
ಬೆಂಗಳೂರು (ಜ.22): ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಂದ್ರೀಯ ಶಿಸ್ತು ಸಮಿತಿ ಕರೆದಿದ್ದು, ವಿವರಣೆ ಪಡೆದ ಬಳಿಕ ಅವರ ಮೇಲೆ ಸಮಿತಿಯೇ ಕ್ರಮ ಕೈಗೊಳ್ಳಲಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಪಕ್ಷದಲ್ಲಿ ಶಾಸಕ ಬಸನಗೌಡ ಯತ್ನಾಳ್ ಅಶಿಸ್ತಿನ ಬಗ್ಗೆ ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಕೇಂದ್ರೀಯ ಶಿಸ್ತು ಸಮಿತಿ ಅವರನ್ನು ಕರೆದಿದೆ. ವಿವರಣೆ ನೀಡಿದ ಬಳಿಕ ಶಿಸ್ತು ಕ್ರಮದ ಬಗ್ಗೆ ಸಮಿತಿಯೇ ತೀರ್ಮಾನಿಸಲಿದೆ’ ಎಂದರು.
ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ವಿರುದ್ಧದ ಅವರ ಹೇಳಿಕೆಗಳಿಂದ ಮುಖ್ಯಮಂತ್ರಿ ಆದಿಯಾಗಿ ಪಕ್ಷದ ಹಿರಿಯ ನಾಯಕರು ಮುಜುಗರ ಅನುಭವಿಸಿದ್ದರು. ವಿರೋಧ ಪಕ್ಷಗಳ ಟೀಕೆಗೂ ಗುರಿಯಾಗಿದ್ದರು. ಈ ಹಿಂದೆ ಪಕ್ಷದ ನಾಯಕರ ವಿರುದ್ಧವೇ ಯತ್ನಾಳ್ ತಿರುಗಿಬಿದ್ದು ಟೀಕಿಸಿದ್ದರು. ಹೈಕಮಾಂಡ್ ಎಚ್ಚರಿಕೆ ನಡುವೆಯೂ ಯತ್ನಾಳ್ ತಮ್ಮ ಸರ್ಕಾರದ ವಿರುದ್ಧವೇ ಟೀಕಾಪ್ರಹಾರ ಮುಂದುವರೆಸಿದ್ದರು.
ಕೃಷಿಗೆ ಔಟ್‌ಲುಕ್ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು: ಸಿಎಂ ಬೊಮ್ಮಾಯಿ
ಇತ್ತೀಚೆಗೆ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ವಿಚಾರವಾಗಿ ಯತ್ನಾಳ್ ಹಾಗೂ ಸಚಿವ ಮುರುಗೇಶ್ ನಿರಾಣಿ ಪರಸ್ಪರ ಬಹಿರಂಗವಾಗಿ ಬೈದಾಡಿಕೊಂಡಿದ್ದರು. ಇಬ್ಬರು ಒಂದೇ ಪಕ್ಷದ ಶಾಸಕರಾಗಿದ್ದರೂ ಬಹಿರಂಗ ಸವಾಲು ಹಾಕಿಕೊಂಡಿದ್ದರು. ಯತ್ನಾಳ್ ಒಂದು ಹೆಜ್ಜೆ ಮುಂದೆ ಸಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗಿತ್ತು.
ಯತ್ನಾಳ್‌ಗೆ ನೋಟಿಸ್ ಇಲ್ಲ; ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಸತತ ವಾಗ್ದಾಳಿ ನಡೆಸಿರುವ ಆಡಳಿತಾರೂಢ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬದಲು ಮನವೊಲಿಸುವ ಪ್ರಯತ್ನ ನಡೆಸಲು ಪಕ್ಷದ ಹೈಕಮಾಂಡ್ ಒಲವು ತೋರಿದೆ. ಯತ್ನಾಳ್ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಹೀಗಾಗಿ, ಸೋಮವಾರ ದೆಹಲಿಯಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಚಾಲನೆ ಸಿಕ್ಕ ಬೆನ್ನಲ್ಲೇ ಯತ್ನಾಳ್ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಅಂತಿಮವಾಗಿ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂಬುದು ಖಚಿತವಾಯಿತು.
ಚುನಾವಣೆಗೆ ಮುನ್ನ ಯೋಜನೆಗಳಿಗೆ ಬಂಪರ್: ಸಚಿವ ಸಂಪುಟ ಸಭೆಯಲ್ಲಿ ಅನುದಾನಕ್ಕೆ ಒಪ್ಪಿಗೆ
ಬಿಸಿ ತುಪ್ಪ: ಸದ್ಯಕ್ಕೆ ಯತ್ನಾಳ್ ಒಂದು ರೀತಿಯಲ್ಲಿ ಬಿಜೆಪಿ ಪಾಲಿಗೆ ಬಿಸಿ ತುಪ್ಪದಂತಾಗಿದ್ದಾರೆ. ನುಂಗುವುದಕ್ಕೂ ಆಗುತ್ತಿಲ್ಲ. ಉಗುಳುವುದಕ್ಕೂ ಆಗುತ್ತಿಲ್ಲ. ಲಿಂಗಾಯತರಲ್ಲಿ ಪಂಚಮಸಾಲಿ ಸಮುದಾಯದ ಸಂಖ್ಯಾಬಲ ಹೆಚ್ಚು. ಮೀಸಲಾತಿಗಾಗಿ ಯತ್ನಾಳ್ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ. ಅಲ್ಲದೆ, ಸತತವಾಗಿ ಸ್ವಪಕ್ಷೀಯರ ವಿರುದ್ಧ ಹರಿಹಾಯುತ್ತಿದ್ದಾರೆ. ಅವರ ವಾಗ್ದಾಳಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಪೂರಕವಾಗಿಯೇ ಇರುವುದರಿಂದ ಶಿಸ್ತು ಕ್ರಮ ಕೈಗೊಳ್ಳಲು ಮುಂದಾದರೆ ಅದು ಮುಂಬರುವ ಚುನಾವಣೆಯಲ್ಲಿ ನಕಾರಾತ್ಮಕವಾಗಬಹುದು ಎಂಬ ಆತಂಕ ಪಕ್ಷದ ವರಿಷ್ಠರನ್ನು ಕಾಡುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.