ಕಲುಷಿತ ರಾಜಕೀಯ ನೆನಪಾದರೆ ರಾಜಕಾರಣ ಬಿಟ್ಟು ಓಡಬೇಕಾಗುತ್ತದೆ: ಚಲುವರಾಯಸ್ವಾಮಿ

Published : Aug 11, 2025, 09:43 AM IST
N Chaluvarayaswamy

ಸಾರಾಂಶ

ಇಂದಿನ ಕಲುಷಿತ ರಾಜಕೀಯ ಪರಿಸ್ಥಿತಿ ನೆನಪಿಸಿಕೊಂಡರೆ ನಾನು ರಾಜಕಾರಣವನ್ನೇ ಬಿಟ್ಟು ಓಡಿಹೋಗಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಾಗಮಂಗಲ (ಆ.11): ತಾಲೂಕಿನ ಗಡಿ ಭಾಗ ಆರಣಿ ಗ್ರಾಪಂ ವ್ಯಾಪ್ತಿಯ ಹೊನ್ನೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಅಭಿವೃದ್ಧಿಗಾಗಿ ಎರಡು ವರ್ಷದಲ್ಲಿ 25 ರಿಂದ 30 ಕೋಟಿ ರು. ಅಂದಾಜಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಹೊನ್ನೇನಹಳ್ಳಿಯಲ್ಲಿ ನೂತನವಾಗಿ ಸ್ಥಾಪಿಸಿರುವ ಪಶು ಚಿಕಿತ್ಸಾಲಯ, ಗ್ರಾಮ ಗ್ರಂಥಾಲಯ ಉದ್ಘಾಟಿಸಿದ ಬಳಿಕ 2 ಕೋಟಿ ರು.ವೆಚ್ಚದಲ್ಲಿ ಹೊನ್ನೇನಹಳ್ಳಿ ಮತ್ತು ಸಿದ್ದಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಇಂದಿನ ಕಲುಷಿತ ರಾಜಕೀಯ ಪರಿಸ್ಥಿತಿ ನೆನಪಿಸಿಕೊಂಡರೆ ನಾನು ರಾಜಕಾರಣವನ್ನೇ ಬಿಟ್ಟು ಓಡಿಹೋಗಬೇಕಾಗುತ್ತದೆ. ಆದರೆ, ನಾನು ರಾಜಕೀಯ ಆರಂಭಿಸಿದ ದಿನಮಾನಗಳಲ್ಲಿ ತಾಲೂಕಿನ ಜನರು ನನಗೆ ತೋರಿದ ಪ್ರೀತಿ, ಹೋರಾಟ ಆಶೀರ್ವಾದ ಮತ್ತು ಅಭಿಮಾನದಿಂದಾಗಿ ನೀವು ನನಗೆ ಎಷ್ಟೇ ನೋವು ಕೊಟ್ಟರೂ ಅದೆಲ್ಲವನ್ನು ಮರೆತು ಏನಾದರೊಂದು ಒಳ್ಳೆಯ ಕೆಲಸ ಮಾಡಬೇಕೆಂಬ ಆಸಕ್ತಿ ಹೆಚ್ಚಾಗಿ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದರು.

ಕಳೆದ 1999ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ನಂತರ ಪರಿಶೀಲನೆಗೆ ಬಂದ ಸಮಯದಲ್ಲಿ ಹೆರಗನಹಳ್ಳಿ ಸಮೀಪ ಡೀಪ್‌ಕಟ್ ಪಾಯಿಂಟ್‌ನಲ್ಲಿ ನಿಂತು ಹೋಗಿದ್ದ ಹೇಮಾವತಿ ನಾಲಾ ಕಾಮಗಾರಿಗೆ ಚಾಲನೆ ಕೊಟ್ಟ ಪರಿಣಾಮ ಬೆಳ್ಳೂರು ಹೋಬಳಿಯ ಬಹುತೇಕ ಗ್ರಾಮಗಳು ಮತ್ತು ದೇವಲಾಪುರ ಹೋಬಳಿಯ ಹಲವು ಕೆರೆ ಕಟ್ಟೆಗಳಿಗೆ ನೀರು ಹರಿಯುವಂತಾಗಿದೆ ಎಂದರು.

