
ಮದ್ದೂರು (ನ.27): ಕಾಂಗ್ರೆಸ್ ಶಾಸಕರಲ್ಲಿ ಯಾವುದೇ ಬಣಗಳಿಲ್ಲ, ಗೊಂದಲವಿಲ್ಲ. ಸಿಎಂ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಸರ್ಕಾರ ಮಟ್ಟದಲ್ಲಿ ಯಾವುದೇ ಬದಲಾವಣೆಗಳಾದರೂ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರ ತೀರ್ಮಾನವೇ ಅಂತಿಮ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ತಾಲೂಕಿನ ಕೊಪ್ಪ ಹೋಬಳಿ ಕೌಡ್ಲೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸುರ್ಜೇವಾಲ, ವೇಣುಗೋಪಾಲ್ ಹಾಗೂ ರಾಜ್ಯ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಹೈಕಮಾಂಡ್ ಆಗಿದ್ದು, ಇವರೇ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ.
ಇನ್ನೂ 15 ದಿನಗಳಲ್ಲಿ ಎಲ್ಲಾ ಗೊಂದಲಗಳು ನಿವಾರಣೆಯಾಗಲಿದ್ದು, ಸರ್ಕಾರ ಸುಸೂತ್ರವಾಗಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ, ಡಿಸಿಎಂಗಿಂತ ನಾನು ದೊಡ್ಡವನಲ್ಲ. ವಿಪಕ್ಷಗಳು ಏನೇ ಆರೋಪ ಮಾಡಿದರೂ ಅದು ಹುಸಿಯಾಗುತ್ತದೆ. ಶಾಸಕರಲ್ಲಿ ಯಾವುದೇ ಗುಂಪು, ಬಣಗಳಿಲ್ಲ. ಸಚಿವಾಕಾಂಕ್ಷಿತರು ದೆಹಲಿಗೆ ಹೋಗುವುದು ಸಾಮಾನ್ಯ. ಅದೇ ರೀತಿ ನಮ್ಮ ಪಕ್ಷದ ಶಾಸಕರು ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ಇದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.
ಕಳೆದ ನಾಲ್ಕು ದಶಕಗಳಿಂದ ಜಲಾನಯನ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ನಮ್ಮ ಕಾರ್ಯಗಳು ಇತರೆ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವ ಬ್ಯಾಂಕ್, ಕೇಂದ್ರ ಭೂ ಸಂಪನ್ಮೂಲ ಇಲಾಖೆ, ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಉತ್ಕೃಷ್ಟತಾ ಕೇಂದ್ರದ ಸಹಯೋಗದೊಂದಿಗೆ ಹೆಬ್ಬಾಳದ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಜಲಾನಯನ ಸ್ಥಿತಿಸ್ಥಾಪಕತ್ವ, ವಿಜ್ಞಾನ, ಸ್ಥಿರತೆ ಮತ್ತು ಸಮಾಜದ ಏಕೀಕರಣ’ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಬ್ಯಾಂಕ್ ಅನುದಾನಿತ ರಿವಾರ್ಡ್ ಕಾರ್ಯಕ್ರಮದಡಿ ಭೂಮಿಯಲ್ಲಿರುವ ಸಂಪನ್ಮೂಲಗಳನ್ನು ಅನ್ವೇಷಿಸಲಾಗುತ್ತಿದೆ. ಇದರಿಂದಾಗಿ ಜಲಾನಯನ ನಿರ್ವಹಣೆಯಲ್ಲಿ ರಾಜ್ಯದ ಸ್ಥೈರ್ಯ ಹೆಚ್ಚಾಗಿದೆ. ಕಳೆದ ನಾಲ್ಕು ದಶಕಗಳಿಂದ ಜಲಾನಯನ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಬೇರೆ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಬ್ಯಾಂಕ್‌ನ ಕೃಷಿ ತಜ್ಞ ಆ್ಯಂಡ್ರೂ ಗುಡ್‌ಲ್ಯಾಂಡ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ ಮತ್ತಿತರರು ಉಪಸ್ಥಿತರಿದ್ದರು. ಇಥಿಯೋಪಿಯಾ, ನೈಜೀರಿಯಾ, ಕೆನಡಾ, ನೈರೋಬಿ, ಫ್ರಾನ್ಸ್ ಮತ್ತಿತರ ದೇಶಗಳ ಪ್ರತಿನಿಧಿಗಳು, ದೇಶದ 24 ರಾಜ್ಯಗಳ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ನೋಡಲ್ ಎಜೆನ್ಸಿಗಳ ಮುಖ್ಯಸ್ಥರು, ತಜ್ಞರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.