
ಬೆಂಗಳೂರು [ನ.03]: ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವ ತೀವ್ರವಾಗಿರುವವರೆಗೆ ಆ ಪಕ್ಷದೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡು ಮುಖಭಂಗ ಅನುಭವಿಸುವ ಬದಲು ಎಚ್ಚರಿಕೆಯ ಹೆಜ್ಜೆ ಇಡುವುದು ಸೂಕ್ತ ಎಂಬ ನಿಲುವಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಂದಿದ್ದಾರೆ.
ಇತ್ತೀಚೆಗಷ್ಟೇ ಮೈತ್ರಿ ಮಾಡಿಕೊಂಡು ಅನುಭವಿಸಿದ್ದಾಗಿದೆ. ಅದರ ಕಹಿ ನೆನಪು ಇನ್ನೂ ಹಸಿರಾಗಿರುವಾಗಲೇ ಮತ್ತೊಮ್ಮೆ ಮೈತ್ರಿ ಮಾಡಿಕೊಂಡರೆ ಪಕ್ಷ ಅವಸಾನದತ್ತ ಹೋಗಿ ನಿಲ್ಲಬಹುದು. ಅದರ ಬದಲು ಉಪಚುನಾವಣೆ ಮುಗಿಯಲಿ. ಅದರ ಫಲಿತಾಂಶವನ್ನು ಆಧರಿಸಿ ಮುಂದೆ ನಡೆಯುವ ಬೆಳವಣಿಗೆಗಳನ್ನು ಕಾದು ನೋಡೋಣ. ನಂತರವಷ್ಟೇ ನಿರ್ಧಾರ ತೆಗೆದುಕೊಂಡರಾಯಿತು ಎಂಬ ಮಾತನ್ನು ದೇವೇಗೌಡರು ತಮ್ಮ ಆಪ್ತರ ಬಳಿ ಹೇಳಿದ್ದಾರೆ.
ಈ ಕಾರಣಕ್ಕಾಗಿಯೇ ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬೆಂಬಲಿಸುವುದಾಗಿ ಕಾಂಗ್ರೆಸ್ ನೀಡಿದ್ದ ಪ್ರಸ್ತಾಪವನ್ನು ದೇವೇಗೌಡ ಸ್ಪಷ್ಟವಾಗಿ ತಳ್ಳಿಹಾಕಿದರು ಎಂದು ತಿಳಿದುಬಂದಿದೆ.
ಮೇಲಾಗಿ ಪ್ರಸಕ್ತ ಉಪಚುನಾವಣೆ ವೇಳೆ ಮೈತ್ರಿ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದರೆ ಅದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಬಹುದೇ ಹೊರತು ತಮ್ಮ ಪಕ್ಷಕ್ಕಲ್ಲ. ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಏನೇನಾಗಿದೆ ಎಂಬುದು ಕಣ್ಣ ಮುಂದೆಯೇ ಇದೆ. ಈಗ ಮತ್ತೊಮ್ಮೆ ಅವಸರವಾಗಿ ನಿರ್ಧಾರ ಕೈಗೊಂಡಲ್ಲಿ ಇದ್ದ ನೆಲೆಯನ್ನೂ ಕಳೆದುಕೊಳ್ಳಬೇಕಾದೀತು ಎಂಬ ಆತಂಕ ಜೆಡಿಎಸ್ ನಾಯಕರನ್ನು ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ದೇವೇಗೌಡ ಕಳೆದ ಎರಡು ದಿನಗಳಿಂದ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಜತೆಗಿನ ಮೈತ್ರಿ ವಿಷಯದಲ್ಲಿ ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗಿಂತ ಮಾಜಿ ಸಚಿವ ಎಚ್.ಡಿ.ರೇವಣ್ಣ ತುಸು ಹೆಚ್ಚಿನ ಮುತುವರ್ಜಿ ತೋರುತ್ತಿರುವ ಬಗ್ಗೆಯೂ ಪಕ್ಷದ ಕೆಲವು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸುಮಾರು ಹದಿನಾಲ್ಕು ತಿಂಗಳ ಕಾಲ ಕಾಂಗ್ರೆಸ್ ಜತೆ ಸೇರಿ ನಡೆಸಿದ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಜೆಡಿಎಸ್‌ನ ಹಲವು ಶಾಸಕರಿಗೆ ಸಚಿವ ಸ್ಥಾನದ ಅಧಿಕಾರ ಸಿಕ್ಕಿದ್ದರೂ ಅದನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವಕಾಶವನ್ನು ಮುಕ್ತವಾಗಿರಿಸಿಕೊಳ್ಳುವುದರಲ್ಲಿ ಜಾಣತನ ಅಡಗಿದೆ. ಉಪಚುನಾವಣೆಯ ಫಲಿತಾಂಶದ ನಂತರ ಆಡಳಿತಾರೂಢ ಬಿಜೆಪಿಯಲ್ಲಿ ನಡೆಯಬಹುದಾದ ಬೆಳವಣಿಗೆಗಳನ್ನು ಗಮನಿಸೋಣ. ಅಂಥ ಸಂದರ್ಭ ನಿರ್ಮಾಣವಾದಲ್ಲಿ ಬಿಜೆಪಿಯೇ ತಮ್ಮ ಬೆಂಬಲ ಪಡೆಯುವ ಬಗ್ಗೆ ಪರಿಶೀಲಿಸುವ ಅವಕಾಶವಿರುತ್ತದೆ ಎಂಬ ಚಿಂತನೆ ಜೆಡಿಎಸ್ ಪಾಳೆಯದಲ್ಲಿ ಗಂಭೀರವಾಗಿ ನಡೆದಿದೆ.
