ಮೈಸೂರು ಲ್ಯಾಂಪ್ಸ್ ಖಾಸಗಿಯವರ ಪಾಲಾಗಲು ಬಿಡುವುದಿಲ್ಲ: ಸಚಿವ ಎಂ.ಬಿ.ಪಾಟೀಲ್‌

By Kannadaprabha NewsFirst Published Feb 15, 2024, 11:03 PM IST
Highlights

ಸರ್ಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ ಕಂಪನಿಯಲ್ಲಿ ಖಾಸಗಿ ಒಡೆತನಲ್ಲಿರುವ ಶೇ.5.6ರಷ್ಟು ಷೇರುಗಳನ್ನು ಸರ್ಕಾರವೇ ಖರೀದಿ ಮಾಡಿ ಸಂಸ್ಥೆಯನ್ನು ಶೇ.100ರಷ್ಟು ಸರ್ಕಾರಿ ಸಂಸ್ಥೆಯನ್ನಾಗಿ ಮಾಡಲಾಗುವುದು, ಯಾವುದೇ ಕಾರಣಕ್ಕೂ ಸಂಸ್ಥೆಯನ್ನು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಭರವಸೆ ನೀಡಿದರು. 

ವಿಧಾನ ಪರಿಷತ್‌ (ಫೆ.15): ಸರ್ಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ ಕಂಪನಿಯಲ್ಲಿ ಖಾಸಗಿ ಒಡೆತನಲ್ಲಿರುವ ಶೇ.5.6ರಷ್ಟು ಷೇರುಗಳನ್ನು ಸರ್ಕಾರವೇ ಖರೀದಿ ಮಾಡಿ ಸಂಸ್ಥೆಯನ್ನು ಶೇ.100ರಷ್ಟು ಸರ್ಕಾರಿ ಸಂಸ್ಥೆಯನ್ನಾಗಿ ಮಾಡಲಾಗುವುದು, ಯಾವುದೇ ಕಾರಣಕ್ಕೂ ಸಂಸ್ಥೆಯನ್ನು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಭರವಸೆ ನೀಡಿದರು. ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ಲ್ಯಾಂಪ್‌ ಕಂಪನಿಯಲ್ಲಿ ಸದ್ಯ ಸರ್ಕಾರದ ಷೇರು ಪ್ರಮಾಣ ಶೇ.91.07ರಷ್ಟು ಇದೆ. ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಸಂಸ್ಥೆ ಶೇ.3.33ರಷ್ಟು ಷೇರು ಬಂಡವಾಳ ಹೊಂದಿದೆ. ಉಳಿದ ಶೇ.5.6ರಷ್ಟು ಷೇರು ಬಂಡವಾಳ ಸಾರ್ವಜನಿಕರದ್ದಾಗಿದೆ ಎಂದರು.

ಮೈಸೂರು ಲ್ಯಾಂಪ್ಸ್ ಮತ್ತು ಎನ್‌ಜಿಇಎಫ್ ಸಂಸ್ಥೆಗೆ ಸೇರಿದ ಜಾಗಗಳಲ್ಲಿ ಸಾರ್ವಜನಿಕ ಉದ್ದೇಶದ ಯೋಜನೆಗಳನ್ನು ಅನುಷ್ಠಾನಗೊಳಿಸಲು 2021ರಲ್ಲಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿದ್ದಾರೆ. ಇವರಲ್ಲದೆ, ಸರ್ಕಾರದ ಕಡೆಯಿಂದ ಏಳು ಮತ್ತು ನಾಗರಿಕರ ವಲಯದಿಂದ ಐದು ಟ್ರಸ್ಟಿಗಳನ್ನು ನೇಮಿಸಲು ಅವಕಾಶ ಇದೆ. ಈ ಟ್ರಸ್ಟ್‌ಗೆ ಯಾವುದೇ ಚಟುವಟಿಕೆಗಳನ್ನು ಸರ್ಕಾರದ ಕಡೆಯಿಂದ ವಹಿಸಿರುವುದಿಲ್ಲ. ಕಂಪನಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಸಂಸ್ಥೆಯನ್ನಾಗಿ ಮಾಡಿದ ನಂತರವೇ ಅದರ ಆಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವರು ವಿವರಿಸಿದರು.

ಅರಣ್ಯ ವ್ಯಾಪ್ತಿಯಲ್ಲಿ ಇಲ್ಲದ ವಸತಿ ಪ್ರದೇಶ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಕೃಷ್ಣ ಬೈರೇಗೌಡ

ಖಾಲಿ ಹುದ್ದೆಗೆ ಅತಿಥಿ ಉಪನ್ಯಾಸಕರ ನೇಮಕ ಸಾಧ್ಯವಿಲ್ಲ: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಸ್ಪಷ್ಟಪಡಿಸಿದರು. ಬಿಜೆಪಿ ಸದಸ್ಯ ಅ.ದೇವೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಆಯಾ ಶೈಕ್ಷಣಿಕ ವರ್ಷಕ್ಕೆ ಸೀಮಿತವಾಗಿ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 

ಆದ್ದರಿಂದ ತಾತ್ಕಾಲಿಕ ವ್ಯವಸ್ಥೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಎದುರಿಗೆ ಖಾಯಂಗೊಳಿಸಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳು ಸೇವಾ ಸಕ್ರಮಾತಿ, ಗೌರವಧನ ಹೆಚ್ಚಳ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಹಲವು ಬಾರಿ ಮುಷ್ಕರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದ್ದು ಸದರಿ ಸಮಿತಿ ವಿಸ್ತೃತ ವರದಿ ಸಲ್ಲಿಸಿದೆ. 

ಬಂಜಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ

ಸದರಿ ವರದಿಯನ್ನು ಪರಿಶೀಲಿಸಿ ಸರ್ಕಾರ ಅತಿಥಿ ಉಪನ್ಯಾಸಕರುಗಳಿಗೆ ಗರಿಷ್ಠ 8 ರಿಂದ 10 ಗಂಟೆಗಳ ಬದಲಾಗಿ ಗರಿಷ್ಠ 15ರಿಂದ 19 ಗಂಟೆಗಳ ಕಾರ್ಯಭಾರವನ್ನು ನೀಡಿ ಗೌರವ ಧನವನ್ನು ಕೂಡ ಹೆಚ್ಚಿಸಿತ್ತು ಎಂದರು. ಬೆಳಗಾವಿಯಲ್ಲಿ ನಡೆದ ಅತಿಥಿ ಉಪನ್ಯಾಸಕರ ಮುಷ್ಕರದ ಹಿನ್ನೆಲೆಯಲ್ಲಿ ಈಗಿನ ಸರ್ಕಾರ ಅವರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದೆ. ವೇತನವನ್ನು 5 ಸಾವಿರ ರು.ಗಳಷ್ಟು ಹೆಚ್ಚಳ ಮಾಡಲಾಗಿದೆ. 5 ಲಕ್ಷ ರು.ಮೌಲ್ಯದ ಆರೋಗ್ಯ ವಿಮೆ, ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು. ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

click me!