ಮೈಸೂರಿನಲ್ಲಿ ನಡೆದ ಬಿಜೆಪಿ-ಜೆಡಿಸ್ ಮೈತ್ರಿ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶಾಸಕ ಜ.ಟಿ. ದೇವೇಗೌಡ ಅವರು ರಹಸ್ಯ ಪತ್ರವೊಂದನ್ನು ನೀಡಿದ್ದಾರೆ.
ಮೈಸೂರು (ಏ.14): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮೈಸೂರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಚೀಟಿಯೊಂದನ್ನು ಕೊಟ್ಟಿದ್ದಾರೆ. ಈ ಚೀಟಿಯಲ್ಲಿ ಏನಿದೆ ಎಂಬುದೇ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.
ಮೈಸೂರು ನಗರದಲ್ಲಿ ಸೋಮವಾರ ನಡೆದ ಲೋಕಸಭಾ ಚುನಾವಣೆಯ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರಪೂರ ಭಾಷಣ ಮಾಡಿದರು. ನಂತರ, ಗಣ್ಯರು ಕುಳಿತಿದ್ದ ವೇದಿಕೆಯತ್ತ ಬಂದು ಎಲ್ಲರನ್ನು ಮಾತನಾಡಿಸಿ, ಕೈ-ಕೈ ಹಿಡಿದು ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿದರು. ಇದಾದ ನಂತರ ಪ್ರಧಾನಿ ಮೋದಿ ವೇದಿಕೆಯಿಂದ ಇಳಿದು ಹೋಗುವಾಗ ವೇದಿಕೆ ಮೇಲಿದ್ದವರ ಹಸ್ತಲಾಘವ ಮಾಡುತ್ತಾ, ಕೈ ಮುಗಿಯುತ್ತಾ ಕೆಳಗೆ ಹೋಗುತ್ತಿದ್ದರು.
ಕರ್ನಾಟಕ ಲೂಟಿ ಆಗೋದನ್ನು ತಪ್ಪಿಸಲೆಂದೇ ಮೊದಿಯೊಂದಿಗೆ ಹೋಗಲು ಕುಮಾರಸ್ವಾಮಿಗೆ ಹೇಳಿದೆ: ಹೆಚ್.ಡಿ.ದೇವೇಗೌಡ
ಈ ವೇಳೆ ಶಾಸಕ ಜಿ.ಟಿ. ದೇವೇಗೌಡರ ಹತ್ತಿರ ಮೋದಿ ಅವರು ಬಂದರು. ಆಗ ಕೈಯಲ್ಲಿ ಚೀಟಿಯನ್ನು ಹಿಡಿದುಕೊಂಡು ಕಾಯುತ್ತಿದ್ದ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಧಾನಿ ಮೋದಿ ಅವರ ಕೈಗೆ ಆ ಚೀಟಿಯನ್ನು ಕೊಟ್ಟಿದ್ದಾರೆ. ಹಾಗಾದರೆ, ಚೀಟಿಯನ್ನು ಯಾವ ವಿಚಾರವಿದೆ. ಏನು ಬರೆದಿದ್ದಾರೆ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ಚಾಮುಂಡಿ ಕ್ಷೇತ್ರಕ್ಕೆ ಯಾವುದಾದರೂ ಅನುದಾನ ಅಥವಾ ಯೋಜನೆಯನ್ನು ಕೇಳಿದ್ದಾರಾ? ಅಥವಾ ಅಭ್ಯರ್ಥಿಯ ಗೆಲುವಿಗಾಗಿ ಮತ್ತೊಮ್ಮೆ ಪ್ರಚಾರ ಸಮಾವೇಶಕ್ಕೆ ಬರುವಂತೆ ಮನವಿ ಮಾಡಿದ್ದಾರಾ? ಅಥವಾ ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಉತ್ತಮ ದರ್ಜೆಯ ಸಚಿವ ಸ್ಥಾನವನ್ನು ಕೇಳಿದ್ದಾರಾ? ಯಾವ ವಿಚಾರವನ್ನು ಚೀಟಿಯಲ್ಲಿ ಬರೆದು