ಬಣ್ಣ ಬಣ್ಣದ ಕಾಗೆ ಹಾರಿಸಬಾರದು: ಸಚಿವ ಯೋಗೇಶ್ವರ್‌ಗೆ ಟಾಂಗ್ ಕೊಟ್ಟ ಸಿಂಹ!

By Suvarna News  |  First Published Apr 12, 2021, 4:38 PM IST

ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಬಿಜೆಪಿ  ಸಂಸದ ಪ್ರತಾಪ್ ಸಿಂಹ ಅವರು ಟಾಂಗ್ ಕೊಟ್ಟಿದ್ದಾರೆ. ಇದೇ ಪಕ್ಷದ ನಾಯಕರುಗಳ ಮುಸುಕಿನ ಗುದ್ದಾಟ ಶುರುವಾಯ್ತಾ? 


ಮೈಸೂರು, (ಏ.12): ಹೆಲಿಟೂರಿಸಂ ಪ್ರಸ್ತಾವ ವಿಚಾರ‌ಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಪ್ರವಾಸೋದ್ಯಮ ಇಲಾಖೆಯವರು ಬಣ್ಣ ಬಣ್ಣದ ಕಾಗೆ ಹಾರಿಸಬಾರದು ಎಂದು ಹೇಳುವ ಮೂಲಕ
ಸಚಿವ ಸಿ‌.ಪಿ.ಯೋಗೀಶ್ವರ್‌ಗೆ ಟಾಂಗ್ ಕೊಟ್ಟಿದ್ದಾರೆ.

ಇಂದು (ಸೋಮವಾರ) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಮಂಡ್ಯದಲ್ಲಿ ಡಿಸ್ನಿಲ್ಯಾಂಡ್, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡುತ್ತೇವೆ ಎನ್ನುತ್ತಿದ್ದಾರೆ. ಇಂಥವೆಲ್ಲ ನಾವೂ ತುಂಬಾ ನೋಡಿದ್ದೇವೆ. ಎರಡು ಸಲ ಪ್ರಚಾರಕ್ಕೆಂದು ಮಾತಾಡುತ್ತಾರೆ. ಎರಡು ವರ್ಷ ಆದಮೇಲೆ ಸಚಿವರು ಬದಲಾಗುತ್ತಾರೆ. ಪ್ರವಾಸೋದ್ಯಮ ಇಲಾಖೆಯವರು ಬಣ್ಣ ಬಣ್ಣದ ಕಾಗೆ ಹಾರಿಸಬಾರದು ಎಂದು ಸಚಿವ ಸಿ.ಪಿ.ಯೋಗೇಶ್ವರ್ ಗೆ ಹೇಳಿದರು. 

Tap to resize

Latest Videos

 ಹೆಲಿ ಟೂರಿಸಂ ಎನ್ನುವ ಪದ ಮಾತ್ರ ಕೇಳಿದ್ದೇವೆ. ಆ ಯೋಜನೆ ರೂಪುರೇಷೆ ಏನು? ನಿಮ್ಮ ಬಳಿ ವಿಷನ್ ಡಾಕ್ಯುಮೆಂಟ್ ಎಲ್ಲಿದೆ? ಯಾವ ಘನಕಾರ್ಯ ಮಾಡುತ್ತೀರೆಂದು ನಮಗೂ ಹೇಳಿ ಎಂದು ಸಿಂಹ ಪ್ರಶ್ನಿಸಿದರು.

'ಮೈಸೂರು ರೇಷ್ಮೆ ಸೀರೆಯಲ್ಲಿ ಲೋಪವಿಲ್ಲದ ಚಿನ್ನ ಬಳಕೆ'

ಮೈಸೂರಿನಿಂದ ಕಾರವಾರ, ಬಳ್ಳಾರಿ, ಬೆಂಗಳೂರಿಗೆ ಹೆಲಿಕಾಪ್ಟರ್ ಸೇವೆ ಶುರು ಮಾಡುತ್ತೇವೆ ಅಂತೀರಿ. ಮೈಸೂರಿನಿಂದ ಕಾರವಾರಕ್ಕೆ ಹೋಗಿ ನೋಡುವುದು ಏನಿದೆ? ದಸರಾ ಸಂದರ್ಭದಲ್ಲಿ ಮಾಡುವ ಹೆಲಿರೈಡ್‌ಗೇ ಜನರ ಬರುವುದಿಲ್ಲ. ಯೋಜನೆ ರೂಪಿಸುವ ಮುನ್ನ ಇದೆಲ್ಲವನ್ನೂ ಗಮನಿಸಬೇಕು. ಇಷ್ಟಾಗಿಯೂ ನಿಮಗೆ ಹೆಲಿಕಾಪ್ಟರ್ ಹಾರಿಸಬೇಕು ಎಂದರೆ ಬನ್ನಿ ವಿಮಾನ ನಿಲ್ದಾಣದಲ್ಲಿ ನಾವೇ ಜಾಗ ಕೊಡುತ್ತೇವೆ. ಕೇವಲ 10 ಮೀಟರ್ ದೂರದಲ್ಲಿ ರಾಜವಂಶಸ್ಥರಿಗೆ ಸೇರಿದ ಹೆಲಿಪ್ಯಾಡ್ ಇದೆ. ಅದನ್ನು ಬಾಡಿಗೆ, ಭೋಗ್ಯಕ್ಕೆ ಕೇಳಿದರೆ ಕೊಡಲ್ಲ ಎನ್ನುತ್ತಾರಾ? ಎಂದರು.

ಹೆಲಿ ಟೂರಿಸಂ‌ಗೆ ನನ್ನ ವಿರೋಧ ಇದೆ.ಈ ಸಂಬಂಧ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.

click me!