ಕೆಲ ದಿನಗಳ ಹಿಂದೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ, ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಅನುಮತಿ ಕೇಳಿ ಭಾರತ್ ಮಾತಾಕೀ ಜೈ ಎಂದಿದ್ದರು. ಇದನ್ನೇ ಚುನಾವಣಾ ದಾಳವಾಗಿ ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು (ಏ.14): ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಈ ದೇಶದಲ್ಲಿ ಭಾರತ್ ಮಾತಾ ಕೀ ಜೈ ಎನ್ನಲು ಪರ್ಮಿಷನ್ ಕೇಳ್ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಕಲಬುರಗಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಭಾಷಣಕ್ಕೂ ಮುನ್ನ ವೇದಿಕೆಯಲ್ಲಿ ಇದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮತಿ ಪಡೆದು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಇದನ್ನೇ ಮೈಸೂರಿನ ತಮ್ಮ ಸಮಾವೇಶದಲ್ಲಿ ಪ್ರಸ್ತಾಪಿಸಿದ ಮೋದಿ, 'ದೇಶವನ್ನು ಮಾರಲು, ಮುರಿಯಲು ಹಾಗೂ ಬಲಹೀನ ಮಾಡಲು ಕಾಂಗ್ರೆಸ್ ಪಕ್ಷದ ಕೆಟ್ಟ ಐಡಿಯಾಗಳಿವೆ. ಅದು ಈಗಲೂ ಮುಂದುವರಿದಿದೆ. ಆರ್ಟಿಕಲ್ 370 ಬಗ್ಗೆ ರಾಜಸ್ಥಾನದಲ್ಲಿ ಹೇಳುವ ಅಗತ್ಯವೇನು ಅಂತಾ ಎಐಸಿಸಿ ಅಧ್ಯಕ್ಷರೇ ಕೇಳ್ತಾರೆ. ಕಾಶ್ಮೀರದ ಬಗ್ಗೆ ಉಳಿದ ರಾಜ್ಯಕ್ಕೆ ಸಂಬಂಧವೇನು ಅಂತಾ ಕೇಳುತ್ತೆ. ಕರ್ನಾಟಕ ಜನತೆ ಕೂಡ ಇತ್ತೀಚೆಗೆ ಸಾಕ್ಷಿಯಾಗಿದ್ದರು. ಭಾರತದ ವಿರುದ್ಧವಾಗಿ ಮಾತನಾಡಿದವರಿಗೆ ಕಾಂಗ್ರೆಸ್ ಪುರಸ್ಕಾರ ನೀಡುತ್ತದೆ ಎಂದು ಹೇಳಿದರು.
ಭಾರತದ ವಿರೋಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡುತ್ತದೆ. ಕಾಂಗ್ರೆಸ್‌ನ ಚುನಾವಣಾ ಸಮಾವೇಶದಲ್ಲಿ ಒಬ್ಬ ವ್ಯಕ್ತಿ, ಭಾರತ್ ಮಾತಾ ಕೀ ಜೈ ಎಂದರು. ಇದಕ್ಕಾಗಿ ಅವರು ವೇದಿಕೆಯಲ್ಲಿದ್ದ ನಾಯಕರ ಪರ್ಮಿಷನ್ ತೆಗೆದುಕೊಂಡಿದ್ದರು. ಭಾರತ್ ಮಾತಾಕೀ ಜೈ ಎನ್ನಲು ಪರ್ಮಿಷನ್ ಕೇಳುವ ಮಟ್ಟಕ್ಕೆ ಇಳಿದಿದ್ದೀರಾ ಎಂದು ಪ್ರಶ್ನೆ ಮಾಡುವ ಮೂಲಕ ಲಕ್ಷ್ಮಣ್ ಸವದಿ ಅವರ ಹೆಸರನ್ನು ಹೇಳದೇ ಮೋದಿ ತಿವಿದಿದ್ದಾರೆ.