ರಸ್ತೆ ಕಾಮಗಾರಿಗಳು ಕೆಲ ವರ್ಷದಲ್ಲೇ ಕಿತ್ತು ಹೋಗಬಹುದು. ಆದರೆ, ಶಾಶ್ವತವಾಗಿ ಉಳಿಯುವಂತಹ ಕೆಲಸಗಳು ಮೂರ್‍ನಾಲ್ಕು ತಲೆಮಾರಿನವರೆಗೂ ಉಳಿಯುತ್ತವೆ. ಜಿಲ್ಲೆಗೆ ಹೊಸದಾಗಿ ಮಂಜೂರು ಮಾಡಿಸಿರುವ ಕೃಷಿ ವಿಶ್ವವಿದ್ಯಾಲಯ ಈ ಭೂಮಿ ಇರುವವರೆಗೂ ಇರುತ್ತದೆ. ಅದರ ಉಪಯೋಗ ಮಂಡ್ಯ ಸೇರಿದಂತೆ ಸುತ್ತಮುತ್ತಲ 5 ಜಿಲ್ಲೆಯ ರೈತರಿಗೆ ನಿರಂತರವಾಗಿ ಸಿಗುತ್ತದೆ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದ ಖಾಸಗಿ ಶಿಕ್ಷಣ ಸಂಸ್ಥೆಗೆ ಕೃಷಿ ಕಾಲೇಜು ಮಂಜೂರು ಮಾಡಿರುವ ಇತಿಹಾಸವಿಲ್ಲ. ನಾನು ಕೃಷಿ ಸಚಿವನಾದ ನಂತರ ಮೊದಲ ಬಾರಿಗೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ಕೃಷಿ ಕಾಲೇಜು ಮಂಜೂರು ಮಾಡುವ ಜೊತೆಗೆ, ಕನಕಪುರ ಮತ್ತು ಬೆಳಗಾವಿಯ ಕೆಎಲ್‌ಎ ಕಾಲೇಜಿಗೂ ಕೃಷಿ ಕಾಲೇಜು ಮಂಜೂರು ಮಾಡಲಾಗಿದೆ ಎಂದರು.

ಎರಡು ವರ್ಷದಲ್ಲಿ ತಾಲೂಕಿಗೆ ಮೂರು ಪಶು ಚಿಕಿತ್ಸಾಲಯ ಮಂಜೂರು ಮಾಡಿಸಿದ್ದೇನೆ. ಕಳೆದ 5 ವರ್ಷದ ಹಿಂದೆ ನನ್ನನ್ನು ಸೋಲಿಸಲು ಮೂರು ಬಾರಿ ತಾಲೂಕಿನ ಪಿ.ನೇರಲಕೆರೆ ಗ್ರಾಮದ ದೇವಸ್ಥಾನಕ್ಕೆ ಬಂದು ಈ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸುತ್ತೇನೆಂದು ಭರವಸೆ ಕೊಟ್ಟಿದ್ದ ಯಜಮಾನರು ರಸ್ತೆ ಅಭಿವೃದ್ಧಿ ಪಡಿಸಲು ಸಾಧ್ಯವಾಗಲೇ ಇಲ್ಲ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಟೀಕಿಸಿದರು.

ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ಮುಖಂಡರಾದ ಆರ್.ಕೃಷ್ಣೇಗೌಡ, ಕನ್ನಾಘಟ್ಟ ವೆಂಕಟೇಶ್, ಸತ್ಯಣ್ಣ, ದೊರೆಸ್ವಾಮಿ ಸೇರಿದಂತೆ ಹಲವರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಆಗಲ್ಲ: ಡಿಕೆ ಬ್ರದರ್ಸ್‌ ನಿಗೂಢ ಪೋಸ್ಟರ್‌ ಸಂಚಲನ
ಮುಂದಿನ ಚುನಾವಣೆಗೆ ನಾನು ನಿಲ್ಲದಿದ್ದರೂ ಸರಿ, ಆರ್.ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಸೋಲಿಸಿಯೇ ಸಿದ್ಧ!