
ಬೆಂಗಳೂರು (ಡಿ.27): ಮೈಸೂರು ಅರಮನೆ ದ್ವಾರದ ಮುಂಭಾಗದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಈ ಹಿಂದೆ ಬಲೂನು ಮಾರುವ ಬಾಲಕಿ ಮೇಲೆ ಅತ್ಯಾ*ಚಾರ ನಡೆದಿತ್ತು. ಈಗ ಬಲೂನು ಮಾರಾಟ ಮಾಡುವವನ ಬಳಿ ಹೀಲಿಯಂ ಸಿಲಿಂಡರ್ ಹೇಗೆ ಬಂತು ಎಂಬ ಪ್ರಶ್ನೆ ಮೂಡಿದೆ. ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ನಡೆದ ಘಟನೆಯನ್ನು ನೋಡಿದ್ದೇವೆ. ಹೀಗಾಗಿ ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಯಲ್ಲಿ ಬಲೂನ್ ಮಾರುತ್ತಿದ್ದ ಲಕ್ನೋ ಮೂಲದ ಎನ್ನಲಾದ ವ್ಯಕ್ತಿ ಮೃತಪಟ್ಟಿದ್ದಾನೆ. ಇದರಿಂದ ಮೈಸೂರಿನಲ್ಲಿ ಸಣ್ಣಪುಟ್ಟ ವಸ್ತುಗಳ ಮಾರಾಟ ಮಾಡುವವರ ಮೇಲೆ ಯಾವುದೇ ರೀತಿಯ ನಿಯಂತ್ರಣ ಇಲ್ಲ ಎಂಬುದು ಕಾಣಿಸುತ್ತಿದೆ. ಪ್ರವಾಸಿಗರು ಬರುವುದರಿಂದ ಹೆಚ್ಚಿನ ರೀತಿ ಕ್ರಮ ತೆಗೆಕೊಳ್ಳಬೇಕು. ಇದೆಲ್ಲವೆನ್ನು ಸೂಕ್ಷ್ಮದೃಷ್ಟಿಯಿಂದ ನೋಡಬೇಕು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ.
ಬಲೂನ್ ವ್ಯಾಪಾರಿಗೆ ಹೀಲಿಯಂ ಸಿಲಿಂಡರ್ ಹೇಗೆ ಸಿಕ್ಕಿದೆ, ಎಲ್ಲಿ ಖರೀದಿಸಿದ್ದ ಅದೆಲ್ಲವನ್ನು ತನಿಖೆ ಮಾಡಿ ವರದಿ ನೀಡಲು ತಿಳಿಸಿದ್ದೇನೆ ಎಂದು ಹೇಳಿದರು. ವರ್ಷಾಚರಣೆ ಸಿದ್ಧತೆ ಕುರಿತು ಡಿ.28ಕ್ಕೆ ಸಭೆ: ಹೊಸ ವರ್ಷಾಚರಣೆ ಸಿದ್ಧತೆ ಕುರಿತು ಡಿ.28 ರಂದು ಭಾನುವಾರ ಎಲ್ಲಾ ಅಧಿಕಾರಿಗಳ ಜತೆ ಖುದ್ದು ಸಭೆ ಕರೆದಿದ್ದೇನೆ. ಎಲ್ಲಾ ಪ್ರದೇಶಗಳ ಸರ್ವೆ ಮಾಡುತ್ತಿದ್ದಾರೆ. ಅಂತಿಮವಾಗಿ ಸಭೆ ನಡೆಸಿ ಸಿದ್ಧತೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರು: ಅಹಿಂದ ಸಮಾವೇಶ ಆದ ಬಳಿಕ ದಲಿತ ಸಮಾವೇಶವನ್ನೂ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿಂದ ಸಮಾವೇಶ ನಡೆದ ಬಳಿಕ ದಲಿತ ಸಮಾವೇಶ ನಡೆಸುತ್ತೇವೆ. ಕಾರ್ಯಕರ್ತರ ಸಮಾವೇಶವನ್ನೂ ಮಾಡುತ್ತೇವೆ. ಎಲ್ಲವನ್ನೂ ಕಾಂಗ್ರೆಸ್ ಪಕ್ಷದ ಅಡಿಯಲ್ಲೇ ಮಾಡಲಿದ್ದು, ವಿಭಿನ್ನವಾಗಿ ಯಾವುದನ್ನೂ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಸಿದ್ದರಾಮಯ್ಯ ಅವರ ಬಳಿಕ ನೀವೇ ಮುಖ್ಯಮಂತ್ರಿ ಆಗಬೇಕೆಂಬ ಕೂಗಿದೆ ಎಂಬ ಪ್ರಶ್ನೆಗೆ, ‘ನೋ ಕಮೆಂಟ್ಸ್. ಅದರ ಬಗ್ಗೆ ನಮಗೇನೂ ಹೇಳಲು ಇಲ್ಲ’ ಎಂದಷ್ಟೇ ಹೇಳಿದರು. ಇನ್ನು ನಾನು ಸಿಡಬ್ಲೂಸಿ ಸದಸ್ಯ ಅಲ್ಲ. ಹಾಗಾಗಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುತ್ತಿಲ್ಲ. ಸಭೆಯಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚರ್ಚೆ ಆದರೆ ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.