ಕಾಲ-ಕಾಲಕ್ಕೆ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಅಂತಹ ತೀರ್ಮಾನ ಕೈಗೊಳ್ಳಬೇಕಾದ ರಾಜಕೀಯ ಅನಿವಾರ್ಯತೆಯಲ್ಲಿ ನಾನಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಪರೋಕ್ಷವಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹಾಸನ, [ಅ.27]: ಸಿದ್ದರಾಮಯ್ಯ ಆಪ್ತ, ಮಾಜಿ ಸಂಸದ ಸಿ.ಎಚ್. ವಿಜಯ್ ಶಂಕರ್ ಮತ್ತೆ ಬಿಜೆಪಿಯತ್ತ ಮುಖ ಮಾಡುವ ಸುಳಿವು ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಸ್ಪರ್ಧಿಸಿ ಸೋತ ಮೇಲೆ ಸೈಲೆಂಟ್ ಮೂಡ್ ನಲ್ಲಿರುವ ವಿಜಯ್ ಶಂಕರ್, ಅದ್ಯಾಕೋ ಪದೇ-ಪದೇ ರಾಜಕೀಯ ನಿಂತ ನೀರಲ್ಲ. ಇದು ಹರಿಯೋ ನೀರು ಅಂತೆಲ್ಲ ಹೇಳುತ್ತಲೇ ಇದ್ದಾರೆ. ಇದು ಕಾಂಗ್ರೆಸ್ ತೊರೆದು ಮತ್ತೆ ಮಾತೃ ಪಕ್ಷ ಬಿಜೆಪಿಗೆ ಸೇರುವ ಸೂಚನೆಗಳು ನೀಡುತ್ತಿವೆ.
ಕಾಂಗ್ರೆಸ್‌ಗೆ ಬಿಗ್ ಶಾಕ್ : ಸಿದ್ದರಾಮಯ್ಯ ಆಪ್ತ ಬಿಜೆಪಿಗೆ
ಮತ್ತೆ ಇಂದು [ಭಾನುವಾರ] ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್ ಶಂಕರ್ ಅದೇ ಮಾತನ್ನು ಪುನರುಚ್ಚಾರ ಮಾಡಿದರು. ಜನರ ಮಧ್ಯೆ ಜೀವಂತವಾಗಿರಬೇಕು ಅಂದ್ರೆ ಕಾಲ-ಕಾಲಕ್ಕೆ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಅಂತಹ ತೀರ್ಮಾನ ಕೈಗೊಳ್ಳಬೇಕಾದ ರಾಜಕೀಯ ಅನಿವಾರ್ಯತೆಯಲ್ಲಿ ನಾನಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದರು.
ರಾಜಕಾರಣ ನಿಂತ ನೀರಲ್ಲ,ಇದು ಹರಿಯೋ ನೀರು. ಒಂದುಕಡೆ ನಿಂತರೆ ಕೊಳೆಯುತ್ತೇವೆ. ಹುಣಸೂರಿನಲ್ಲಿ ಸಭೆ ಮಾಡಿದ್ದೇನೆ. ಮೈಸೂರಿನಲ್ಲಿ ಬೆಂಬಲಿಗರು ಹಿತೈಷಿಗಳ ಸಬೆ ಮಾಡಿ ಸೂಕ್ತ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ನಾನು ಹುಣಸೂರಿನಿಂದ ಶಾಸಕನಾಗಿದ್ದವನು. ಹಾಗಾಗಿ ಅಲ್ಲಿಂದ ನಾನು ಅಭ್ಯರ್ಥಿಯಾಗುತ್ತೇನೆ ಎನ್ನೋ ಚರ್ಚೆ ಸಹಜ ಎಂದು ಮತ್ತೊಂದು ಹೊಸ ರಾಜಕೀಯ ಗಾಳಿಪಟವನ್ನು ತೇಲಿಬಿಟ್ಟರು
ಸಿದ್ದರಾಮಯ್ಯ ಮಾತುಕೊಟ್ಟಂತೆ ಅವರು ನನಗೆ ಅವಕಾಶ ಕೊಟ್ಟಿದ್ದಾರೆ. ನನ್ನನ್ನು ಬಿಜೆಪಿಯ ಕೆಲವರು ಸಂಪರ್ಕ ಮಾಡಿದ್ದಾರೆ. ನಾನು ಮೂರು ಬಾರಿ ಮೈಸೂರು ಜಿಲ್ಲಾ ಅಧ್ಯಕ್ಷ [ಬಿಜೆಪಿ] ಆಗಿದ್ದೆ, ಅವರು ಬನ್ನಿ ಎಂದು ಕರೆದಿದ್ದಾರೆ. ಆದರೂ ಆತುರದ ನಿರ್ದಾರ ಮಾಡಲ್ಲ ಎಂದರು.
ಅಷ್ಟೇ ಅಲ್ಲದೇ ಮೊನ್ನೇ ಅಷ್ಟೇ ಕಾಂಗ್ರೆಸ್ ತೊರೆಯುವ ಬಗ್ಗೆ ವಿಜಯ್ ಶಂಕರ್ ತಮ್ಮ ಆಪ್ತ ಕಾರ್ಯಕರ್ತರ ಬಳಿ ಹೇಳಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸುತ್ತಿದ್ದರೆ, ವಿಜಯ್ ಶಂಕರ್ ಕಾಂಗ್ರೆಸ್ ಗೆ ಕೈಕೊಟ್ಟು ಮತ್ತೆ ಮಾತೃಪಕ್ಷ ಬಿಜೆಪಿ ಸೇರುವುದು ಬಹುತೇಕ ಖಚಿತವೆನಿಸುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಕಣಕ್ಕಿಳಿದಿದ್ದ ವಿಜಯ್ ಶಂಕರ್, ಪ್ರತಾಪ್ ಸಿಂಹ ವಿರುದ್ಧ 1.38 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2 ಬಾರಿ ಸಂಸದರಾಗಿದ್ದ ವಿಜಯ್ ಶಂಕರ್, 1994ರಲ್ಲಿ ಹುಣಸೂರಿನ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದರು. ಆ ಬಳಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
1998 ಮತ್ತು 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು, 2014 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ಮತ್ತೆ ಘರ್ ವಾಪಸಿಯಾಗುವ ಲಕ್ಷಣಗಳು ಕಾಣುತ್ತಿವೆ.