ಅಮುಲ್- ನಂದಿನಿ ವಿಲೀನ ಹುನ್ನಾರ ವಿರೋಧಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ನಂದಿನಿ ಉತ್ಪನ್ನಗಳ ಖರೀದಿಸುವ ಅಭಿಯಾನವನ್ನು ರಾಜ್ಯವ್ಯಾಪಿ ಆರಂಭಿಸಲಾಗುವುದು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.
ಮೈಸೂರು (ಏ.10) : ಅಮುಲ್- ನಂದಿನಿ ವಿಲೀನ ಹುನ್ನಾರ ವಿರೋಧಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ನಂದಿನಿ ಉತ್ಪನ್ನಗಳ ಖರೀದಿಸುವ ಅಭಿಯಾನವನ್ನು ರಾಜ್ಯವ್ಯಾಪಿ ಆರಂಭಿಸಲಾಗುವುದು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್(Dr Pushpa amaranath) ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಪೋಸ್ಟರ್ ಅನಾವರಣಗೊಳಿಸಿ, ನಂದಿನಿ ಹಾಲಿನ ಪ್ಯಾಕೆಟ್(Nandini milk) ಪ್ರದರ್ಶಿಸಿಸಿ ಮಾತನಾಡಿದ ಅವರು, ನಂದಿನಿ ಕರ್ನಾಟಕ(Karnataka)ದ ಹೆಮ್ಮೆ. ನಮ್ಮ ಅಸ್ಮಿತೆ. ನಂದಿನಿ ಉತ್ಪನ್ನಗಳಿಗೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್(Puneeth Rajkumar) ರಾಯಭಾರಿಯಾಗಿದ್ದರು. ಕೆಎಂಎಫ್(KMF) ನಮ್ಮ ಮಗು. ಅದನ್ನು ಬೆಳೆಸಿ ದೊಡ್ಡದು ಮಾಡಿದ್ದೇವೆ. ಈಗ ಆ ಸಂಸ್ಥೆಗೆ ಬಿಜೆಪಿಯವರಿಂದ ಅಪಾಯ ಬಂದಿದೆ ಎಂದು ಆರೋಪಿಸಿದರು.
ಬೆಲೆ ಏರಿಕೆಯೇ ಬಿಜೆಪಿ ಮಾಡಿರೋ ದೊಡ್ಡ ಸಾಧನೆ: ಜೆ.ಟಿ.ಪಾಟೀಲ
ಮೈಸೂರು(Mysuru) ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ಸಿನ 2 ಸಾವಿರ ಸದಸ್ಯರಿದ್ದಾರೆ. ಅವರೆಲ್ಲರೂ ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸೆಲ್ಫಿ ಕ್ಲಿಕ್ಕಿಸುವ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ನಂದಿನಿ ಉಳಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಲೀಟರ್ ಹಾಲಿಗೆ . 5 ಪ್ರೋತ್ಸಾಹ ಧನ ನೀಡಿದರು. ಪ್ರೋತ್ಸಾಹದಿಂದ ಹಾಲು ಶೇಖರಣೆ ಹೆಚ್ಚಾದಾಗ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದು ಶಾಲಾ ಮಕ್ಕಳಿಗೆ ಕುಡಿಯಲು ಹಾಲು ಕೊಟ್ಟರು. ಬಿಜೆಪಿ ಏನು ಮಾಡಿದೆ ಎಂದು ಅವರು ಪ್ರಶ್ನಿಸಿದರು.
ಲಾಭದಲ್ಲಿರುವ ಉದ್ದಿಮೆಗಳು, ರೈಲ್ವೆ, ವಿಮಾನ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದರು. ಅಮುಲ್ ಜೊತೆ ನಂದಿನಿ ವಿಲೀನ ಮಾಡುವ ಬಿಜೆಪಿಯನ್ನು ಜನರು ಧಿಕ್ಕರಿಸಬೇಕು. ಕೆಎಂಎಫ್ ಮುಗಿಸುವ ಸಂಚನ್ನು ಗೃಹಿಣಿಯರು ಬೀದಿಗಿಳಿದು ಖಂಡಿಸಬೇಕು. ಈ ವಿಚಾರವಾಗಿ ಬಿಜೆಪಿ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಬೇಕು. ಮೇ 10 ರಂದು ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ನಂದಿನಿ ಉಳಿಸುವ ಹೋರಾಟಕ್ಕೆ ಅವಕಾಶ ಕೊಡಬೇಕು ಎಂದು ಅವರು ಮನವಿ ಮಾಡಿದರು.
ಮೋದಿ ಫೋಟೋ ಶೂಟ್
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೂರದೃಷ್ಟಿಮತ್ತು ಬದ್ಧತೆಯಿಂದ 1973 ಏಪ್ರಿಲ್ 1 ರಂದು ಹುಲಿ ಯೋಜನೆ ಜಾರಿಗೊಳಿಸಿದರು. ಈ ಯೋಜನೆಯ ಸುವರ್ಣ ಮಹೋತ್ಸವ ಆಚರಿಸಿದ ಪ್ರಧಾನಿ ಮೋದಿಯವರು ಫೋಟೋ ಶೂಟ್ ನಡೆಸಿದ್ದಾರೆ ಎಂದು ಅವರು ಟೀಕಿಸಿದರು.