ಕೊಟ್ಟಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಮೋದಿ ಗಮನ ಸೆಳೆಯಲು ಕುಮಾರಸ್ವಾಮಿಯನ್ನೇ ಸೈಡ್ ಹಾಕಿದ ಜಿಟಿ ದೇವೇಗೌಡ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೇದಿಕೆಯ ಮೇಲೆ ಬಂದಾಗ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌರನ್ನು ಕುಶಲೋಪರಿ ವಿಚಾರಿಸಿ ಎಲ್ಲರಿಗೂ ನಮಸ್ಕರಿಸಿ ಬಂದು ವೇದಿಕೆಯಲ್ಲಿ ಕುಳಿತುಕೊಂಡರು. ಆಗ ಮೈಸೂರು ಪೇಟ, ಶಾಲು ಹಾಗೂ ಹಾರ ಹಾಕಿ ಸನ್ಮಾನ ಮಾಡಲಾಗುತ್ತಿತ್ತು. ಈ ವೇಳೆ ಬಿ.ಎಸ್. ಯಡಿಯೂರಪ್ಪ ಅವರು ಮೋದಿ ಅವರಿಗೆ ಮೈಸೂರು ಪೇಟವನ್ನು ಹಾಕಿದರು. ಯಡಿಯೂರಪ್ಪ ಅವರ ಪಕ್ಕದಲ್ಲಿ ರೇಷ್ಮೆ ಶಾಲು ಹಿಡಿದು ನಿಂತುಕೊಂಡಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಹಿಂದಿಕ್ಕಿ ಮುಂದೆ ಬಂದ ಶಾಸಕ ಜಿ.ಟಿ. ದೇವೇಗೌಡ ಅವರು, ಶಾಲು ಹಾಕುವುದಕ್ಕೂ ಮುನ್ನವೇ ಮಣಿಯ ಹಾರವನ್ನು ಹಾಕಿದರು.
'ಭಾರತ್ ಮಾತಾಕಿ ಜೈ ಎನ್ನಲು ಪರ್ಮಿಷನ್ ಕೇಳ್ಬೇಕಾ..' ವೇದಿಕೆಯಲ್ಲೇ ಕಾಂಗ್ರೆಸ್‌ಗೆ ಪ್ರಶ್ನಿಸಿದ ಪ್ರಧಾನಿ ಮೋದಿ!
ನಂತರ, ಕುಮಾರಸ್ವಾಮಿ ಅವರು ಶಾಲು ಹಾಕಲು ಮುಂಬರುವ ಮುನ್ನವೇ ಅವರ ಕೈಯಿಂದ ಶಾಲು ಪಡೆದುಕೊಂಡು ಬಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕೈಗಿಟ್ಟು, ಶಾಲು ಹಾಕಿಸಿದರು. ನಂತರ, ಕುಮಾರಸ್ವಾಮಿ ಅವರು ಶ್ರೀರಾಮನ ವಿಗ್ರಹದ ಮಾದರಿಯ ಸ್ಮರಣಿಕೆಯನ್ನು ಮೋದಿ ಅವರ ಕೈಗಿಟ್ಟರು. ಎಲ್ಲರೂ ಒಟ್ಟಿಗೆ ಫೋಟೋ ಪೋಸ್ ಕೊಟ್ಟರು. ಇದರ ಕೆಲವೇ ಕ್ಷಣದಲ್ಲಿ ಮಹಿಳಾ ಗುಂಪೊಂದು ಬಂದು ಪ್ರಧಾನಿ ಮೋದಿ ಅವರಿಗೆ ಶಾಲು ಹಾಕಿ ಸನ್ಮಾನಿಸಿದರು.
ವೇದಿಕೆಯಲ್ಲಿ ಪ್ರಧಾನಿ ಮೋದಿ ಎಡಭಾಗದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕುಳಿತುಕೊಂಡಿದ್ದರೆ, ಬಲಭಾಗದಲ್ಲಿ ಯಡಿಯೂರಪ್ಪ ಕುಳಿತುಕೊಂಡಿದ್ದರು. ಇನ್ನು ಯಡಿಯೂರಪ್ಪನ ಪಕ್ಕದಲ್ಲಿ ಕುಮಾರಸ್ವಾಮಿ ಕುಳಿತುಕೊಂಡಿದ್ದರು. ಆಗ ಮೋದಿ ಅವರನ್ನು ಮಾತನಾಡಿಸಲು ಕಾಯುತ್ತಿದ್ದ ಕುಮಾರಸ್ವಾಮಿ ಅವರು ಯಡಿಯೂರಪ್ಪ ಮಾತನಾಡಲು ವೇದಿಕೆ ಬಳಿಗೆ ತೆರಳಿದಾಗ ಅವರ ಸೀಟಿನಲ್ಲಿ ಕುಳಿತು ಕೆಲವೊಂದು ಚರ್ಚೆ ಮಾಡಿದರು.