ಮಾಂಸ ತಿಂದು ದೇಗುಲಕ್ಕೆ ಸಿದ್ದು ಭೇಟಿ ಬಗ್ಗೆ ವಿವಾದ

By Govindaraj SFirst Published Aug 22, 2022, 3:45 AM IST
Highlights

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಹಿಂದೆ ಮೀನೂಟ ಸೇವಿಸಿ ಧರ್ಮಸ್ಥಳ ಕ್ಷೇತ್ರದಲ್ಲಿ ದರ್ಶನ ಪಡೆದಿದ್ದು ಭಾರೀ ವಿವಾದವಾಗಿತ್ತು. ಇದೀಗ ಕೋಳಿ ಸಾರು ಊಟ ಮಾಡಿ ಕೊಡಗಿನ ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬಿಜೆಪಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮಡಿಕೇರಿ/ಚಿಕ್ಕಬಳ್ಳಾಪುರ (ಆ.22): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಹಿಂದೆ ಮೀನೂಟ ಸೇವಿಸಿ ಧರ್ಮಸ್ಥಳ ಕ್ಷೇತ್ರದಲ್ಲಿ ದರ್ಶನ ಪಡೆದಿದ್ದು ಭಾರೀ ವಿವಾದವಾಗಿತ್ತು. ಇದೀಗ ಕೋಳಿ ಸಾರು ಊಟ ಮಾಡಿ ಕೊಡಗಿನ ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬಿಜೆಪಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆ.18ರ ಗುರುವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೊಟ್ಟೆಎಸೆತ ಬಳಿಕ ಇದೀಗ ಮತ್ತೊಂದು ವಿವಾದ ಶುರುವಾಗಿದೆ. ಮಾತ್ರವಲ್ಲದೆ ಸಿದ್ದರಾಮಯ್ಯ ಅವರು ಮಾಂಸದೂಟ ಸೇವಿಸಿದ್ದಾರೆ ಎನ್ನಲಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ.

ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್‌ನವರಿಗೆ ಯಾವ ಸಂಸ್ಕೃತಿಯೂ ಇಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್‌ ತರಾಟೆಗೆ ತೆಗೆದುಕೊಂಡಿದ್ದರೆ, ಸಿದ್ದರಾಮಯ್ಯ ಅವರು ದೇವರು ಇಂತಹದ್ದನ್ನೆ ತಿಂದುಕೊಂಡು ಬನ್ನಿ ಎಂದು ಹೇಳುತ್ತಾರಾ ಎಂದು ಪ್ರಶ್ನಿಸುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಏತನ್ಮಧ್ಯೆ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿಲ್ಲ. ಕಣಿಲೆ ಪಲ್ಯ ಹಾಗೂ ಅಕ್ಕಿ ರೊಟ್ಟಿಯನ್ನು ಸೇವಿಸಿದ್ದಾರೆ ಎಂದು ಭೋಜನದ ವ್ಯವಸ್ಥೆ ಮಾಡಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಸ್ಪಷ್ಟಪಡಿಸಿದ್ದಾರೆ.

