ರಾಜ್ಯದಲ್ಲಿ ಗ್ಯಾರಂಟಿ ನಂಬಿಕೊಂಡು 136 ಸೀಟು ಗೆಲ್ಲಿಸಿದ ಜನತೆಗೆ ನೀರಿನ ದರ ಹೆಚ್ಚಳ ಮಾಡುವುದು ಉಪಕಾರ ಸ್ಮರಣೆಯೇ.? ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು (ಆ.23); ಕಾಂಗ್ರೆಸ್ ಗ್ಯಾರಂಟಿಗಳನ್ನು ನಂಬಿಕೊಂಡು 136 ಸ್ಥಾನಗಳನ್ನು ಗೆಲ್ಲಿಸಿದ ಜನರಿಗೆ ಈಗಾಗಲೇ ಪೆಟ್ರೋಲ್, ಡೀಸೆಲ್, ಹಾಲಿನ ದರ ಹೆಚ್ಚಳದ ಬೆನ್ನಲ್ಲಿಯೇ ನೀರಿನ ದರ ಹೆಚ್ಚಳ ಮೂಲಕ ಬರೆ ಎಳೆಯಲು ಮುಂದಾಗಿದೆ. ಇದೇ ನಿಮ್ಮ ಉಪಕಾರ ಸ್ಮರಣೆಯಾ.? ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಚನ್ನಪಟ್ಟಣದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀರಿನ ದರ ಏರಿಕೆ ಬಗ್ಗೆ ಮಾತನಾಡಿದ್ದಾರೆ. ಕಳೆದ 10 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ ) ಸಂಕಷ್ಟದಲ್ಲಿದ್ದು, ಅದಕ್ಕೆ ಶಕ್ತಿ ತುಂಬಲು ದರ ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಈಗಾಗಲೇ ರಾಜ್ಯದ ಜನತೆಗೆ ಒಂದುಕಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಬರೆ ಎಳೆಯಲಾಗಿದೆ. ಮತ್ತೊಂದೆಡೆ ಹಾಲಿನ ದರ ಏರಿಕೆ ಬರೆ ಹಾಕಲಾಗಿದೆ. ಇದರಲ್ಲಿ ಹಾಲಿನ ಹೆಚ್ಚುವರಿ ದರದ ಹಣವನ್ನು ರೈತರಿಗೂ ಕೊಡುತ್ತಿಲ್ಲ. ಹೀಗಿರುವಾಗ ಪುನಃ ನೀರಿದ ದರ ಹೆಚ್ಚಳ ಮಾಡಿ ಬರೆ ಎಳೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೀಲ್ಸ್ ನೋಡಿ ಮದುವೆಯಾದ ಗಂಡ 8 ತಿಂಗಳಿಗೆ ಹೆಂಡತಿಯ ಹೆಣ ಹಾಕಿದ!
ಬೆಂಗಳೂರು ನಾಗರೀಕರ ಬಗ್ಗೆ ಡಿಸಿಎಂ ಲಘುವಾಗಿ ಮಾತಮಾಡಿದ್ದಾರೆ. ಬೆಂಗಳೂರಿಗರಿಗೆ ಉಪಕಾರ ಸ್ಮರಣೆ ಇಲ್ಲ ಎಂದು ಹೇಳಿದ್ದಾರೆ. ಡಿಕೆಶಿಗೆ ನಾನು ಒಂದು ಪ್ರಶ್ನೆ ಕೇಳ್ತೇನೆ. 136 ಜನ ಶಾಸಕರನ್ನ ಗೆಲ್ಲಿಸಿದಾಗ ಉಪಕಾರ ಸ್ಮರಣೆ ಇತ್ತಾ.? ಬೆಂಗಳೂರಿನಲ್ಲಿ 12 ಮಂದಿ ಶಾಸಕರನ್ನ ಗೆಲ್ಲಿಸಿದಾಗ ಉಪಕಾರ ಸ್ಮರಣೆ ಇತ್ತಾ.? ಜನಾಭಿಪ್ರಾಯ ಜೊತೆಯಲ್ಲಿ ಇದ್ದಾಗ ಎಲ್ಲವೂ ಸರಿ. ಲೋಕಸಭಾ ಚುನಾವಣೆ ಬಳಿಕ ಈ ರೀತಿಯ ಲಘುವಾಗಿ ಮಾತನಾಡೋದು ಅವರ ಸ್ಥಾನಕ್ಕೆ ಶೋಭೆ ತರಲ್ಲ. ಜನ ಆಶಿರ್ವಾದ ಮಾಡಿದ್ದಾರೆ, ಅದಕ್ಕೆ ತಕ್ಕನಾಗಿ ನಡೆದುಕೊಳ್ಳಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ 136 ಸ್ಥಾನ ಎಲ್ಲಿಗೆ ಬಂದು ನಿಲ್ಲುತ್ತೋ ನೋಡಿಕೊಳ್ಳಿ ಎಂದು ಡಿಸಿಎಂ ಡಿಕೆಶಿವಕುಮಾರ್ ಅವರಿಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಇನ್ನು ಸಂದರ್ಭ ಬಂದರೆ ಕುಮಾರಸ್ವಾಮಿ ಬಂಧನ ಮಾಡುತ್ತೇವೆ ಎಂದ ಸಿಎಂ ಹೇಳಿಕೆ ಬಗ್ಗೆ ಮಾತನಾಡಿ, ಇದು ರಾಜಕೀಯ ಷಡ್ಯಂತ್ರ, ರಾಜ್ಯದ ಜನ ಇದನ್ನ ಗಮನಿಸುತ್ತಿದ್ದಾರೆ. ವೆಂಕಟೇಶ್ವರ ಮೈನಿಂಗ್ ಕುಮಾರಸ್ವಾಮಿ ಅನುಮತಿ ಕೊಟ್ರು ಅಂತ ಆರೋಪ ಇದೆ. ಈ ಬಗ್ಗೆ 2017ರಲ್ಲೇ ಕುಮಾರಣ್ಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮುಡಾ, ವಾಲ್ಮೀಕಿ ಹಗರಣದ ಬಗ್ಗೆ ನಾವು ಪಾದಯಾತ್ರೆ ಮಾಡಿದ್ದೇವೆ. ಆಡಳಿತ ಪಕ್ಷವೇ ವಿಪಕ್ಷಗಳನ್ನ ಪ್ರಶ್ನೆ ಮಾಡುವ ಪರಿಸ್ಥಿತಿ ಬಂದಿದೆ. ಇದು ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸ. ಕುಮಾರಸ್ವಾಮಿ ಅವರು ಯಾವುದೇ ಕಡತಕ್ಕೂ ಸಹಿ ಹಾಕಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಪ್ರಾಸಿಕ್ಯೂಷನ್ ಕೊಡುವ ಅಗತ್ಯ ಇಲ್ಲ. ಸುಪ್ರೀಂ ಕೋರ್ಟ್ ಎಸ್ಐಟಿ, ಲೋಕಾಯುಕ್ತಕ್ಕೆ ಡೈರೆಕ್ಷನ್ ಕೊಟ್ಟಮೇಲೆ ಪ್ರಾಸಿಕ್ಯೂಷನ್ ಗೆ ಯಾಕೆ ಅನುಮತಿ ಕೊಡಬೇಕು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ಜಿಂದಾಲ್‌ಗೆ ಭೂಮಿ ಕೊಡುವಲ್ಲಿ ಸರ್ಕಾರದ್ದು ಎಳ್ಳಷ್ಟೂ ತಪ್ಪಿಲ್ಲ: ಎಂ. ಬಿ. ಪಾಟೀಲ
ಲೋಕಸಭಾ ಚುನಾವಣೆ ಬಳಿಕ ಹಳೇ ಮೈಸೂರು ಭಾಗದ ಫಲಿತಾಂಶ ಕಾಂಗ್ರೆಸ್ ನಿದ್ದೆಗೆಡಿಸಿದೆ. ಹಾಸನ ಹೊರತು ಪಡಿಸಿ ಬಹುತೇಕ ಕ್ಷೇತ್ರಗಳು ಮೈತ್ರಿ ಪಕ್ಷದ ಪಾಲಾಗಿದೆ. ರಾಜ್ಯದ ಜನತೆ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದ್ದಾರೆ. ಬಹುಶಃ ಇದು ಕಾಂಗ್ರೆಸ್ ನವರಿಗೆ ಹತಾಶೆ ತರಿಸಿದೆ. ಹಾಗಾಗಿ ಈ ರೀತಿಯ ಹೇಳಿಕೆ ಕೊಡ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.