
ಬೆಂಗಳೂರು (ಜು.30): ಶಿವಕುಮಾರಣ್ಣ ಪ್ರಾದೇಶಿಕ ಪಕ್ಷ ಕಟ್ಟುವುದು ಯಾರೋ ಗೆದ್ದ ಕಪ್ ಹಿಡಿದು ಮುತ್ತಿಟ್ಟು ರೀಲ್ಸ್ ಮಾಡುವಷ್ಟು ಸುಲಭವಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು ನಿಷ್ಠಾವಂತರು. ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ರಾಜ್ಯದ ಜನರ ತೆರಿಗೆ ಹಣದಲ್ಲಿ ಗೌರವಧನ ಪಡೆಯುತ್ತಿರುವ ಗಂಜಿ ಗಿರಾಕಿ ಕಾಂಗ್ರೆಸ್ ಕಾರ್ಯಕರ್ತರಂತಲ್ಲ ಎನ್ನುವ ಮೂಲಕ ಪ್ರಾದೇಶಿಕ ಪಕ್ಷ ಮುಗಿದು ಹೋಯಿತು ಎಂಬ ಜೆಡಿಎಸ್ ಕುರಿತ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ನಿಗಮ ಮಂಡಳಿಗಳಲ್ಲಿ ನಿಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡಲು ಯೋಗ್ಯತೆ ಇಲ್ಲದವರು ನಮ್ಮ ಕಾರ್ಯಕರ್ತರನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಎದುರು ನಿಮ್ಮ ಮಾತುಗಳಿಗೆ ಕವಡೆಕಾಸಿನ ಕಿಮ್ಮತ್ತು ಕೊಡುವವರು ಯಾರು ಇಲ್ಲ ಎಂದು ಕಿಡಿಕಾರಿದ್ದಾರೆ. ಇದೇ ಉತ್ಸಾಹ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವ ಬಗ್ಗೆ ಇದ್ದಿದ್ದರೆ ಸ್ವಲ್ಪ ಮರ್ಯಾದೆಯಾದರೂ ಉಳಿಯುತ್ತಿತ್ತು. ಉಡಾಫೆ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ನವರ ಸಾಧನೆ ಏನು?: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅಧಿಕಾರವಧಿ ಇನ್ನೂ ಮೂರು ವರ್ಷವಿದ್ದು, ಅಷ್ಟರೊಳಗೆ ಎಷ್ಟಾಗುತ್ತೋ ಅಷ್ಟು ಲೂಟಿ ಮಾಡೋಣ, ಎಷ್ಟು ಸಾಧ್ಯವೋ ಅಷ್ಟು ಭ್ರಷ್ಟಾಚಾರ ಮಾಡೋಣ ಆ ಹಣದಲ್ಲಿ ಮುಂದೆ ಚುನಾವಣೆ ಎದುರಿಸೋಣ ಎಂಬುದು ಅವರ ಭಾವನೆಯಾಗಿದೆ ಎಂಬುದು ಅವರ ಕಾರ್ಯವೈಖರಿಯಲ್ಲಿ ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಪಟ್ಟಣ ಸಮೀಪದ ಹಲಸೂರು ಶ್ರೀರಾಮ ಎಸ್ಟೇಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಲ್ಲಿ ಕಾಂಗ್ರೆಸ್‌ನವರು ಸಾಧನಾ ಸಮಾವೇಶ ಮಾಡಿದ್ದರು.
ಆದರೆ 2 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ನಾನು ಪ್ರಶ್ನಿಸುತ್ತೇನೆ. 130೦ಕ್ಕೂ ಅಧಿಕ ಸೀಟುಗಳನ್ನು ಕೊಟ್ಟ ರಾಜ್ಯದ ಜನತೆಗಾಗಿ ಎಷ್ಟರಮಟ್ಟಿಗೆ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರೇ ಉತ್ತರ ಕೊಡಬೇಕೇ ಹೊರತು ಬೇರೆಯವರು ಕೊಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು 5 ವರ್ಷ ನಾನೇ ಸಿಎಂ, ನಮ್ಮಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ ಎಂದು ಹೇಳುತ್ತಾರೆ. ಮುಖ್ಯಮಂತ್ರಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲಿ ಕಾಲಹರಣ ಮಾಡುತ್ತಿದ್ದರೆ, ಡಿಸಿಎಂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಡಿಸಿಎಂ ಸಿಎಂ ಕುರ್ಚಿಗೆ ಹೋದರೆ ಅವರ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾರು ಆಕ್ರಮಿಸಿಕೊಳ್ಳಬಹುದು ಎಂದು ಮತ್ತೊಬ್ಬರು ಕಣ್ಣಿಟ್ಟಿ ದ್ದಾರೆ. ಒಟ್ಟಾರೆ ಕಾಂಗ್ರೆಸ್‌ನವರ ಕುರ್ಚಿ ಉಳಿಸಿಕೊಳ್ಳುವ ಜಂಜಾಟದಲ್ಲಿ ಜನ ಬೇಸತ್ತು ಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.