Council Election Karnataka: ರಾಜಕೀಯ ಕುತೂಹಲ ಹುಟ್ಟು ಹಾಕಿದ ನಡೆ : ನಿಖಿಲ್‌ಗೆ ಸಾರಥ್ಯ?

By Kannadaprabha News  |  First Published Nov 30, 2021, 1:05 PM IST
  • ರಾಜಕೀಯ ಕುತೂಹಲ ಹುಟ್ಟು ಹಾಕಿದ ನಡೆ - MLC Election ನಿಖಿಲ್‌ಗೆ ಸಾರಥ್ಯ?
  • ಜಿಲ್ಲೆಯಲ್ಲಿ ರಾಜಕೀಯ ನೆಲೆಗಾಗಿ ಎಚ್‌ಡಿಕೆ ತಂತ್ರ
  • ಸೋತ ಕ್ಷೇತ್ರದಲ್ಲೇ ಗೆಲುವು ಕಾಣಬೇಕೆಂಬ ಹಠ

ಮಂಡ್ಯ (ನ.30): ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Election) ಪರಾಭವಗೊಂಡ ಜೆಡಿಎಸ್‌ (JDS) ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kymaraswamy) ವಿಧಾನ ಪರಿಷತ್‌ ಚುನಾವಣಾ(MLC Election) ನಾಯಕತ್ವ ವಹಿಸಿ ಗೆಲುವಿಗೆ ಶ್ರಮಿಸುತ್ತಿರುವುದು ಹಲವು ರಾಜಕೀಯ ಕುತೂಹಲಗಳನ್ನು ಹುಟ್ಟು ಹಾಕಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ (BJP) ಚುನಾವಣಾ ಸಾರಥ್ಯವನ್ನು ಸಚಿವ ಕೆ.ನಾರಾಯಣ ಗೌಡ ವಹಿಸಿದ್ದು, ಜೆಡಿಎಸ್‌ನಲ್ಲಿ ಸಾಮೂಹಿಕ ನಾಯಕತ್ವ ಚಲಾವಣೆಯಲ್ಲಿದ್ದಂತೆ ಕಂಡು ಬಂದರೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy ) ನಿರ್ದೇಶನದ ಮೇರೆಗೆ ನಿಖಿಲ್‌ ಕುಮಾರಸ್ವಾಮಿ ಚುನಾವಣಾ ನೇತೃತ್ವ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಚುನಾವಣೆ ನೇತೃತ್ವ:  ಈಗಾಗಲೇ ಎಚ್‌.ಡಿ.ರೇವಣ್ಣ (HD Revanna) ಕುಟುಂಬದಲ್ಲಿ ಪ್ರಜ್ವಲ್‌ ರೇವಣ್ಣ (Prajwal Revanna) ಸಂಸದರಾಗಿದ್ದು, ಸೂರಜ್‌ ರೇವಣ್ಣ (Suraj Revanna) ಕೂಡ ವಿಧಾನ ಪರಿಷತ್‌ನತ್ತ ಮುಖ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ರಾಜಕೀಯ ನೆಲೆ ಕಲ್ಪಿಸುವ ಉದ್ದೇಶದಿಂದ ವಿಧಾನ ಪರಿಷತ್‌ ಚುನಾವಣೆಯ ನೇತೃತ್ವ ವಹಿಸಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.

Tap to resize

Latest Videos

undefined

ರಾಜ್ಯ ರಾಯಭಾರಿ:  ಜೆಡಿಎಸ್‌ ಅಭ್ಯರ್ಥಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌.ಅಪ್ಪಾಜಿ ಗೌಡ (N Appaji Gowda) ಅವರು ನಾಮಮಪತ್ರ ಸಲ್ಲಿಸುವ ಸಂದರ್ಭ ಜೆಡಿಎಸ್‌ನ ರಾಜ್ಯ ರಾಯಭಾರಿಯಂತೆ ಕಾಣಿಸಿಕೊಂಡ ನಿಖಿಲ್‌ ಕುಮಾರಸ್ವಾಮಿ ಆನಂತರವೂ ಚುನಾವಣಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 6 ಮಂದಿ ಶಾಸಕರಿದ್ದರೂ ಅವರೆಲ್ಲರೂ ಅವರವರ ಕ್ಷೇತ್ರದ ಮತದಾರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮತ್ತು ಜೆಡಿಎಸ್‌ಗೆ ಬಲ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಸಮಗ್ರ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುವ ಉತ್ಸಾಹ ಯಾರಲ್ಲೂ ಕಂಡು ಬರದ ಕಾರಣ ನಿಖಿಲ್‌ ಕುಮಾರ ಸ್ವಾಮಿ ಈ ಅವಕಾಶವನ್ನು ಬಳಸಿಕೊಂಡು ಚುನಾವಣಾ ಉಸ್ತುವಾರಿ (MLC Election In charge) ವಹಿಸಿದಂತೆ ಕಂಡು ಬಂದಿದ್ದಾರೆ.

