ವಿಜಯನಗರ ಜಿಲ್ಲೆ ನೂತನ ಜಿಲ್ಲೆಯಾಗಿದೆ. ಮುಂದಿನ ಕೆಡಿಪಿ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಲಾಗುವುದು. ಹಾಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು.
ಹೊಸಪೇಟೆ (ಜ.26): ವಿಜಯನಗರ ಜಿಲ್ಲೆ ನೂತನ ಜಿಲ್ಲೆಯಾಗಿದೆ. ಮುಂದಿನ ಕೆಡಿಪಿ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಲಾಗುವುದು. ಹಾಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಯಾವುದೇ ಲೋಪ- ದೋಷ ಕಂಡುಬಂದಲ್ಲಿ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಮಾಡಬೇಕು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಅಧಿಕಾರಿ ಸಸ್ಪೆಂಡ್ ಮಾಡಿ: ನೀರಾವರಿ ಇಲಾಖೆಯ ಅಧಿಕಾರಿ ಶಿವಮೂರ್ತಿ ಸಭೆಗೆ ಗೈರಾಗಿದ್ದಾರೆ. ಕೂಡಲೇ ಕ್ರಮವಹಿಸಬೇಕು. ಕೆಡಿಪಿ ಸಭೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರೂ ಸಭೆಗೆ ಬರಲ್ಲ ಎಂದರೇ ಏನು ಅರ್ಥ? ಈ ಅಧಿಕಾರಿ ವಿರುದ್ಧ ಕ್ರಮವಹಿಸಬೇಕು ಎಂದು ಸೂಚಿಸಿದರು.
ಲೋಕಸಭೆ ಸಂದರ್ಭದಲ್ಲಿ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ ಬೆಳವಣಿಗೆ ಸರಿಯಲ್ಲ: ಜನಾರ್ದನ ಪೂಜಾರಿ
ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಕೆ. ನೇಮರಾಜ್ ನಾಯ್ಕ ಮಾತನಾಡಿ, ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯ, ಚಿಲವಾರ ಬಂಡಿ ಏತ ನೀರಾವರಿ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಅನುದಾನ ಬಂದಿದ್ದರೂ ಗುತ್ತಿಗೆದಾರ ಕಂಪನಿ ಪೂರ್ಣಗೊಳಿಸುತ್ತಿಲ್ಲ. ರೈತರಿಗೆ ನೀರು ಕೊಡಬೇಕು. ಆದರೆ, ಅಧಿಕಾರಿಗಳ ತಪ್ಪಿನಿಂದಾಗಿ ಈಗ ನೀರು ಕೊಡಲು ಆಗುತ್ತಿಲ್ಲ. ನಾವು ಎಷ್ಟು ಬಾರಿ ಹೇಳಿದರೂ ನೀರಾವರಿ ಇಲಾಖೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಹೀಗಾದರೆ ಹೇಗೆ? ರೈತರಿಗೆ ನಾವು ಹೇಗೆ ಉತ್ತರ ಕೊಡಬೇಕು.
ಸರ್ಕಾರದ ಹಣ ಪೋಲಾಗದಂತೆ ಕ್ರಮವಹಿಸಬೇಕು. ನೀರಾವರಿ ಇಲಾಖೆ ಅಧಿಕಾರಿ ಶಿವಮೂರ್ತಿ ಸಭೆಗೆ ಬಂದಿಲ್ಲ. ಹಾಗಾದರೆ ಶಾಸಕರು, ಸಚಿವರು, ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಚಿವರು ಮಧ್ಯಪ್ರವೇಶಿಸಿ, ಕೂಡಲೇ ಈ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಬೇಕು. ರೈತರ ಪರ ಕೆಲಸ ಮಾಡಬೇಕು. ನೀರಾವರಿ ಇಲಾಖೆ ಅಧಿಕಾರಿ ಶಿವಮೂರ್ತಿಯವರನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರಿಗೆ ಸೂಚಿಸಿದರು.
