ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ: ಎಚ್.ವಿಶ್ವನಾಥ್ ಆಗ್ರಹ

By Kannadaprabha News  |  First Published Jul 10, 2024, 6:47 PM IST

ಸಿಬಿಐನವರಿಂದ ಮಾತ್ರ ಇದರ ತನಿಖೆ ನಡೆಸಲು ಸಾಧ್ಯ. ಹೀಗಾಗಿ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಆಗ್ರಹಿಸಿದರು. 


ಮೈಸೂರು (ಜು.10): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) ನಡೆದಿರುವ ಅಕ್ರಮ ಸುಮಾರು 10 ಸಾವಿರ ಕೋಟಿಯಷ್ಟಿದೆ. ಇಲ್ಲಿನ ಪೊಲೀಸರಿಂದ ಈ ಪ್ರಕರಣದ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಸಿಬಿಐನವರಿಂದ ಮಾತ್ರ ಇದರ ತನಿಖೆ ನಡೆಸಲು ಸಾಧ್ಯ. ಹೀಗಾಗಿ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಜರು ಸ್ಥಾಪಿಸಿದ ಎಂಡಿಎ ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸೇರಿಕೊಂಡು ಎಂಡಿಎ ಮಾನ ಹರಾಜು ಹಾಕಿದ್ದಾರೆ. ಅಹಿಂದ ಹೆಸರಿನಲ್ಲಿ ವೋಟು ತೆಗೆದುಕೊಂಡು ಅಹಿಂದ ಸಮುದಾಯಕ್ಕೆ ಟೋಪಿ ಹಾಕುವ ಕೆಲಸವನ್ನು ಮಾಡಿದ್ದಾರೆ. ಎಂಡಿಎ ಹಗರಣವನ್ನು ಅಷ್ಟು ಸುಲಭವಾಗಿ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದರು.

ಬದಲಿ ನಿವೇಶನಕ್ಕೆ ಸ್ಪಷ್ಟನೆ: ಬದಲಿ ನಿವೇಶನ ಪಡೆದಿದ್ದೇನೆ ಎಂದು ನನ್ನ ವಿರುದ್ಧ ಆರೋಪಿಸಿದ್ದಾರೆ. ಎಂಡಿಎ ಅಕ್ರಮದಲ್ಲಿ ನನ್ನ ಪಾಲು ಇದೆ ಎಂದಿದ್ದಾರೆ. ನನ್ನ ಪತ್ನಿಗೆ ದೇವನೂರು 3ನೇ ಹಂತದಲ್ಲಿ ನೀಡಿದ್ದ ನಿವೇಶನದ ಬಳಿ ವರುಣ ನಾಲೆ ಹಾದು ಹೋಗಿದೆ. ಆ ಸ್ಥಳ ಮನೆ ನಿರ್ಮಿಸಲು ಯೋಗ್ಯವಾಗಿರಲಿಲ್ಲ. ಹೀಗಾಗಿ, ಬೇರೆಡೆ ನಿವೇಶನ ನೀಡಿದ್ದಾರಷ್ಟೇ ಎಂದು ಅವರು ಸ್ಪಷ್ಟಪಡಿಸಿದರು. ನನ್ನ ವಿರುದ್ಧ ಆರೋಪ ಮಾಡಿರುವ ಮುಡಾದ ಅಧ್ಯಕ್ಷ ಓರ್ವ ಮೂಢ. ಶಾಸಕ ಕೆ. ಹರೀಶ್ ಗೌಡ ನೀಡಿರುವ ಹೇಳಿಕೆ ಸರಿಯಲ್ಲ. ಎಲ್ಲರೂ ಸೇರಿಕೊಂಡು ಹಗರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಹೀಗಾಗಿ, ಎಂಡಿಎಯಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಇದು ದೊಡ್ಡ ಕರ್ಮಕಾಂಡವಾಗಿದೆ ಎಂದು ಅವರು ಆರೋಪಿಸಿದರು.

