
ರಾಮನಗರ (ಜು.10): ನಾವು ಮೂಲತಃ ಬೆಂಗಳೂರು ಜಿಲ್ಲೆಯವರು. ಮಧ್ಯೆ ಯಾರೊ ಯಾವುದೋ ಕಾರಣಕ್ಕಾಗಿ ರಾಮನಗರ ಜಿಲ್ಲೆಯನ್ನಾಗಿ ಮಾಡಿದರು. ಅಭಿವೃದ್ಧಿ ಕಾರ್ಯ ನಡೆದಿಲ್ಲ, ಯಾವ ಬದಲಾವಣೆಗಳು ಆಗಿಲ್ಲ. ಹೀಗಾಗಿ ನಾವು ಮೊದಲಿದ್ದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಬ್ರದರ್ಸ್, ನಾನು ಸೇರಿದಂತೆ ಹಲವರು ಇದೆ ಜಿಲ್ಲೆಯವರು. ಈ ಜಿಲ್ಲೆ ಪರಿಸ್ಥಿತಿ ಬಗ್ಗೆ ನಮಗೆ ಗೊತ್ತು. ನೀವು ಈ ಜಿಲ್ಲೆಯವರಲ್ಲ.
ಈ ಜಿಲ್ಲೆ, ಕ್ಷೇತ್ರದ ಬಗ್ಗೆ ಸರಿಯಾದ ಮಾಹಿತಿ, ಅರಿವು ಇಲ್ಲ. ಮಾಹಿತಿ ಇದ್ದಿದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ. ಈವರೆಗೂ ಜಿಲ್ಲೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಕಲ್ಪಿಸಲಾಗಿಲ್ಲ. ರಾಮನಗರವನ್ನು ಜಿಲ್ಲೆಯಾಗಿ ನೋಡಲು ಆಗುತ್ತಿಲ್ಲ ಎಂದರು. ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರು ನಾಮಕರಣಗೊಂಡ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶಗಳಿವೆ. ಹೀಗಾಗಿಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಡಿ.ಕೆ.ಸುರೇಶ್ ಸೋಲಿಂದ ಕ್ಷೇತ್ರದ ಜನರಿಗೆ ಪಶ್ಚಾತ್ತಾಪ: ಶಾಸಕ ಎಚ್.ಸಿ.ಬಾಲಕೃಷ್ಣ
ಮುಖ್ಯಮಂತ್ರಿಗಳು ಅಭಿವೃದ್ಧಿ ಕೆಲಸ ಬಿಟ್ಟು ಅನಗತ್ಯ ಕಾರಣಗಳ ಚರ್ಚೆಗೆ ಆಸ್ಪದ ಕೊಟ್ಟವರಲ್ಲ. ನಮ್ಮ ಮನವಿಗೆ ಮನ್ನಣೆ ನೀಡಿ 5 ತಾಲೂಕುಗಳು ಸೇರಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ಮುಂದೆ ಕಾದು ನೋಡಿ ಎಂದರು. ಇಲ್ಲಿವರೆಗೆ ಗೆದ್ದು ಹೋದವರು ಜಿಲ್ಲೆಗಾಗಿ ಏನ್ ಮಾಡಿದ್ದಾರೆ, ಎಷ್ಟು ವರ್ಷವಾಗಿದೆ. ಯಾಕಾಗಿ ಕಸದ ನೀರು ಕುಡಿಯುತ್ತಿದ್ದೇವೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಕೋವಿಡ್ ಸಮಯದಲ್ಲಿ ಏನಾಗಿತ್ತು?, ಏನ್ ಮಾಡಿದ್ದಾರೆ. ಸೈಟ್ ಕೊಡುವುದಾಗಿ ಹಣ ಪಡೆದು, ಎಷ್ಟು ಸೈಟ್ ಮನೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿಗರಿಗೆ ರಾಮನ ಹೆಸರು ಕಂಡರೆ ಆಗುವುದಿಲ್ಲ. ಹೀಗಾಗಿ ಜಿಲ್ಲೆ ಹೆಸರು ಬದಲಾವಣೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಇಕ್ಬಾಲ್ ಹುಸೇನ್ , ಸೃಷ್ಟಿಕರ್ತ ರಾಮ. ನಾವೆಲ್ಲ ರಾಮನ ಭಕ್ತರು, ಈ ಬಗ್ಗೆ ಮೊದಲು ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಇವರಿಗೆಲ್ಲ ರಾಮ ಈಗ ಕಾಣುತ್ತಿದ್ದಾರೆ. ನಾವು ಸಾವಿರಾರು ವರ್ಷಗಳಿಂದ ರಾಮನ ಪೂಜೆ ಮಾಡಿಕೊಂಡು ಬಂದಿದ್ದೇವೆ ಎಂದು ತಿರುಗೇಟು ನೀಡಿದರು. ಇಲ್ಲಿ ದೇವರು, ಧರ್ಮ ಇಟ್ಟುಕೊಂಡು ನಾವು ರಾಜಕಾರಣ ಮಾಡುತ್ತಿಲ್ಲ. ಧರ್ಮವೇ ಬೇರೆ, ರಾಜಕಾರಣವೇ ಬೇರೆ. ಧರ್ಮದ ಹೆಸರಲ್ಲಿ ಬೇರೆಯವರು ರಾಜಕಾರಣ ಮಾಡುತ್ತಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾದ್ರೂ ಜೆಡಿಎಸ್ ಬೆಂಬಲ!
ರಾಮದೇವರ ಬೆಟ್ಟಕ್ಕೆ ಎಷ್ಟು ಬಾರಿ ಹೋಗಿದ್ದೀರ?. ಎಷ್ಟು ಬಾರಿ ರಾಮನ ಆರಾಧನೆ ಮಾಡಿದ್ದೀರಿ?. ಬೆಟ್ಟಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ. ಹೆಣ್ಣು ಮಕ್ಕಳಿಗೆ ಸರಿಯಾದ ಶೌಚಾಲಯ ಇಲ್ಲ. ತಾವು ಸೋತಿದ್ದೀರ ಅಂತ ಹೀಗೆಲ್ಲ ಮಾತನಾಡುವುದು ತಪ್ಪು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಗ್ರೆಟರ್ ಬೆಂಗಳೂರು ಮಾಡೋ ವಿಚಾರ ಏನಾಯ್ತು ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಕಾದು ನೋಡಿದರೆ ಗ್ರೇಟರ್ ಬೆಂಗಳೂರು ಏನು ಎಂಬುದು ಅರ್ಥ ಆಗುತ್ತದೆ. ಗ್ರೇಟರ್ ಬೆಂಗಳೂರು ಎಂಬುದರ ಅರ್ಥನೇ ಇವರಿಗೆ ಗೊತ್ತಿಲ್ಲ. ಓದಿ ಅದರ ಕಾನ್ಸೆಪ್ಟ್ ಏನು ಅಂತ ಅರ್ಥ ಮಾಡಿಕೊಳ್ಳಲಿ ಎಂದು ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.