
ತುಮಕೂರು (ಜು.04): ರೈಲು ಪ್ರಯಾಣದ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಲ್ಲ ಎಂದು ರೈಲ್ವೆ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ವಿವಿಧ ರೈಲ್ವೆ ಮೇಲ್ಸುತುವೆ ಕಾಮಗಾರಿಗೆ ಚಾಲನೆ ನೀಡಿ, ಚುನಾವಣೆಗೂ ಮೊದಲು ಪೆಟ್ರೋಲ್ ಡೀಸೆಲ್ ಬೆಲೆ ₹10 ಕಡಿಮೆ ಮಾಡ್ತೀವಿ ಅಂತ ಹೇಳಿದ ಸಿದ್ದರಾಮಯ್ಯ ಚುನಾವಣೆ ಗೆದ್ದ ಮೇಲೆ ₹10 ಜಾಸ್ತಿ ಮಾಡಿದ್ದೀರಿ. ಅಲ್ಲದೇ ಮೆಟ್ರೋ, ವಿದ್ಯುತ್, ಮದ್ಯ ಎಲ್ಲದರ ಬೆಲೆಯು ಗಗನಕ್ಕೇರಿದೆ ಎಂದರು. ನಂದಿನಿ ಹಾಲು, ಬಸ್ ದರ, ಸ್ಟ್ಯಾಂಪ್ ಡ್ಯೂಟಿ ಹೀಗೆ ಪ್ರತಿಯೊಂದನ್ನು ಜಾಸ್ತಿ ಮಾಡಿರುವ ಮುಖ್ಯಮಂತ್ರಿಗಳು ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ದೂರಿದರು.
ರೈಲ್ವೆ ಇಲಾಖೆಯಲ್ಲಿ ಏನೋ ಅಪಚಾರ ಮಾಡಿದಾರೆ ಅನ್ನೋ ರೀತಿ ಮಾತನಾಡಿದರೆ ನಾನೇ ನಿಮ್ಮ ಕಚೇರಿಗೆ ಬರುತ್ತೇನೆ. ಅಲ್ಲೇ ಮಾಧ್ಯಮದವರ ಮುಂದೆ ಸಂವಾದ ಮಾಡೋಣ ಎಂದು ಪಂಥಾಹ್ವಾನ ನೀಡಿದರು. 500 ಕಿ.ಮೀ ವರೆಗೂ 1 ಪೈಸೆನೂ ರೈಲ್ವೆ ಇಲಾಖೆ ದರ ಹೆಚ್ಚಳ ಮಾಡಿಲ್ಲ ಎಂದ ಸೋಮಣ್ಣ, ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ 10 ಪೈಸೆ ಹೆಚ್ಚಳ ಮಾಡಿದ್ದರು. ನಾನು ಜನರಿಗೆ ಹೊರೆಯಾಗುವಷ್ಟು ಹೆಚ್ಚಳ ಮಾಡಿಲ್ಲ. ನಾನ್ ಎಸಿಗೆ 1 ಪೈಸೆ, ಎಸಿಗೆ 2 ಪೈಸೆ ಜಾಸ್ತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಶುಕ್ರವಾರ ವಿಧಾನಸೌಧದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸಭೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಯೋಜನೆ ಅವೈಜ್ಞಾನಿಕವಾಗಿದೆ ಅನ್ನೋದನ್ನು ಮನದಟ್ಟು ಮಾಡುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ತಿಳಿಸಿದರು.
ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯನವರು ರೈಲ್ವೆ ದರ ಹೆಚ್ಚಾಗಿದೆ. ಇದನ್ನು ವಾಪಸ್ ತೆಗೆದುಕೊಳ್ಳಿ ಎಂದು ಟ್ವೀಟ್ ಮಾಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆಗಿಂತ, ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿರುವುದು ಸಾಮಾನ್ಯ ಜನರಿಗೆ ಗೊತ್ತಿರುವಂತ ಸಂಗತಿಯಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಹೇಳಿದರು.ತಾಲೂಕಿನ ಬೆಣಚಿಗೆರೆ ರೈಲ್ವೆ ಗೇಟ್ ಅತ್ತಿರ ಎಲ್‌ಸಿ ಸಂಖ್ಯೆ 56ಕ್ಕೆ 36.71 ಕೋಟಿಗಳ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ಹಾಗೂ ನಿಟ್ಟೂರು ರೈಲ್ವೆ ಯಾರ್ಡ್ ಹತ್ತಿರ ಎಲ್‌ಸಿ ಸಂಖ್ಯೆ 59ಕ್ಕೆ 36.29 ಕೋಟಿ ರುಪಾಯಿಗಳ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಬಗ್ಗೆ ಮಾತಾನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರು ಅಧಿಕಾರಕ್ಕೆ ಬರುವಾಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇಂಧನ ಬೆಲೆಯನ್ನು 10 ರು. ಕಡಿಮೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು. ಅದರ ಬದಲಿಗೆ 3ರಿಂದ 5 ರು.ಗಳಿಗೆ ಹೆಚ್ಚಿಗೆ ಮಾಡಿದ್ದಾರೆ. ರಾಜ್ಯದಲ್ಲಿ ನಂದಿನಿ ಹಾಲು, ಮೆಟ್ರೋ ದರ, ಸರ್ಕಾರಿ ಇಲಾಖೆಯ ಸ್ಟಾಂಪ್ ಡ್ಯೂಟಿಗಳು, ಬಸ್ ದರ ಇನ್ನೂ ಮುಂತಾದವುಗಳ ಮೇಲೆ ದರ ಹೆಚ್ಚಿಗೆ ಮಾಡಿರುವುದರಿಂದ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ರೈಲ್ವೆ ದರವನ್ನು ಶೇ. 10 ರಷ್ಟು ಹೆಚ್ಚಿಗೆ ಮಾಡಿತ್ತು. ಈಗಿನ ನಮ್ಮ ಕೇಂದ್ರ ಸರ್ಕಾರ 500 ಕಿಲೋ ಮೀಟರ್ ನಂತರ ಒಂದು ಪೈಸೆ ಮಾತ್ರ ಹೆಚ್ಚಿಗೆ ಮಾಡಲಾಗಿದೆ. ಎಸಿ ಭೋಗಿಗಳಲ್ಲಿ ಪ್ರಯಾಣಿಸುವುದಕ್ಕೆ ಎರಡು ಪೈಸೆ ಹೆಚ್ಚಳ ಮಾಡಲಾಗಿದೆ ಎಂದರು.
ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ರೈಲ್ವೆ ಅಭಿವೃದ್ಧಿಯು ಆಧುನೀಕರಣಗೊಂಡಿದ್ದು, 136 ಮಾರ್ಗಗಳಲ್ಲಿ ವಂದೇ ಭಾರತ್ ರೈಲ್ವೆ ಸಂಚರಿಸುತ್ತಿದೆ. 30 ವರ್ಷ ಮೇಲ್ಪಟ್ಟಂತ ಹಳೆ ಭೋಗಿಗಳನ್ನು ಬದಲಿಸಿ ಸುಮಾರು 10 ಸಾವಿರ ಹೊಸ ಭೋಗಿಗಳನ್ನು ಬಿಡಲಾಗಿದೆ. ಈ ಹೊಸ ರಸ್ತೆ ಮೇಲ್ಸೇತುವೆಗಳ ನಿರ್ಮಾಣದಿಂದ ಪ್ರಯಾಣದ ಅವಧಿಯು ಕಡಿಮೆಯಾಗುವುದು. ಲೆವೆಲ್ ಕ್ರಾಸಿಂಗ್ ಗೇಟ್ ಗಳ ಬಳಿ ಹಾಗೂ ವಿಳಂಬ ತಪ್ಪುವುದು ಹಾಗೂ ಒಟ್ಟಾರೆ ರಸ್ತೆ ಮತ್ತು ರೈಲ್ವೆ ಸುರಕ್ಷತೆ ಹೆಚ್ಚುವ ಮೂಲಕ ಜನರಿಗೆ ಅನುಕೂಲವಾಗಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.