
ಬೆಂಗಳೂರು (ಮೇ.8) : ಪ್ರಧಾನ ಮಂತ್ರಿ ಮೋದಿ ಅವರು ಕರ್ನಾಟಕದಲ್ಲಿಯೇ ಠಿಕಾಣಿ ಹೂಡಿ ಬಾಯ್ತುಂಬಾ ಮಾತನಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿನ 40 ಪರ್ಸೆಂಟ್ ಭ್ರಷ್ಟಾಚಾರ, ನಿರುದ್ಯೋಗ, ಜಾಗತಿಕ ವಾಸಯೋಗ್ಯ ಸೂಚ್ಯಂಕ ಕುಸಿತ, ಉದ್ಯಮಶೀಲ ಸ್ಥಾನ ಕುಸಿತ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪತ್ರಿಕಾ ಹೇಳಿಕೆ ಮೂಲಕ ಸರಣಿ ಪ್ರಶ್ನೆ ಕೇಳಿರುವ ಅವರು, ಕಾಂಗ್ರೆಸ್ ಅವಧಿಯಲ್ಲಿ ಉದ್ಯಾನಗಳ ನಗರ, ಸಿಲಿಕಾನ್ ಸಿಟಿ, ಐಟಿ-ಬಿಟಿ ರಾಜಧಾನಿ, ಸ್ಟಾರ್ಚ್ ಅಪ್ ರಾಜಧಾನಿ ಎಂದೆಲ್ಲ ಖ್ಯಾತಿ ಗಳಿಸಿದ್ದ ಬೆಂಗಳೂರು ಈಗ ಗುಂಡಿಬಿದ್ದ ರಸ್ತೆಗಳು, ನೆರೆ ನೀರಿನಲ್ಲಿ ಮುಳುಗುವ ಮನೆಗಳು, ಅಪರಾಧಿಗಳ ಜಗತ್ತಿನ ರಾಜಧಾನಿ ಎಂಬ ಕುಖ್ಯಾತಿ ಗಳಿಸಿದೆ. ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ನಗರ ಉದ್ಯಮಶೀಲರ ಆಸಕ್ತಿಯ ನಂಬರ್ ಒನ್ ತಾಣವಾಗಿತ್ತು. ಬಿಜೆಪಿ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಮಶೀಲರ ಆಸಕ್ತಿಯ ನಗರಗಳ ಪಟ್ಟಿಯಲ್ಲಿ ಹದಿನೇಳನೇ ಸ್ಥಾನಕ್ಕೆ ಕುಸಿದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.
ಡಿಕೆಶಿ- ಸಿದ್ದರಾಮಯ್ಯ ಮನದಾಳದ ಮಾತು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ದಿಗ್ಗಜರು!
ಅಪರಾಧ ಸಂಖ್ಯೆಗಳ ಹೆಚ್ಚಳ, ಕುಸಿದುಬಿದ್ದಿರುವ ಮೂಲಸೌಕರ್ಯ ವ್ಯವಸ್ಥೆ ಮತ್ತು ಗುಂಡಿಬಿದ್ದ ರಸ್ತೆಗಳಿಂದಾಗಿ ಜಾಗತಿಕ ವಾಸಯೋಗ್ಯ ಸೂಚ್ಯಂಕದಲ್ಲಿ ಬೆಂಗಳೂರು ಕನಿಷ್ಠ ಶ್ರೇಣಿಗೆ ತಲುಪಿದೆ. ಕಳೆದ ಮೂರು ವರ್ಷಗಳಲ್ಲಿ ಕೇವಲ ಗುಂಡಿಬಿದ್ದ ರಸ್ತೆಗಳಿಂದಾಗಿ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಕೇವಲ ರಸ್ತೆ ಗುಂಡಿಮುಚ್ಚಲು 7,121 ಕೋಟಿ ರು. ಖರ್ಚು ಮಾಡಿದೆ. ಶೇ.48 ರಷ್ಟುವಾಹನದಟ್ಟಣೆಯೊಂದಿಗೆ ದೇಶದಲ್ಲೇ ಎರಡನೇ ಹೆಚ್ಚು ವಾಹನದಟ್ಟಣೆಯ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಈ ಬಗ್ಗೆ ಯಾಕೆ ಪ್ರಸ್ತಾಪಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಎನ್‌ಸಿಆರ್‌ಬಿ ವರದಿ(NCRB report) ಪ್ರಕಾರ ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ನಡೆಯುವ ಅಪರಾಧಗಳ ಪೈಕಿ 72% ಕಳ್ಳತನಗಳು ಬೆಂಗಳೂರು ನಗರದಲ್ಲೇ ನಡೆಯುತ್ತಿವೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಮೇಲಿನ ದೌರ್ಜನ್ಯದ ಪ್ರಮಾಣ 2021ರಲ್ಲಿ ಶೇಕಡಾ 18ರಷ್ಟುಹೆಚ್ಚಾಗಿದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಲಾಗಿರುವ ಮೇಕೆದಾಟು ಯೋಜನೆಗೆ ಅನುಮತಿ ನೀಡದ ಕಾರಣದಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ. ನಗರದ ಜನ ಕುಡಿಯುವ ನೀರಿಗಾಗಿ ಖಾಸಗಿ ಬೋರ್‌ವೆಲ್ ಹಾಗೂ ಟ್ಯಾಂಕರ್ ನೆಚ್ಚಿಕೊಳ್ಳುವಂತಾಗಿದೆ. ಇಷ್ಟಾದರೂ ಮೋದಿ ಯಾಕೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭ್ರಷ್ಟತೆ ಬಗ್ಗೆ ಮೋದಿ ಮೌನ, ಮೊದಲು 40% ಬಗ್ಗೆ ಮಾತಾಡ್ಲಿ: ರಾಹುಲ್ ಗಾಂಧಿ ಕಿಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.