ಇಂಥ ಕಾಂಗ್ರೆಸ್‌ಅನ್ನು ದೇಶ ಕ್ಷಮಿಸುತ್ತಾ? ಇಂಥ ಕಾಂಗ್ರೆಸ್‌ಅನ್ನು ಕರ್ನಾಟಕ ಕ್ಷಮಿಸುತ್ತಾ? ಇಂಥ ಕಾಂಗ್ರೆಸ್‌ಅನ್ನು ಮೈಸೂರಿನ ಜನ ಕ್ಷಮಿಸ್ತಾರಾ? ಮೊದಲು ವಂದೇ ಮಾತರಂಗೆ ವಿರೋಧ ಮಾಡಿದರು. ಈಗ ಭಾರತ್ ಮಾತಾಕೀ ಜೈ ಎಂದು ಹೇಳಲು ಮುಜುಗರ ಮಾಡ್ತಿದ್ದಾರೆ. ಇದು ಕಾಂಗ್ರೆಸ್‌ನ ಪತನದ ಪರಾಕಾಷ್ಠೆಯಾಗಿದೆ. ಇಂದು ಕಾಂಗ್ರೆಸ್ ಪಕ್ಷ, ಅಧಿಕಾರಕ್ಕಾಗಿ ಬೆಂಕಿಯ ಜೊತೆ ಆಟವಾಡ್ತಿದೆ.
ಆದರೆ, ಇದು ದೇಶದ ದಿಕ್ನನ್ನು ನೋಡಿ, ಇನ್ನೊಂದೆಡೆ ಕಾಂಗ್ರೆಸ್‌ನ ಮಾತು ನೋಡಿ. ಇಂದು ವಿಶ್ವದಲ್ಲಿ ಭಾರತ ಹೆಸರು ಗೊತ್ತಾಗ್ತಿದ್ಯಾ ಇಲ್ವಾ? ಆದ್ರೆ ಕಾಂಗ್ರೆಸ್‌ನವರು ವಿದೇಶಕ್ಕೆ ಹೋಗಿ, ದೇಶವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ದೇಶ ಇಂದು ತನ್ನ ವಿರೋಧಿಗಳಿಗೆ ಎಲ್ಲಾ ರೀತಿಯ ಉತ್ತರ ನೀಡುತ್ತದೆ. ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್‌ಗೆ ಸಾಕ್ಷಿ ಕೇಳುತ್ತದೆ. ದೇಶದಲ್ಲಿ ಯಾವ ಸಂಘಟನೆಯನ್ನು ಭಯೋತ್ಪಾದನೆಗಾಗಿ ಬ್ಯಾನ್ ಮಾಡಲಾಗಿದೆಯೋ ಈಗ ಅದೇ ಸಂಘಟನೆಯ ರಾಜಕೀಯ ವಿಂಗ್ ಜೊತೆ ಕಾಂಗ್ರೆಸ್ ಕೈಜೋಡಿಸುತ್ತದೆ ಎಂದು ಮೋದಿ ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ತುಷ್ಟೀಕರಣ ಜೋರಾಗಿ ನಡೆಯುತ್ತಿದೆ. ಹಬ್ಬ ಹರಿದಿನಗಳ ಮೇಲೆ ಕಡಿವಾಣ ಹಾಕಲಾಗ್ತಿದೆ. ಧಾರ್ಮಿಕ ಬಾವುಟಗಳನ್ನು ಕೆಳಗಿಳಿಸ್ತಿದ್ದಾರೆ. ವೋಟ್ ಬ್ಯಾಂಕ್‌ನ ಆಟವಾಡುವ ಈ ವ್ಯಕ್ತಿಗಳಿಗೆ ಅಧಿಕಾರ ನೀಡ್ಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
'ಖರ್ಗೆ ಸಾಹೇಬ್ರು ತಪ್ಪು ತಿಳ್ಕೊಬಾರದು' ಅಂತಾ ಹೇಳಿ ಭಾರತ್ ಮಾತಾಕೀ ಜೈ ಎಂದ ಸವದಿ!
