸನಗಳನ್ನು ಪುರುಷರಿಗೆ ಮೀಸಲಿಡಬೇಕು.

3 ತಿಂಗಳೊಳಗೆ ಸ್ಮಾರ್ಟ್‌ ಕಾರ್ಡ್‌: ಮಹಿಳೆಯರ ಉಚಿತ ಪ್ರಯಾಣಕ್ಕೆ ಸೇವಾ ಸಿಂಧು ವೆಬ್‌ಪೋರ್ಟಲ್‌ ಮೂಲಕ ಅರ್ಜಿಗಳನ್ನು ಪಡೆದು ಮುಂದಿನ ಮೂರು ತಿಂಗಳ ಒಳಗಾಗಿ ‘ಶಕ್ತಿ ಸ್ಮಾರ್ಟ್‌ ಕಾರ್ಡ್‌’ ನೀಡಲಾಗುತ್ತದೆ. ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸುವವರೆಗೂ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಇಲಾಖೆ, ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಬಸ್‌ ಕಂಡಕ್ಟರ್‌ಗಳು ಮಹಿಳೆಯರಿಗೆ ಶೂನ್ಯ ದರದ ಟಿಕೆಟ್‌ ವಿತರಿಸಲು ಪರಿಗಣಿಸಬೇಕು.

ಸಾರಿಗೆ ಸಂಸ್ಥೆಗಳಿಗೆ ಹಣ: ಈ ಯೋಜನೆಯಡಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್‌/ಶಕ್ತಿ ಸ್ಮಾರ್ಟ್‌ ಕಾರ್ಡ್‌ ದತ್ತಾಂಶವನ್ನು ಆಧರಿಸಿ ಭರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಸ್‌ನಲ್ಲಿ ಉಚಿತ ಪ್ರಯಾಣ ಹೇಗೆ?
- ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಸರ್ಕಾರ ನೀಡುವ ಶಕ್ತಿ ಸ್ಮಾರ್ಟ್‌ಕಾರ್ಡ್‌ ಹೊಂದಿರಬೇಕು

- ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ ಮೂರು ತಿಂಗಳಲ್ಲಿ ಶಕ್ತಿ ಸ್ಮಾರ್ಟ್‌ಕಾರ್ಡ್‌ ಪಡೆಯಬೇಕು

-ಸ್ಮಾರ್ಟ್‌ಕಾರ್ಡ್‌ ಸಿಗುವವರೆಗೆ ಆಧಾರ್‌ /ವೋಟರ್‌ ಐಡಿ ತೋರಿಸಬೇಕು.

-ಕಂಡಕ್ಟರ್‌ ಐಟಿ ಪರಿಶೀಲಿಸಿ ಶೂನ್ಯ ದರದ ಟಿಕೆಟ್‌ ನೀಡುತ್ತಾರೆ

ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ: ರಿಷಬ್‌ ಶೆಟ್ಟಿ

ಏನೇನು ನಿಯಮಾವಳಿ?
1. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ಸುಗಳಲ್ಲಿ ಸ್ತ್ರೀಯರಿಗೆ ಉಚಿತ

2. ನಗರ, ಸಾಮಾನ್ಯ, ವೇಗದೂತ ಬಸ್ಸುಗಳಿಗೆ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣ ಅನ್ವಯ

3. ಐಷಾರಾಮಿ ವಿಭಾಗದ ರಾಜಹಂಸ, ವಜ್ರ, ನಾನ್‌-ಎಸಿ ಸ್ಲೀಪರ್‌, ಐರಾವತ, ಅಂಬಾರಿ, ಇವಿ ಬಸ್ಸಲ್ಲಿಲ್ಲ

4. ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಉಚಿತ. ಅಂತಾರಾಜ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವಿಲ್ಲ

5. ಬಿಎಂಟಿಸಿ ಹೊರತಾಗಿ ಉಚಿತ ಪ್ರಯಾಣವಿರುವ ಬಸ್ಸುಗಳಲ್ಲಿ ಪುರುಷರಿಗೆ 50% ಆಸನಗಳು ಮೀಸಲು

click me!