
ಕಲಬುರಗಿ (ಜೂ.08): ನನಗೆ ಏರ್‌ಫೋರ್ಸ್ ಸೇರಬೇಕೆಂಬ ಆಸೆಯಿತ್ತು. ವಿಮಾನ ಹಾರಾಟದ ಎನ್‌ಸಿಸಿ ತರಬೇತಿಗೆ ಆಯ್ಕೆಯಾಗಿದ್ದೆ. ಆದರೆ, ಮನೆಯಲ್ಲಿ ನನ್ನ ತಾಯಿಯವರು ಈ ವಿಚಾರದಲ್ಲಿ ಸುತರಾಂ ಒಪ್ಪದ ಕಾರಣ ನನ್ನ ಏರ್‌ಫೋರ್ಸ್ ಸೇರುವ ಬಯಕೆ, ತವಕ ಸಾಕಾರಗೊಳ್ಳದ ಕನಸಾಗಿ ಉಳಿದು ಬಿಟ್ಟಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸೇನಾ ಪೂರ್ವ ತರಬೇತಿ ಕೇಂದ್ರದಲ್ಲಿ ಸೇನೆಯ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು. ಪ್ರಜಾಪ್ರಭುತ್ವ ಉಳಿದದ್ದೇ ಸೇನೆ, ಸಂವಿಧಾನದಿಂದ. ನಾನೂ ಸೇನೆ ಸೇರುವ ಕನಸು ಕಂಡವ, ವಿಮಾನ ಹಾರಾಟದ ತರಬೇತಿ ಪಡೆದು ಏರ್‌ಫೋರ್ಸ್ ಸೇರಬೇಕೆಂಬ ಇಚ್ಚೆ ಇತ್ತಾದರೂ ಮನೆಯಲ್ಲಿ ತಾಯಿಯ ಸಮ್ಮತಿ ಸಿಗದೆ ಏರ್‌ಫೋರ್ಸ್ ಕನಸು ಕೈಗೂಡಲಿಲ್ಲ. ಜಕ್ಕೂರು ಏರ್ ಫೀಲ್ಡ್‌ನಲ್ಲಿ ನನಗೆ ತರಬೇತಿಗೆ ಕರೆದಾಗ ಮನೆಯಲ್ಲಿ ಪೋಷಕರ ಸಹಿ ಕಡ್ಡಾಯವೆಂದರು.
ಖರ್ಗೆ ಸಾಹೇಬರ ಸಹಿಯನ್ನು ಹೇಗೋ ಮಾಡಿಸಿ, ತಾಯಿ ಸಹಿ ತರೋದಾಗಿ ಹೇಳುತ್ತಲೇ 1 ಹಂತದ ವಿಮಾನ ಹಾರಾಟ ತರಬೇತಿ ಮುಗಿಸಿದ್ದೆ. ಅಲ್ಲಿರೋ ಕಮಾಂಡರ್, ತಾಯಿ ಸಹಿಗಾಗಿ ದುಂಬಾಲು ಬಿದ್ದಾಗ ನಾನು ಮನೆಯಲ್ಲಿ ತರಬೇತಿ ವಿಚಾರ ಹೇಳಲೇಬೇಕಾಯ್ತು. ಆಗ ನನ್ನ ತಾಯಿ ಇದೆಲ್ಲ ಗೊಡವೆ ಯಾಕೆಂದು ಸಹಿ ಮಾಡಲಿಲ್ಲ. ಹೀಗಾಗಿ, ನನಗೆ ತರಬೇತಿ ಮುಂದುವರಿಸಲು ಆಗಲಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಎನ್‌ಸಿಸಿ ತರಬೇತಿ ಪಡೆದೆ. ಎನ್‌ಸಿಸಿ ತರಬೇತಿ ರಾಜಕೀಯದಲ್ಲಿಯೂ ಉಪಯೋಗವಾಗಿದೆ. ಆದರೆ, ಹಲವರಿಗೆ ನನ್ನ ಈ ಶಿಸ್ತಿನ ಗುಣಗಳೇ ಅಪಥ್ಯವಾಗಿವೆ ಎಂದು ತಿವಿದರು.
ಬಿಜೆಪಿ ವಿರುದ್ಧ ಗರಂ: ಜಮ್ಮು ಕಾಶ್ಮೀರದ ಪೆಹಲ್ಗಾಮ್ ಕಣಿವೆಯಲ್ಲಿ ಏಪ್ರಿಲ್ 2025ರಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ 20ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದು, ಈ ದಾಳಿಯ ಹೊಣೆಯನ್ನು ಲಷ್ಕರೆ ತೊಯ್ಬಾದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಆದರೆ ಇದುವರೆಗೂ ಉಗ್ರರು ಸಿಕ್ಕಿಲ್ಲ, ಇದು ದೇಶದ ದೊಡ್ಡ ಭದ್ರತಾ ವೈಫಲ್ಯ ಇದರ ಹೊಣೆ ಹೊತ್ತು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ್ ಸಿಂಗ್ ಯಾರಾದರೂ ರಾಜೀನಾಮೆ ಕೊಟ್ರಾ? ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಹಲವರು ಮೃತರಾದರು. ಈ ದುರಂತದಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಇನ್ನೂವರೆಗೆ ಬಹಿರಂಗಪಡಿಸಿಲ್ಲ. ಕುಂಭಮೇಳದಂತಹ ದೊಡ್ಡ ಧಾರ್ಮಿಕ ಸಮಾರಂಭದಲ್ಲಿ ಭದ್ರತೆ ಮತ್ತು ಜನಸಂದಣಿಯ ಯೋಜನೆಯಲ್ಲಿ ವಿಫಲವಾದ ಯೋಗಿ ಸರ್ಕಾರ ರಾಜೀನಾಮೆ ಕೊಡಬೇಕಿತ್ತಲ್ಲವೇ? ಯಾಕೆ ಕೊಡಲಿಲ್ಲ? ಎಂದು ಖರ್ಗೆ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.