ಅಮಿತ್ ಶಾ ಅವರ ಭಾಷಣವನ್ನು ತಿರುಚಿರುವ ಆರೋಪವನ್ನು ರಾಹುಲ್ ಗಾಂಧಿ ಎದುರಿಸುತ್ತಿದ್ದು, ಅವರ ವಿರುದ್ಧ ಕ್ರಮಕ್ಕೆ ಈಗ ಕೂಗು ಕೇಳಿ ಬರುತ್ತಿದೆ. ಮುಂದೇನು? ಇಲ್ಲಿದೆ ಡಿಟೇಲ್ಸ್...
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಇದಾಗಲೇ, ಇವರ ವಿರುದ್ಧ ಒಂದು ಕೇಸ್ ದಾಖಲಾಗಿದ್ದು, ಈ ಸಂಬಂಧ ಎಫ್ಐಆರ್ ಕೂಡ ಸಲ್ಲಿಕೆಯಾಗಿದೆ. ಸಂಸತ್ತಿನ ಆವರಣದಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು, ಬಿಜೆಪಿ ಸಂಸದರನ್ನು ತಳ್ಳಿ ಗಾಯಗೊಳಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ದೈಹಿಕ ಹಲ್ಲೆ ಮತ್ತು ಪ್ರಚೋದನೆ ಆರೋಪದಡಿ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಸಂಸದೆ ಬಾನ್ಸುರಿ ಸ್ವರಾಜ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ, ರಾಹುಲ್ ವಿರುದ್ಧ ಕೊಲೆ ಯತ್ನ ಮತ್ತು ಇತರ ಆರೋಪಗಳ ಅಡಿಯಲ್ಲಿ ದೂರು ದಾಖಲಾಗಿದೆ.
ಆದರೆ ಇದೀಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣವನ್ನು ತಿರುಚಿ ಗಲಾಟೆ ಸೃಷ್ಟಿಸಿರುವ ಇನ್ನೊಂದು ಗಂಭೀರ ಆರೋಪ ಇವರಿಗೆ ಎದುರಾಗಿದೆ. ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿದ್ದ 11 ಸೆಕೆಂಡ್‌ಗಳ ವಿಡಿಯೋ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅಮಿತ್ ಶಾ ಅವರು, ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿ ರಾಜೀನಾಮೆ ನೀಡುವಂತೆ ಒತ್ತಾಯಿಸಿವೆ. ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಉತ್ತರಿಸುವಾಗ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ಇದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಮಿತ್ ಶಾ ಅವರು, “ಅದು ಈಗ ಫ್ಯಾಷನ್ ಆಗಿಬಿಟ್ಟಿದೆ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್... ಹೀಗೆ ದೇವರ ನಾಮಕರಣ ಮಾಡಿದ್ದರೆ ಏಳು ಜನ್ಮಗಳಿಗೂ ಸ್ವರ್ಗ ಸಿಗುತ್ತಿತ್ತು..” ಎಂದು ಆರಂಭದಲ್ಲಿ ಹೇಳುತ್ತಲೇ, ಅದಕ್ಕೆ ಪೂರಕವಾಗಿ ಒಂದಿಷ್ಟು ವಿಷಯಗಳನ್ನು ಹೇಳಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು, ಈ 11 ಸೆಕೆಂಡ್ ವಿಡಿಯೋ ಎಡಿಟ್ ಮಾಡಿ ಗಲಾಟೆ ಸೃಷ್ಟಿಸುತ್ತಿದ್ದಾರೆ ಎನ್ನುವ ಆರೋಪದ ಬೆನ್ನಲ್ಲೇ ಅಮಿತ್ ಶಾ ಅವರ ಸಂಪೂರ್ಣ ವಿಡಿಯೋ ಈಗ ವೈರಲ್ ಮಾಡಲಾಗುತ್ತಿದೆ.
