
ನಯಾ ರಾಯಪುರ (ಫೆಬ್ರವರಿ 25, 2023):ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನಿಗಳು, ಮಾಜಿ ಅಧ್ಯಕ್ಷರಿಗೆ ಕಾಂಗ್ರೆಸ್ಸಿನ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯ ಕಾಯಂ ಸದಸ್ಯತ್ವ ನೀಡಲು ಪಕ್ಷದ ಸ್ಥಾಯಿ ಸಮಿತಿ ಸಭೆ ಶುಕ್ರವಾರ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಸಿಡಬ್ಲ್ಯುಸಿಯಲ್ಲಿ ಕಾಯಂ ಸದಸ್ಯತ್ವ ಸಿಕ್ಕಂತಾಗುತ್ತದೆ.
ಇದೇ ವೇಳೆ, ಸಿಡಬ್ಲ್ಯುಸಿ (CWC) ಹುದ್ದೆಗಳಿಗೆ ಚುನಾವಣೆ (Election) ನಡೆಸಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಲಾಗಿದ್ದು, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಸದಸ್ಯರನ್ನು ನಾಮನಿರ್ದೇಶನ (Nomination) ಮಾಡುವ ಅಧಿಕಾರವನ್ನು ನೀಡಲಾಗಿದೆ. ಜತೆಗೆ, ಸಿಡಬ್ಲ್ಯುಸಿಯಲ್ಲಿನ ಶೇ. 50 ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಯುವಕರಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ಈ ಕುರಿತು ಪಕ್ಷದ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿಗಳನ್ನು ತರುವಾಗಿ ಘೋಷಿಸಿದೆ.
ಇದನ್ನು ಓದಿ: ಕಾಂಗ್ರೆಸ್ ಬೊಕ್ಕಸ ತುಂಬಿಸಲು ಸದಸ್ಯತ್ವ ಶುಲ್ಕ ಹೆಚ್ಚಳಕ್ಕೆ ನಿರ್ಧಾರ; ಭಾರತ್ ಜೋಡೋ ಯಾತ್ರೆ ಎಫೆಕ್ಟ್..!
ಸಿಡಬ್ಲ್ಯುಸಿಯಲ್ಲಿ 23 ಸದಸ್ಯರು ಇದ್ದಾರೆ. ಕಾಂಗ್ರೆಸ್ (Congress) ಅಧ್ಯಕ್ಷರು, ಸಂಸದೀಯ ಪಕ್ಷದ ಅಧ್ಯಕ್ಷರು, ಕಾಂಗ್ರೆಸ್ಸಿನ ಪ್ರಧಾನಿ/ಮಾಜಿ ಪ್ರಧಾನಿಗಳು, ಲೋಕಸಭೆ, ರಾಜ್ಯಸಭೆಯ ಪ್ರತಿಪಕ್ಷ ನಾಯಕರು, ಕಾಂಗ್ರೆಸ್ ಮಾಜಿ ಅಧ್ಯಕ್ಷರನ್ನು ಹೊರತುಪಡಿಸಿ, ಉಳಿದ ಹುದ್ದೆಗಳಿಗೆ ಮೀಸಲಾತಿ ಅನ್ವಯವಾಗಲಿದೆ. ಇದರ ಜತೆಗೆ ಎಲ್ಲ ಹಂತದಲ್ಲೂ 50 ವರ್ಷದೊಳಗಿನವರಿಗೆ ಶೇ.50 ರಷ್ಟು ಹುದ್ದೆಗಳನ್ನು ಮೀಸಲಿಡಲಾಗುತ್ತದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ನೇರ ನಾಮನಿರ್ದೇಶನ:
ಶುಕ್ರವಾರದಿಂದ ರಾಯಪುರದಲ್ಲಿ ಎಐಸಿಸಿ ಮಹಾಧಿವೇಶನ ನಡೆಯಲಿದ್ದು, ಅಲ್ಲಿ ನಡೆಸಬೇಕಿರುವ ಚರ್ಚೆಗಳ ಕುರಿತು ವಿಷಯ ಅಂತಿಮಗೊಳಿಸಲು 45 ಸದಸ್ಯರ ಸ್ಥಾಯಿ ಸಮಿತಿ ಸಭೆ ಸೇರಿತ್ತು. ಈ ಸಭೆಯಲ್ಲಿ ಸಿಡಬ್ಲ್ಯುಸಿ ಸ್ಥಾನಗಳಿಗೆ ಚುನಾವಣೆ ನಡೆಸುವ ಕುರಿತು ಪರ - ವಿರೋಧ ಚರ್ಚೆಯಾಯಿತು. ಬಳಿಕ ಖರ್ಗೆ ಅವರಿಗೆ ಸದಸ್ಯರ ನಾಮನಿರ್ದೇಶನ ಅಧಿಕಾರ ನೀಡಲು ನಿರ್ಧರಿಸಲಾಯಿತು.
ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್‌ಗೆ ನೀಡದ ಸತ್ಕಾರ ಗಾಂಧಿ ಕುಟುಂಬಕ್ಕೆ..!
ಇದಕ್ಕೂ ಮುನ್ನ, ಸಿಡಬ್ಲ್ಯುಸಿ ಸದಸ್ಯರ ಆಯ್ಕೆ ಪ್ರಕ್ರಿಯೆ ಕುರಿತು ಎಲ್ಲ ನಾಯಕರು ಮುಕ್ತವಾಗಿ ಚರ್ಚಿಸಿ, ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಬೇಕು. ನೀವು ಏನೇ ತೀರ್ಮಾನ ತೆಗೆದುಕೊಂಡರೂ ಅದು ನನ್ನ ಹಾಗೂ ಪ್ರತಿಯೊಬ್ಬರ ತೀರ್ಮಾನವಾಗಿರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಬೆಳಗ್ಗೆ ನಡೆದ ಸಭೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೈರು ಹಾಜರಾಗಿದ್ದರು.
ಇದನ್ನೂ ಓದಿ: ಹೊಸ ಸಮಿತಿ ರಚಿಸಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಶಶಿ ತರೂರ್ ಗಿಲ್ಲ ಮಣೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.