ಶಾಲೆಗಳಲ್ಲಿ ಶೌಚಾಲಯ ಕಟ್ಟಿ: ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಕಟ್ಟುತ್ತೇವೆ. ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ಸಭೆಯಲ್ಲಿ ವರದಿ ಕೊಡುತ್ತ ಹೋಗುವುದು ಸರಿಯಲ್ಲ ಎಂದು ಸಂಸದ ವೈ. ದೇವೇಂದ್ರಪ್ಪ ಅವರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ನೀಡಿದ ನಿರ್ದೇಶನದಂತೆ ಪ್ರತಿಯೊಂದು ಶಾಲೆಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ಕೊಡಲು ಕ್ರಮ ವಹಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಕಾರ್ಖಾನೆಗಳಿಗೆ ನೀರು ಕೊಡಬೇಡಿ: ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜ ನಾಯ್ಕ ಮಾತನಾಡಿ, ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳಿಗೆ ನೀರು ಬಿಡಬಾರದು. ಕೆಲ ಕಾರ್ಖಾನೆಗಳು ಪೈಪ್‌ಲೈನ್ ಕಾಣದಂತೆ ಮುಚ್ಚಿಟ್ಟು ನೀರು ಪಡೆಯುತ್ತಿವೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಈ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ಕಾರ್ಖಾನೆಗಳಿಗೆ ನವೆಂಬರ್‌ನಿಂದ ನೀರು ಬಿಡುತ್ತಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸಬೇಕಿದೆ. ಕಿರ್ಲೋಸ್ಕರ್ ಕಾರ್ಖಾನೆ ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದು ನೀರು ಪಡೆಯುತ್ತಿದೆ. ಈ ಬಗ್ಗೆಯೂ ಕ್ರಮವಹಿಸಲಾಗುವುದು ಎಂದರು.
ಮೀನುಗಾರಿಕೆ ಇಲಾಖೆ ನಿಷ್ಕ್ರಿಯ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೀನುಗಾರಿಕೆ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಕ್ಷೇತ್ರದಲ್ಲಿ ಕಂದುರೋಗ ಮತ್ತು ಕಾಲುಬಾಯಿ ಲಸಿಕೆಗೆ ಸಮರ್ಪಕ ವ್ಯವಸ್ಥೆ ಮಾಡಬೇಕು. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನಿಗದಿಪಡಿಸಿ ಪಶು ಚಿಕಿತ್ಸಾಲಯಗಳ ನಿರ್ಮಾಣಕ್ಕೆ ಒತ್ತು ಕೊಡಬೇಕು ಎಂದರು.
ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಸಂಕಲ್ಪಿಸಿ: ಎಚ್.ಡಿ.ದೇವೇಗೌಡ ಮನವಿ
ಮಟ್ಕಾ ದಂಧೆಗೆ ಕಡಿವಾಣ ಹಾಕಿ: ಜಿಲ್ಲೆಯಲ್ಲಿ ಮಟ್ಕಾ ಹಾವಳಿ ಜಾಸ್ತಿಯಾಗಿದೆ. ಮಟ್ಕಾ ಬುಕ್ಕಿಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಜಿಲ್ಲಾ ಪೊಲೀಸರು ಮಟ್ಕಾ ದಂಧೆ ಕಡಿವಾಣಕ್ಕೆ ಕ್ರಮ ವಹಿಸಬೇಕು ಎಂದು ಎಸ್ಪಿ ಶ್ರೀಹರಿಬಾಬು ಅವರಿಗೆ ಸಚಿವರು ಸೂಚಿಸಿದರು. ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಸಂತೆಗಳಲ್ಲಿ ದನಗಳ ಮಾರಾಟ ಹೆಚ್ಚುತ್ತಿದೆ. ಜಾನುವಾರು ಪಾಲನೆ ಜನರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ ಮೇವು ಬ್ಯಾಂಕ್ ಸ್ಥಾಪನೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ಮಾಡಿದರು. ಕ್ಷೇತ್ರದಲ್ಲಿ ಪಶುವೈದ್ಯಾಧಿಕಾರಿಗಳ ಕೊರತೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಎಚ್.ಆರ್. ಗವಿಯಪ್ಪ, ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನರಾಜ್ ಸಿಂಗ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿಬಾಬು, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಷಲನ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಹಾಯಕ ಆಯುಕ್ತ ಮಹದ್ ಅಲಿ ಅಕ್ರಮ್ ಶಾ ಮತ್ತಿತರರಿದ್ದರು.