undefined
ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ರನ್ನು ನಡೆಸಿಕೊಂಡ ಇಂಚಿಂಚು ಮಾಹಿತಿ ನೀಡಿದ ಸಚಿವ ರಿಜೆಜು! ಭಾರಿ ಚರ್ಚೆ
ಈ ಕುರಿತು Press Information Bureau (PIB) ಸಂಪೂರ್ಣ ವಿಡಿಯೋ ಅನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಅಮಿತ್ ಶಾರ ಭಾಷಣವನ್ನು ತಿರುಚಿರುವ ಆರೋಪ ಕೇಳಿಬಂದಿದೆ. 'ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ಈ ಹಕ್ಕು ತಪ್ಪುದಾರಿಗೆಳೆಯುವಂತಿದೆ. ಕೇಂದ್ರ ಸಚಿವರ ಭಾಷಣದ ಆಯ್ದ ಭಾಗಗಳನ್ನು ಕ್ಲಿಪ್ ಮಾಡಿದ ವಿಡಿಯೋದಲ್ಲಿ ತಪ್ಪಾಗಿ ನಿರೂಪಿಸಲಾಗಿದೆ' ಎಂದು ಪಿಐಬಿ ಹೇಳಿದೆ. ಶಾ ಅವರ ಸಂಪೂರ್ಣ ವೀಡಿಯೊವನ್ನು ಪಿಐಬಿ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸೇರಿದಂತೆ ಪಕ್ಷದ ಮುಖಂಡರು ರಾಹುಲ್ ವಿರುದ್ಧ ಕೇಸು ದಾಖಲಿಸಲು ಆಗ್ರಹಿಸುತ್ತಿದ್ದಾರೆ.
ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಸಂಪೂರ್ಣ ಹೇಳಿಕೆ ಏನು?
ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಅಮಿತ್ ಶಾ ನೀಡಿದ ಹೇಳಿಕೆಯ ಮೊದಲ 11 ಸೆಕೆಂಡುಗಳ ವಿಡಿಯೋ ವೈರಲ್ ಆಗಿದೆ. ಆದರೆ 11 ಸೆಕೆಂಡ್‌ಗಳ ಬಳಿಕ ಅಮಿತ್ ಶಾ ಅವರು, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸುತ್ತಾ, 'ಅಂಬೇಡ್ಕರ್ ಅವರ ಹೆಸರನ್ನು ತೆಗೆದುಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ನೀವು ಅಂಬೇಡ್ಕರ್ ಅವರ ಹೆಸರನ್ನು 100 ಪಟ್ಟು ಹೆಚ್ಚು ತೆಗೆದುಕೊಳ್ಳಬಹುದು, ಆದರೆ ಅದೇ ಸಮಯದಲ್ಲಿ, ಅಂಬೇಡ್ಕರ್ ಜೀ ಬಗ್ಗೆ ನಿಮ್ಮ ಭಾವನೆ ಏನು ಎಂದು ನಾನು ನಿಮಗೆ ಹೇಳುತ್ತೇನೆ. ದೇಶದ ಮೊದಲ ಸಚಿವ ಸಂಪುಟಕ್ಕೆ ಅಂಬೇಡ್ಕರ್ ಏಕೆ ರಾಜೀನಾಮೆ ನೀಡಬೇಕಾಯಿತು? ಅಂಬೇಡ್ಕರ್ ಜೀ ಹಲವು ಬಾರಿ ಹೇಳಿದ್ದರು, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನನಗೆ ಅಸಮಾಧಾನವಿದೆ. ನಾನು ಸರ್ಕಾರದ ವಿದೇಶಾಂಗ ನೀತಿಯನ್ನು ಒಪ್ಪುವುದಿಲ್ಲ ಮತ್ತು 370 ನೇ ವಿಧಿಯನ್ನು ನಾನು ಒಪ್ಪುವುದಿಲ್ಲ. ಅಂಬೇಡ್ಕರ್ ಅವರಿಗೆ ಭರವಸೆ ನೀಡಲಾಗಿತ್ತು, ಆದರೆ ಅದು ಈಡೇರಲಿಲ್ಲ, ನಂತರ ಅವರು ರಾಜೀನಾಮೆ ನೀಡಿದರು' ಎನ್ನುವುದು ಅಮಿತ್ ಶಾ ಅವರ ಸಂಪೂರ್ಣ ಭಾಷಣವಾಗಿದೆ.
ಮೃತ ಅತುಲ್‌ಗೆ ನ್ಯಾಯ ಕೇಳಿದ್ದಕ್ಕೆ ಕಿಟ್ ಕ್ಯಾಟ್ ಚಾಕೋಲೆಟ್ ಎಸೆದ ರಾಹುಲ್ ಗಾಂಧಿ!