
ರಾಮನಗರ (ಡಿ.27): ಹೆಜ್ಜಾಲದಿಂದ ಚಾಮರಾಜನಗರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಭೂಮಿ ಒದಗಿಸಿದರೆ ಯೋಜನೆ ಪೂರ್ಣಗೊಳಿಸಿ ಕೊಡುವುದಾಗಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ. ಬಿಡದಿ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೆಜ್ಜಾಲ-ಸತ್ಯಮಂಗಲ ಹೊಸ ರೈಲ್ವೆ ಯೋಜನೆ ವಿಚಾರವಾಗಿ ನಾನು ಡಿ.ಕೆ.ಶಿವಕುಮಾರ್‌ಗೆ ಫೈಲ್ ಎಲ್ಲಿದೆ ಕೊಡ್ರಪ್ಪ ಎಂದು ಕೇಳಿದೆ. ಅವರು ಕೊಡಲಿಲ್ಲ. ಅದಕ್ಕೆ ಈಗ ಕೇಳುತ್ತಿದ್ದೇನೆ, ನನಗೆ ಜಾಗ ಕೊಡ್ರಪ್ಪ, ಪ್ರಾಜೆಕ್ಟ್ ಮಾಡುತ್ತೇನೆ ಎಂದಿದ್ದೇನೆ ಎಂದು ಹೇಳಿದರು.
ಹೆಜ್ಜಾಲದಿಂದ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ 142 ಕಿ.ಮೀ. ಉದ್ದದ ಯೋಜನೆ ಇದಾಗಿದೆ. ದಯಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೆಕ್ಮೆಂಡ್ ಮಾಡಿ ಜಾಗ ಕೊಡಿಸಿ ಎಂದು ವಿ.ಸೋಮಣ್ಣನವರು, ಪಕ್ಕದಲ್ಲಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ಅವರಲ್ಲಿ ಕೇಳಿದರು. ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿ, ನಮ್ಮ ಹತ್ತಿರ ರೈಲ್ವೆ ಯೋಜನೆ ಭೂಸ್ವಾಧೀನಕ್ಕೆ ಹಣ ಇಲ್ಲ. ನೀವೇ ಯೋಜನೆ ಮುಗಿಸಿ ಎಂದರು. ಆಗ ಸೋಮಣ್ಣನವರು, ಅದೇ ನಿಮಗೆ ಬಂದಿರುವ ಗ್ರಹಚಾರ ಎಂದರು.
ಮಾತು ಮುಂದುವರಿಸಿದ ಬಾಲಕೃಷ್ಣ, ಕೇಂದ್ರ ಸರ್ಕಾರದಲ್ಲಿ ರೈಲ್ವೆ ಯೋಜನೆಗೆ ಹಣ ಇದೆ, ಇದೆಲ್ಲ ಅವರಿಗೆ ಯಾವ ಲೆಕ್ಕ, ಸೋಮಣ್ಣನಂತವರು ಮಂತ್ರಿ ಆಗಿರುವಾಗ ಯಾವುದೂ ಅಸಾಧ್ಯವಲ್ಲ. ಸೋಮಣ್ಣ ಅಸಾಧ್ಯವಾದದ್ದನ್ನೂ ಸಾಧ್ಯ ಮಾಡುವ ವ್ಯಕ್ತಿ. ದಯಮಾಡಿ ಈ ಯೋಜನೆಯನ್ನು ಮಾಡಿಸಿಕೊಡಿ ಎಂದು ಕೇಳಿಕೊಂಡರು.
ಸೋಮಣ್ಣ ಮಾತನಾಡಿ, ನಾನು ಈ ಹಿಂದೆಯೇ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಚೀಫ್ ಸೆಕ್ರೆಟರಿ ಎಲ್ಲರಿಗೂ ಹೇಳಿದ್ದೇನೆ. ಯಾರೂ ಕೂಡಾ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರವನ್ನು ಸರಿಯಾಗಿ ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿಲ್ಲ. ದಿನ ಬೆಳಾಗದರೆ ಕೇಂದ್ರ ಸರ್ಕಾರವನ್ನು ಟೀಕಿಸುವುದೆ ರಾಜ್ಯ ಸರ್ಕಾರದ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.