Latest Videos

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ಖಂಡಿಸುತ್ತೇನೆ: ಸಚಿವ ಸುಧಾಕರ್

ನಡೆದಿದ್ದೇನು?: ಆ.18ರಂದು ಕೊಡಗಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರಿಗೆ ಮಾಜಿ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು ನಾಟಿ ಕೋಳಿ ಸಾರು, ರಾಗಿ ಮುದ್ದೆ, ಕಣಿಲೆ, ಅನ್ನ, ತರಕಾರಿ ಸಾರು ಊಟದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ ನಾಟಿ ಕೋಳಿ ಸಾರಿನಲ್ಲಿ ಊಟ ಮಾಡಿದ್ದ ಸಿದ್ದರಾಮಯ್ಯ, ಸಂಜೆ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಈಗ ನಾಟಿ ಕೋಳಿ ತಿಂದು ಸಂಜೆ ದೇವಸ್ಥಾನಕ್ಕೆ ತೆರಳಿರುವ ಸಿದ್ದರಾಮಯ್ಯರ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಬೆನ್ನಲ್ಲೇ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ ಕೇಳಿಬರುತ್ತಿದೆ. ಸಿದ್ದರಾಮಯ್ಯ ಆಹಾರ ಸೇವಿಸುತ್ತಿರುವ ಫೋಟೋವನ್ನು ಹಾಕಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಪ್ಪಚ್ಚು ಆಕ್ರೋಶ: ಈ ಬಗ್ಗೆ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್‌, ಕಾಂಗ್ರೆಸ್‌ನವರಿಗೆ ಯಾವ ಸಂಸ್ಕೃತಿಯೂ ಇಲ್ಲ, ದೇವಸ್ಥಾನ ಸಂಸ್ಕೃತಿಯಂತೂ ಇಲ್ಲ. ಧರ್ಮಸ್ಥಳ ಕ್ಷೇತ್ರಕ್ಕೆ ಮೀನು, ಮಾಂಸ ತಿಂದುಕೊಂಡು ಹೋಗುತ್ತಾರೆ. ಮೊನ್ನೆ ಮಡಿಕೇರಿಗೆ ಬಂದಾಗ ಕೋಳಿ ಸಾರು ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ. ಮಡಿಕೇರಿಯಲ್ಲಿ ಮಾಂಸ ತಿಂದು ಅಂದೇ ಕೊಡ್ಲಿಪೇಟೆ ಬಸವೇಶ್ವರ ದೇವಾಲಯಕ್ಕೆ ಹೋಗಿದ್ದಾರೆ. ಇವರಿಗೆ ದೇವರ ಮೇಲೆ ಭಕ್ತಿ ಇದೆಯಾ? ಇವರೆಲ್ಲಾ ದೇವಸ್ಥಾನಕ್ಕೆ ಯಾಕೆ ಹೋಗೋದು ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಸಿದ್ದು ಸಮರ್ಥನೆ: ಇದಕ್ಕೆ ಚಿಕ್ಕಬಳ್ಳಾಪುರದಲ್ಲಿ ತಿರುಗೇಟು ನೀಡಿರುವ ಸಿದ್ದರಾಮಯ್ಯ ‘ರಾತ್ರಿ ನಾನ್‌ವೆಜ್‌ ತಿಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದು, ಮಧ್ಯಾಹ್ನ ತಿಂದು ಸಂಜೆ ಹೋಗಬಾರದಾ?’ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಎಲ್ಲಿ ಚೆನ್ನಾಗಿದ್ದಾರೆ ಅಲ್ಲಿ ಬೆಂಕಿ, ವಿಷ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರು ಇಂತಹದ್ದನ್ನೆ ತಿಂದುಕೊಂಡು ಬನ್ನಿ ಅಂತ ಹೇಳುತ್ತಾರಾ ಎಂದು ಪತ್ರಕರ್ತರಿಗೆ ಸಿದ್ದರಾಮಯ್ಯ ಮರು ಪ್ರಶ್ನಿಸಿದ್ದಾರೆ. ತಾವು ಅಂದು ಊಟ ಮಾಡಿದ್ದು ಸುದರ್ಶನ ಗೆಸ್ಟ್‌ಹೌಸ್‌ನಲ್ಲಿ, ಮಧ್ಯಾಹ್ನ 2.30ರ ಸಮಯದಲ್ಲಿ. ಸಂಜೆ ಹೋಗುವಾಗ ಪೂಜೆ ಏರ್ಪಾಟು ಮಾಡಿದ್ದರು. ಅದಕ್ಕೆ ಹೋಗಿದ್ದೆ ಎಂದು ಸಮರ್ಥಿಸಿಕೊಂಡರು.

'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'

ಸಿದ್ದರಾಮಯ್ಯ ಅವರು ಮಾಂಸ ಸೇವನೆ ಮಾಡಿಲ್ಲ. ಆವತ್ತು ನಾಟಿ ಕೋಳಿ ಸಾರು, ಆಕ್ಕಿ ರೊಟ್ಟಿಮಾಡಿದ್ದೆವು. ಆದರೆ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿಲ್ಲ. ಕಣಿಲೆ ಪಲ್ಯ ಹಾಗೂ ಅಕ್ಕಿ ರೊಟ್ಟಿಯನ್ನು ಸೇವಿಸಿದರು.
-ವೀಣಾ ಅಚ್ಚಯ್ಯ, ಮಾಜಿ ವಿಧಾನ ಪರಿಷತ್‌ ಸದಸ್ಯೆ

click me!