ಡಿಕೆ ಸುರೇಶ್ ಗೆದ್ದ ಇವಿಎಂ ಸಮಸ್ಯೆಯಾಗಲಿಲ್ಲ - ಈಗ ಆಗಿದೆ : ಮುನಿರತ್ನ

By Kannadaprabha NewsFirst Published Nov 24, 2020, 7:47 AM IST
Highlights

ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಹಾಗೂ ತುಮಕೂರು ಶಿರಾದ ಶಾಸಕ ರಾಜೇಶ್ ಗೌಡ  ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಇದೇ ವೇಳೆ ಕೈ ಮುಖಂಡರಿಗೆ ಟಾಂಟ್ ನೀಡಿದ್ದಾರೆ

ಬೆಂಗಳೂರು (ನ.24): ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜಯಗಳಿಸಿದ ಮುನಿರತ್ನ ಹಾಗೂ ಶಿರಾ ಕ್ಷೇತ್ರದಲ್ಲಿ ವಿಜಯ ಸಾಧಿಸಿದ ರಾಜೇಶ್‌ ಗೌಡ ಅವರು ಸೋಮವಾರ ವಿಧಾನಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುನಿರತ್ನ ಅವರು ರಾಜರಾಜೇಶ್ವರಿ ತಾಯಿಯ ಹೆಸರಲ್ಲಿ, ರಾಜೇಶ್‌ ಗೌಡ ಅವರು ಭಗವಂತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಇಬ್ಬರೂ ಅಭ್ಯರ್ಥಿಗಳು ಆರ್‌.ಆರ್‌. ನಗರ ಕ್ಷೇತ್ರದಲ್ಲಿ 58 ಸಾವಿರ ಮತಗಳಿಂದ ಮುನಿರತ್ನ ಗೆಲುವು ಸಾಧಿಸಿದ್ದರೆ, ಶಿರಾ ಕ್ಷೇತ್ರದಲ್ಲಿ 13 ಸಾವಿರ ಮತಗಳಿಂದ ರಾಜೇಶ್‌ ಗೌಡ ಜಯಭೇರಿ ಬಾರಿಸಿದ್ದರು.

ಯಾವುದೇ ಖಾತೆ ನಿಭಾಯಿಸುವೆ:

ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು, ಸಚಿವ ಸ್ಥಾನ ನೀಡುವುದು ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ಅವರಿಗೆ ಬಿಟ್ಟವಿಚಾರ. ಆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಮ್ಮ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೊ ಅದಕ್ಕೆ ಬದ್ಧವಾಗಿರುತ್ತೇನೆ. ಮುಖ್ಯಮಂತ್ರಿ ಅವರು ಯಾವ ಖಾತೆ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.

'ಕ್ಯಾಬಿನೆಟ್ ವಿಸ್ತರಣೆ ಆಗುವವರೆಗೂ ತಾಳ್ಮೆಯಿಂದ ಕಾಯುತ್ತೇನೆ, ನಮ್ಮ ನಾಯಕರ ತೀರ್ಮಾನ ಅಂತಿಮ' ...

‘ಎಸ್‌ಬಿಎಂ (ಸೋಮಶೇಖರ್‌, ಬೈರತಿ ಬಸವರಾಜು, ಮುನಿರತ್ನ) ಟೀಮ್‌ನಲ್ಲಿ ಯಾವುದೇ ರೀತಿ ಬಿರುಕು ಇಲ್ಲ. ಎಸ್‌.ಟಿ. ಸೋಮಶೇಖರ್‌ ನೀಡಿದ್ದ ಹೇಳಿಕೆಯನ್ನು ನಾನು ನೋಡಿಲ್ಲ (ಒಟ್ಟಿಗೆ ಇದ್ದರೆ ಮಂತ್ರಿ ಸ್ಥಾನ ಕೇಳಬಹುದು). ನಾವೆಲ್ಲಾ ಒಂದೇ ಎನ್ನುವ ಹೇಳಿಕೆ ಮಾತ್ರ ನೋಡಿದ್ದೇನೆ. ಮೂವರು ಒಟ್ಟಿಗೆ ರಾಜೀನಾಮೆ ಕೊಟ್ಟಿದ್ದೆವು. ಈಗಲೂ ಒಟ್ಟಿಗೆ ಇದ್ದೇವೆ. ಎಸ್‌ಬಿಎಂ ಲೋಗೋ ಒಂದೆ, ಅದು ಬಿಜೆಪಿ’ ಎಂದರು.

‘ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಸದ ಡಿ.ಕೆ. ಸುರೇಶ್‌ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮುನಿರತ್ನ, ಲೋಕಸಭಾ ಚುನಾವಣೆಯಲ್ಲಿ ಅವರು 2.5 ಲಕ್ಷ ಮತಗಳಿಂದ ಗೆದ್ದಾಗ ಇವಿಎಂ ಸಮಸ್ಯೆ ಆಗಲಿಲ್ಲ. ಈಗ ನಾನು ಗೆದ್ದಾಗ ಇವಿಎಂ ಮೇಲೆ ಸಂದೇಹ. ಅವರು ಗೆದ್ದಾಗ ಇದೇ ಅನುಮಾನ ಬಂದಿದ್ದರೆ ಒಪ್ಪಬಹುದಿತ್ತು’ ಎಂದು ಟಾಂಗ್‌ ನೀಡಿದರು.

click me!