ಮೈಸೂರು ಸಾಂಸ್ಕೃತಿಕ ರಾಜಧಾನಿ. ಜನವರಿ 22 ರಂದು ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ನನಸಾಯಿತು. ಪೂರ್ತಿ ದೇಶ, ಈ ಕಾರಣದಿಂದ ಒಂದಾಯಿತು. ಆದರೆ, ಕಾಂಗ್ರೆಸ್‌ನ ಜನರು, ಅವರ ಮೈತ್ರಿ ಪಕ್ಷ ರಾಮ ಮಂದಿರದಂಥ ಪ್ರಾಣ ಪ್ರತಿಷ್ಠೆಯ ಆಹ್ವಾನವನ್ನು ತಿರಸ್ಕರಿಸಿದರು. ಎಷ್ಟು ಸಾಧ್ಯವೋ ಅಷ್ಟು ಇವರು ನಮ್ಮ ನಂಬಿಕೆಯನ್ನು ತಿಳಿಯುತ್ತಿದ್ದಾರೆ. ಇಂಡಿ ಮೈತ್ರಿಯ ನಾಯಕರು ಸನಾತನ ಮುಗಿಸುವ ಮಾತನಾಡುತ್ತಿದ್ದಾರೆ. ಹಿಂದು ಧರ್ಮದ ಶಕ್ತಿಯನ್ನು ವಿನಾಶ ಮಾಡ್ಬೇಕು ಅಂತಾರೆ. ಆದರೆ, ಮೋದಿ ಎಲ್ಲಿಯವರೆಗೂ ಇರುತ್ತಾರೋ, ಎಲ್ಲಿಯವರೆಗೂ ನನಗೆ ನಿಮ್ಮ ಆಶೀರ್ವಾದ ಇರುತ್ತೋ, ಅಲ್ಲಿಯವರೆಗೂ ಈ ದ್ವೇಷ ಯಶಸ್ಸು ಆಗೋದೇ ಇಲ್ಲ. ಇದು ಮೋದಿ ಗ್ಯಾರಂಟಿ ಎಂದು ಹೇಳಿದ್ದಾರೆ.
PM Modi Mysuru Visit: ಕೈ ಅಭ್ಯರ್ಥಿಗಳ ಗೆಲುವಿಗೆ ರಾಜ್ಯ ಕಾಂಗ್ರೆಸ್‌ನಿಂದ ನೂರಾರು ಕೋಟಿ ಕಪ್ಪುಹಣ, ಮೋದಿ ಆರೋಪ
2024ರ ಚುನಾವಣೆ, ಇದು ಮುಂದಿನ 5 ವರ್ಷದ ಚುನಾವಣೆಯಲ್ಲ 2047ರ ಚುನಾವಣೆ. ಇದಕ್ಕಾಗಿಯೇ ಮೋದಿ, ಪ್ರತಿ ಕ್ಷಣ ನಿಮ್ಮ ಹೆಸರಿಗೆ, ಪ್ರತಿ ಕ್ಷಣ ದೇಶಕ್ಕಾಗಿ ಕೆಲಸ ಮಾಡುತ್ತೇನೆ. ನನ್ನ 10 ವರ್ಷದ ರಿಪೋರ್ಟ್ ಕಾರ್ಡ್ ನಿಮ್ಮ ಎದುರಲ್ಲಿದೆ. ನನ್ನ ಘೋಷಣೆಗಳು ಎಲ್ಲಾ ಮುಂದಿನ ಐದು ವರ್ಷದವರೆಗೂ ಜಾರಿಯಲ್ಲಿ ಇರಲಿದೆ ಎಂದು ಮೋದಿ ಹೇಳಿದ್ದಾರೆ.