ಬೀದರ್ (ಜು.04): ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸ್ವಪಕ್ಷದವರಿಂದಲೇ ರೂಪುರೇಷೆ ಸಿದ್ಧವಾಗುತ್ತಿದೆ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ನಗರದ ಲಾವಣ್ಯ ಕನ್ವೆನ್ಷನ್ ಹಾಲ್‌ನಲ್ಲಿ ಗುರುವಾರ ನಡೆದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್ ದರಿದ್ರ ಸರ್ಕಾರ, ಕಾಂಗ್ರೆಸ್ ಸರ್ಕಾರದಲ್ಲಿ ಏನೂ ಅಭಿವೃದ್ಧಿ ಕಾಣೋಕೆ ಸಾಧ್ಯವಿಲ್ಲ ಎಂದರು.
ಡಿಕೆಶಿಯವರೇ, ಕುಮಾರಸ್ವಾಮಿ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು, ನೀವು ಮುಖ್ಯಮಂತ್ರಿ ಆಗೋದನ್ನು ನೋಡಿಕೊಳ್ಳಿ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರೂ ಬಹಿರಂಗವಾಗಿ ಐದು ವರ್ಷ ನಾನೇ ಸಿಎಂ ಆಗೀರ್ತಿನಿ ಎಂದಿದ್ದಾರೆ. ಇನ್ನೊಂದೆಡೆ, ಸಿದ್ದು ಅವರನ್ನು ಸಿಎಂ ಸ್ಥಾನದಿಂದ ತೆಗಿಯಬೇಕು ಎಂದು ಡಿಸಿಎಂ ಜೊತೆ ಮತ್ತೊಂದಿಷ್ಟು ಬಣಗಳು ರೆಡಿಯಾಗಿದೆ ಎಂದು ಟೀಕಿಸಿದರು. ದಕ್ಷ ಪೊಲೀಸ್ ಅಧಿಕಾರಿಗೆ ಸಿಎಂ ಅವರು ಕಪಾಳಮೋಕ್ಷ ಮಾಡೋಕೆ ಹೋಗಿದ್ದರು. ಅವರು ಮನನೊಂದು ಸ್ವಯಂ ನಿವೃತ್ತಿ ಘೋಷಣೆ ಮಾಡೋಕೆ ಮುಂದಾಗಿದ್ದಾರೆ ಎಂದು ಇದೇ ವೇಳೆ ಅವರು ದೂರಿದರು.
ಬಿಜೆಪಿ ಹಾಗೂ ಜೆಡಿಎಸ್‌ಗೆ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬರುವುದು ಬೇಕಿಲ್ಲ. ನಾವು ಸೋಲ್ತಿವೋ, ಗೆಲ್ತಿವೋ ಏನಾದರೂ ಕೂಡ ನಾವು ಜನಗಳ ಜೊತೆಗೆ ನಿಲ್ಲಬೇಕು. ನಿರಂತರವಾಗಿ ಜನರೊಂದಿಗೆ ಬೆರೆತು ಕೆಲಸ ಮಾಡಬೇಕು. ಪಕ್ಷದ ಮುಖಂಡರು, ಕಾರ್ಯಕರ್ತರು ಜನರೊಂದಿಗೆ ಬೆರೆತು, ಜನರೊಂದಿಗೆ ಇದ್ದು ಕೆಲಸ ಮಾಡಬೇಕು. ಮುಂಬರುವ ತಾಪಂ, ಜಿಪಂ ಚುನಾವಣೆಗಳ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾವು ಹೆಚ್ಚೆಚ್ಚು ಸ್ಥಾನ ಪಡೆದುಕೊಳ್ಳಬೇಕು ಎಂದಾದರೆ ನಾವೆಲ್ಲರೂ ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಮಾತನಾಡಿ, ಪಕ್ಷ ಸಂಘಟನೆಯ ಕೆಲಸವನ್ನು ನಿಖಿಲ್ ಕುಮಾರಸ್ವಾಮಿ ಅವರು ಮಾಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡ್ತಿದ್ದಾರೆ. ನಾವು ಅವರೊಂದಿಗೆ ಕೈಜೋಡಿಸೋಣ ಎಂದರು. ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ದೋಖಾ ಮಾಡ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಿದ್ದಾರೆ. ಸರ್ಕಾರ ಬಂದು ಎರಡು ವರ್ಷವಾದರೂ ಜಿ.ಪಂ., ತಾ.ಪಂ. ಚುನಾವಣೆ ಮಾಡುವ ಧೈರ್ಯ ಅವರಿಗೆ ಇಲ್ಲದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಮಾಜಿ ಶಾಸಕರಾದ ಸುರೇಶ ಗೌಡ, ಮಲ್ಲಿಕಾರ್ಜುನ ಖೂಬಾ, ಸೂರ್ಯಕಾಂತ್ ನಾಗಮಾರಪಳ್ಳಿ, ಉಮಕಾಂತ ನಾಗಮಾರಪಳ್ಳಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.