Tap to resize

Latest Videos

undefined

ನಮ್ಮ ಕುಟುಂಬಕ್ಕೆ ವಿಜಯನಗರ ಬಡಾವಣೆಯಲ್ಲಿ ಸೈಟ್ ಕೊಟ್ಟಿಲ್ಲ. ನನಗೂ ಸಿದ್ದರಾಮಯ್ಯಗೂ ಒಂದೇ ಅವಧಿಯಲ್ಲಿ ನಿವೇಶನ ಮಂಜೂರು ಆಗಿದೆ. ಕೆಳಗಿನ ಸೈಟ್ ಬದಲು ಮೇಲುಗಡೆ ಕೊಟ್ಟಿದ್ದಾರೆ. ನನಗೆ ಸೈಟ್ ಇದೆ ಅನ್ನೋದಾದ್ರೆ ನಿಮಗೆ ಯಾಕೆ ಸೈಟ್ ಇಲ್ಲ? ಈ ವಿಚಾರದಲ್ಲಿ ನನ್ನ ಹೆಂಡತಿಗೊಂದು ನ್ಯಾಯ, ಸಿದ್ದರಾಮಯ್ಯ ಹೆಂಡತಿಗೊಂದು ನ್ಯಾಯವೇ ಎಂದು ಅವರು ಕಿಡಿಕಾರಿದರು. ಎಚ್. ವಿಶ್ವನಾಥ್ ಕೂಡ ಬದಲಿ ನಿವೇಶನ ಪಡೆದಿದ್ದಾರೆಂದು ಎಂಡಿಎ ಅಧ್ಯಕ್ಷ ಕೆ. ಮರೀಗೌಡ ಆರೋಪಿಸಿದ್ದಾರೆ. ಎಲ್ಲಾ ಕಾನೂನು ಬದ್ದವಾಗಿ ನಡೆದಿದೆಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ. ಎಲ್ಲಾ ಕಾನೂನು ಬದ್ಧವಾಗಿ ನಡೆದಿದ್ದರೇ ಸರ್ಕಾರ ತನಿಖೆಗೆ ಏಕೆ ವಹಿಸಿದೆ?. ಈ ವಿಚಾರದಲ್ಲಿ ಎಂಡಿಎಯವರು, ಸಚಿವರು ಬಾಯಿಗೆ ಬಂದಂತೆ ಮಾತನಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಬೇಕು ಎಂದು ಅವರು ಆಗ್ರಹಿಸಿದರು.

ಮುಸ್ಲಿಮರು ಕಾಂಗ್ರೆಸ್ಸಿನ ಷಡ್ಯಂತ್ರಕ್ಕೆ ಬಲಿಯಾಗಬಾರದು: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಮಂಜೇಗೌಡ ವಿರುದ್ಧ ಮರೀಗೌಡ ಕ್ರಮ ಕೈಗೊಳ್ಳಲಿ: ಸಿಎ ಸೈಟ್ ಮತ್ತು ಪಾರ್ಕ್ ಗಳು ಮುಡಾದ ಆಸ್ತಿಗಳು. ಇವನ್ನು ಕೂಡ ಕೆಲವರು ಮಾರಾಟ ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಾವು ನಿರ್ಮಿಸಿದ ಬಡಾವಣೆಯೊಂದರ ಪಾರ್ಕ್ ಜಾಗವನ್ನೇ ನಿವೇಶನವನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ. ಇವರ ವಿರುದ್ಧ ಎಂಡಿಎ ಅಧ್ಯಕ್ಷ ಕೆ. ಮರೀಗೌಡ ಕ್ರಮ ಕೈಗೊಳ್ಳುತ್ತಾರಾ? ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸವಾಲು ಹಾಕಿದರು. ಇವರೆಲ್ಲ ಸೇರಿಕೊಂಡು ಸಿದ್ದರಾಮಯ್ಯರನ್ನು ದಿವಾಳಿ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕವಾಗಿ ಬದುಕುತ್ತಿದ್ದೇನೆ. ಇದೇ ಮಾತನ್ನು ನೀವು ಹೇಳುತ್ತೀರಾ? ಎಂದು ಅವರು ಪ್ರಶ್ನಿಸಿದರು.

click me!