ಇದರೊಂದಿಗೆ ಪಕ್ಷದ ಹಲವು ಶಾಸಕರು ಈಗಾಗಲೇ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನ ನಡೆದಲ್ಲಿ ಬೇಲಿ ಮೇಲೆ ಕುಳಿತ ಶಾಸಕರು ಬಿಜೆಪಿಯತ್ತ ಹಾರಬಹುದು. ಬಿಜೆಪಿ ಸರ್ಕಾರ ಇರುವುದರಿಂದ ಅವರಿಗೆ ಈಗ ಅನರ್ಹತೆಯ ಭೀತಿಯೂ ಇರುವುದಿಲ್ಲ. ಹೀಗಾಗಿ, ಮೈತ್ರಿ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಒಳಗಾಗದೆ ಜೆಡಿಎಸ್‌ನ ಹಿತದೃಷ್ಟಿಯನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹಲವು ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಗೌಡರ ಲೆಕ್ಕಾಚಾರ
1. ಈಗಾಗಲೇ ಮೈತ್ರಿ ಸರ್ಕಾರ ನಡೆಸಿ ಕಹಿ ಅನುಭವ ಆಗಿದೆ. ಮತ್ತೊಮ್ಮೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ತಪ್ಪು ಸಂದೇಶ ರವಾನೆ
2. ಸಿದ್ದು ಅವರನ್ನು ಸಿಎಂ ಮಾಡಲು ಮನಸ್ಸಿಲ್ಲ. ಅವರು ಕಾಂಗ್ರೆಸ್ ಮುಂಚೂಣಿಯಲ್ಲಿರುವವರೆಗೂ ‘ಹಸ್ತ’ಲಾಘವಕ್ಕೆ ಹಿಂದೇಟು
3. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದಾದರೆ ಓಕೆ. ಅದಕ್ಕಾಗಿ ಉಪಚುನಾವಣೆ ಮುಗಿವವರೆಗೆ ಕಾದು ನೋಡುವ ತಂತ್ರ
4. ಆಡಳಿತ ಪಕ್ಷವಾಗಿರುವ ಕಾರಣ ಬಿಜೆಪಿ 8ರಿಂದ 12 ಸ್ಥಾನ ಗೆಲ್ಲುವ ನಿರೀಕ್ಷೆ. ಹಾಗಾದಲ್ಲಿ, ಮೈತ್ರಿ ಸರ್ಕಾರದ ಪ್ರಶ್ನೆಯೇ ಬರುವುದಿಲ್ಲ
5. ಒಂದು ವೇಳೆ, ಬಿಜೆಪಿ ಬಹುಮತಕ್ಕೆ ಒಂದೆರಡು ಸ್ಥಾನ ಕಡಿಮೆಯಾದರೂ ಕೆಲ ಜೆಡಿಎಸ್ ಶಾಸಕರ ವಲಸೆ ಹೋಗುವ ಕುರಿತು ಭೀತಿ
6. ಜತೆಗೆ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ, ಬಿಜೆಪಿಯತ್ತ ಒಲವು ಹೊಂದಿರುವ ಕೆಲ ಜೆಡಿಎಸ್ ಶಾಸಕರು ಪಕ್ಷ ತೊರೆವ ಭೀತಿ
7. ಹೀಗೆ ಜೆಡಿಎಸ್ ಶಾಸಕರ ಒಂದೊಂದೇ ಗುಂಪು ಪಕ್ಷ ತೊರೆದರೆ ಮುಂದೆ ರಾಜ್ಯದಲ್ಲಿ ತಮ್ಮ ಪಕ್ಷವೇ ಛಿದ್ರ ಛಿದ್ರಗೊಳ್ಳುವ ಆತಂಕ
8. ಅಲ್ಲದೆ, ಮುಂದೊಮ್ಮೆ ಬಿಜೆಪಿ ಸರ್ಕಾರಕ್ಕೆ ತೊಂದರೆ ಆದರೆ ಕಿಂಗ್‌ಮೇಕರ್ ಪಾತ್ರ ವಹಿಸುವ ಅವಕಾಶ ಜೀವಂತವಾಗಿರಿಸುವ ತಂತ್ರ
9. ಈ ಎಲ್ಲ ದೂರದೃಷ್ಟಿಯಿಂದಾಗಿ ಸದ್ಯಕ್ಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಲು ಗೌಡರ ಚಿಂತನೆ
10. ಇದೇ ಕಾರಣಕ್ಕಾಗಿ ರಾಜ್ಯಸಭಾ ಉಪಚುನಾವಣೆಗೆ ಕಾಂಗ್ರೆಸ್ ಜತೆ ಒಮ್ಮತದ ಅಭ್ಯರ್ಥಿ ಹಾಕದಿರಲು ನಿರ್ಧರಿಸಿದ ಜೆಡಿಎಸ್ ವರಿಷ್ಠ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.