ನೆರೆ ಬಂದಾಗ ಬರಲಿಲ್ಲ. ಸೂಳ್ವಾಡಿ ದುರಂತದಲ್ಲಿ ಜನರು ಮೃತಪಟ್ಟಾಗ, ಆಕ್ಸಿಜನ್ ಇಲ್ಲದೇ ಜನರು ಮೃತಪಟ್ಟಾಗಲೂ ಬರಲಿಲ್ಲ. ಚುನಾವಣೆ ಬಂದಿದೆಂದು ಹತ್ತಾರು ಭೇಟಿ ಕೊಟ್ಟಿದ್ದಾರೆ. ಅವರ ಭೇಟಿಯಿಂದ ಕೋಟ್ಯಂತರ ರೂಪಾಯಿ ಜನರ ತೆರಿಗೆ ಹಣ ವ್ಯಯವಾಗುತ್ತಿದೆ. ಅವರು ಚುನಾವಣೆ ಮುಗಿಯುವ ತನಕ ಕರ್ನಾಟಕದಲ್ಲಿಯೇ ಮನೆ ಮಾಡಿಕೊಂಡು ಇರಲಿ ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರತಿಪಕ್ಷಗಳ ನಾಯಕರು ಟೀಕಿಸುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ. ವಿಧಾನಸಭೆ ಮತ್ತು ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಶೇ. 50 ಮಹಿಳಾ ಮೀಸಲಾತಿ ನೀಡದೇ ಯಾವ ರಾಜಕೀಯ ಪಕ್ಷಗಳೂ ಮಹಿಳೆಯರಿಗೆ ಟಿಕೆಟ್ ಕೊಡುವುದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಕೊಟ್ಟರಾಜಕೀಯ ಮೀಸಲಾತಿಯನ್ನು ವಿಸ್ತರಿಸಬೇಕಿದೆ. 2014ರಲ್ಲಿ ಬಿಜೆಪಿ ನೀಡಿದ್ದ ಮಹಿಳಾ ಮೀಸಲಾತಿ ಜಾರಿಗೊಳಿಸುವ ಭರವಸೆಯನ್ನು ಮರೆತಿದೆ. ಉಳಿದ ಪಕ್ಷಗಳಿಗಿಂತ ಕಾಂಗ್ರೆಸ್ ಹೆಚ್ಚು ಮಹಿಳೆಯರಿಗೆ ಟಿಕೆಟ್ ಕೊಡಲಿದೆ ಎಂದು ಅವರು ತಿಳಿಸಿದರು.
ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಸುಶೀಲಾ ಕೇಶವಮೂರ್ತಿ, ರಾಧಾಮಣಿ, ಲತಾ ಮೋಹನ್, ಮಂಜುಳಾ, ಕಮಲಮ್ಮ ಮೊದಲಾದವರು ಇದ್ದರು.
ಸಿದ್ದರಾಮಯ್ಯರನ್ನು ಟೀಕಿಸುವ ಯೋಗ್ಯತೆ ಇಲ್ಲ
ಕುರಿ ಚರ್ಬಿ ತಿಂದು ಸಿದ್ದರಾಮಯ್ಯ(Siddaramaiah) ಕೊಬ್ಬಿದ್ದಾರೆಂಬ ಸಂಸದ ಪ್ರತಾಪ್ ಸಿಂಹ(Pratap simha MP) ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಸಂಸದರು ಮಾತಾಡುವ ಮುನ್ನ ನಾಲಿಗೆ ಮೇಲೆ ಹಿಡಿತ ಇರಬೇಕು. ಅವರನ್ನು ಟೀಕಿಸುವ ಯೋಗ್ಯತೆ ಮತ್ತು ಅರ್ಹತೆಯೂ ಇಲ್ಲ. ಅವರು ಸಿದ್ದರಾಮಯ್ಯ ಉಗುರಿಗೂ ಸಮರಲ್ಲ ಎಂದು ತಿರುಗೇಟು ನೀಡಿದರು.
ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗ್ತಿದ್ದವರು ನೀವು: ಸಿದ್ದುಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ
ಸಿದ್ದರಾಮಯ್ಯ ಎರಡನೇ ದೇವರಾಜ ಅರಸು. ಅವರನ್ನು ಟೀಕಿಸದಿದ್ದರೆ ಬಿಜೆಪಿ ಕೆಲವು ನಾಯಕರಿಗೆ ಅಸ್ತಿತ್ವ, ಉಳಿಗಾಲವಿಲ್ಲ. ಅಲ್ಲದೆ, ಸಿದ್ದರಾಮಯ್ಯ ಅವರ ವರ್ಚಸ್ಸು ಕಂಡು ಹೆದರಿದ್ದಾರೆ. ಈ ಚುನಾವಣೆಯಲ್ಲಿ ಸಿಂಹ ಯಾರು, ಹುಲಿ ಯಾರು, ನರಿ ಯಾರು ಎಂಬುದನ್ನು ರಾಜ್ಯದ ಜನರು ತೀರ್ಮಾನ ಮಾಡುತ್ತಾರೆ ಎಂದು ಅವರು ಕುಟುಕಿದರು