ದಾವಣಗೆರೆ/ಹುಬ್ಬಳ್ಳಿ (ಜು.13): ಸಚಿವ ಸಂಪುಟ ವಿಸ್ತರಣೆ ಕುರಿತು ಗುರುವಾರ ನಡೆವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದ್ದು ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ.
ಇದೇವೇಳೆ ಹುಬ್ಬಳ್ಳಿಯಲ್ಲಿ ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿರುವಂತೆ ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ ಎಂದು ತಿಳಿಸಿದ್ದ ಅವರು ದಾವಣಗೆರೆಯಲ್ಲಿ ಮಾತನಾಡುವಾಗ ಶಾಸಕ ಮುನಿರತ್ನಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಅತ್ತ ಸಿಎಂ ರಾಜೀನಾಮೆ ಮಾತು: ಇತ್ತ ಸಂಪುಟದಲ್ಲಿ ಮುನಿರತ್ನಗೆ ಅವಕಾಶ ಸಿಗುತ್ತೆ ಎಂದ ಡಿಸಿಎಂ
ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ನಿಲುವಿಗೆ ನಾವೆಲ್ಲರೂ ಬದ್ಧ. ಶಾಸಕ ಮುನಿರತ್ನಗೆ ಸಚಿವ ಸ್ಥಾನ ಸಿಗುವುದರಲ್ಲಿ ಎರಡು ಮಾತೇ ಇಲ್ಲ. ಚುನಾವಣೆ ವೇಳೆ ಮಾತು ಕೊಟ್ಟಂತೆ ಸಿಎಂ ಯಡಿಯೂರಪ್ಪ ನಡೆದುಕೊಳ್ಳಲಿದ್ದಾರೆ. ನಮ್ಮ ವಿಚಾರದಲ್ಲೂ ಯಡಿಯೂರಪ್ಪ ಮಾತು ಕೊಟ್ಟಂತೆ ನಡೆದುಕೊಂಡರು.
ರಮೇಶ ಜಾರಕಿಹೊಳಿ ಪ್ರಕರಣ ಸಹ ಅಂತಿಮ ಹಂತಕ್ಕೆ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಆಗುವ ತೀರ್ಮಾನದ ಪ್ರಕಾರ ರಮೇಶ್ ಜಾರಕಿಹೊಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಸಿದ್ದುಗೆ ತಿರುಗೇಟು: ಇದೇವೇಳೆ ರಾಜ್ಯದಲ್ಲಿರುವುದು 25 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿ ಸರ್ಕಾರ 25 ಪರ್ಸೆಂಟ್ ಕಮೀಷನ್ ಸರ್ಕಾರವೆಂದು ಸಿದ್ದರಾಮಯ್ಯ ಮಾಡಿದ ಆರೋಪದಲ್ಲಿ ಹುರುಳಿಲ್ಲ. ಸಿಎಂ ಇಳಿ ವಯಸ್ಸಿನಲ್ಲೂ 18 ತಾಸು ಕೆಲಸ ಮಾಡುತ್ತಿದ್ದಾರೆ. ನಾನೂ ಸಿದ್ದರಾಮಯ್ಯ ಜೊತೆಗೆ ಇದ್ದವನು. ಮುಂಜಾನೆ ಎಷ್ಟುಹೊತ್ತಿಗೆ ಎದ್ದು, ಮನೆಯಿಂದ ಹೊರ ಬಂದು ಜನರ ಅಹವಾಲು ಆಲಿಸುತ್ತಿದ್ದರು ಎಂದು ಪ್ರಶ್ನಿಸಿದರು.