ಚುನಾವಣಾ ತರಬೇತಿ: ಕಳೆದ ಲೋಕಸಭಾ ಚುನಾವಣಾ (Loksabha Election) ಸೋಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ತೀವ್ರ ಆಘಾತ ಉಂಟುಮಾಡಿದ್ದು, ಸಂಸದೆ ಸುಮಲತಾ ಅಂಬರೀಶ್‌ ಅವರ ದಾಳಿ ಕೂಡ ಕುಮಾರಸ್ವಾಮಿ ಅವರನ್ನು ವಿಚಲಿತಗೊಳಿಸಿದೆ. ಯಾವ ಮಂಡ್ಯ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದರೋ ಅದೇ ಕ್ಷೇತ್ರದಲ್ಲಿ ಗೆಲುವನ್ನು ಕಾಣುವ ಹಠದಿಂದಲೇ ನಿಖಿಲ್‌ ಕುಮಾರಸ್ವಾಮಿಗೆ ಚುನಾವಣಾ ತರಬೇತಿ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

2023ರ ಚುನಾವಣಾ ಪೂರ್ವದಲ್ಲೇ ಪಕ್ಷಾಂತರ ಪ್ರಕ್ರಿಯೆ ಆರಂಭಗೊಂಡಿದ್ದು, ಮಂಡ್ಯ ಜೆಡಿಎಸ್‌ ಕೂಡ ಇದರಿಂದ ಹೊರತಾಗಿಲ್ಲ. ಒಂದೆರಡು ಕ್ಷೇತ್ರಗಳಲ್ಲಿ ಹಾಲಿ ಜೆಡಿಎಸ್‌ ಶಾಸಕರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆಗಳಿದ್ದು, ಆ ಕ್ಷೇತ್ರಗಳ ಮೂಲಕ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮುನ್ನೆಲೆಗೆ ತರುವ ಪೂರ್ವಭಾವಿ ಪ್ರಯತ್ನ ಇದಾಗಿದೆ ಎಂದು ಹೇಳಲಾಗುತ್ತಿದೆ.

ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಮತ್ತವರ ಪತ್ನಿ, ಶಾಸಕರಾದ ಡಿ.ಸಿ.ತಮ್ಮಣ್ಣ ಮತ್ತು ರವೀಂದ್ರ ಶ್ರೀಕಂಠಯ್ಯ ಅವರೊಂದಿಗೆ ಚುನಾವಣಾಧಿಕಾರಿ ಕಚೇರಿ ಪ್ರವೇಶಿಸುವುದರೊಂದಿಗೆ ಚುನಾವಣಾ ಸಾರಥ್ಯ ವಹಿಸುವ ಸುಳಿವನ್ನು ನೀಡಿರುವ ನಿಖಿಲ್‌ ಕುಮಾರಸ್ವಾಮಿ ವಿಧಾನಪರಿಷತ್‌ ಚುನಾವಣೆ ಮುಗಿಯುವವರೆಗೆ ಮಂಡ್ಯದಲ್ಲೇ ಉಳಿದು ಕುಮಾರಸ್ವಾಮಿ ಅವರು ನೀಡಿರುವ ಸಲಹೆ ಮೇರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗುರುತಿಸಿಕೊಳ್ಳುವ ಪ್ರಯತ್ನ:  ವಿಧಾನ ಪರಿಷತ್‌ ಚುನಾವಣಾ ಪ್ರಚಾರದಲ್ಲೂ ಎಲ್ಲೆಡೆ ಕಾಣಿಸಿಕೊಳ್ಳುವ ಮೂಲಕ ಜನರ ಬಳಿ ಗುರುತಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆಯಾಯ ಕ್ಷೇತ್ರದ ಶಾಸಕರು, ಚುನಾವಣಾ ಅಭ್ಯರ್ಥಿಯೊಂದಿಗೆ ಪ್ರಚಾರಕ್ಕೆ ತೆರಳಿ ನಾಯಕತ್ವ ಬೆಳೆಸಿಕೊಳ್ಳುವ ಪ್ರಯತ್ನಗಳನ್ನು ಒಳಗಿಂದೊಳಗೇ ನಡೆಸುತ್ತಿದ್ದಾರೆ ಎನ್ನಲಾಗಿದೆ.

2023ರ ಚುನಾವಣೆ ವೇಳೆಗೆ ಜಿಲ್ಲೆಯ ನಾಯಕತ್ವದ ಮೇಲೆ ಹಿಡಿತ ಸಾಧಿಸಿ ಯಾವುದಾದರೊಂದು ಕ್ಷೇತ್ರದಿಂದ ಆಯ್ಕೆಯಾಗಬೇಕೆಂಬ ಹಂಬಲದೊಂದಿಗೆ ವಿಧಾನಪರಿಷತ್‌ ಚುನಾವಣೆಯನ್ನು ತಮ್ಮ ರಾಜಕೀಯ ಬೆಳವಣಿಗೆಯ ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

click me!