ಈಗ ಬಿಜೆಪಿಗೆ ಬಿಸಿತುಪ್ಪವಾದ ವಿಶ್ವನಾಥ್‌, ಎಂಟಿಬಿ

By Kannadaprabha NewsFirst Published Jan 31, 2020, 11:09 AM IST
Highlights

ಹುಣಸೂರಿನಲ್ಲಿ ಸೋತ ಎಚ್‌.ವಿಶ್ವನಾಥ್‌ ಮತ್ತು ಹೊಸಕೋಟೆಯಲ್ಲಿ ಸೋಲು ಅನುಭವಿಸಿದ ಎಂ.ಟಿ.ಬಿ.ನಾಗರಾಜ್‌ ಅವರು ಇದೀಗ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಪಟ್ಟು ಹಿಡಿದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ

ಬೆಂಗಳೂರು [ಜ.31]:  ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಸೋತ ಇಬ್ಬರು ಅನರ್ಹ ಶಾಸಕರು ಇದೀಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಆಡಳಿತಾರೂಢ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.

"

ಹುಣಸೂರಿನಲ್ಲಿ ಸೋತ ಎಚ್‌.ವಿಶ್ವನಾಥ್‌ ಮತ್ತು ಹೊಸಕೋಟೆಯಲ್ಲಿ ಸೋಲು ಅನುಭವಿಸಿದ ಎಂ.ಟಿ.ಬಿ.ನಾಗರಾಜ್‌ ಅವರು ಇದೀಗ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಪಟ್ಟು ಹಿಡಿದಿರುವುದರಿಂದ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ, ಈ ಸಂಕಷ್ಟದಿಂದ ಪಾರು ಮಾಡುವಂತೆ ಯಡಿಯೂರಪ್ಪ ಅವರು ವರಿಷ್ಠರ ಸಲಹೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ನನ್ನ ಬಗ್ಗೆ ತಪ್ಪು ತಿಳಿಯಬೇಡಿ ಎಂದು ವಿಶ್ವನಾಥ್‌ಗೆ ಸುಧಾಕರ್ ಮನವಿ...

ಆರಂಭದಲ್ಲಿ ಸರ್ಕಾರ ರಚನೆಗೂ ಮುನ್ನ ಅನ್ಯ ಪಕ್ಷಗಳ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ನಡೆದಿರುವ ಮಾತುಕತೆ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿ ಹೊರಬಿದ್ದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತದೆಯೊ ಅಥವಾ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗುತ್ತದೆಯೊ ಎಂಬುದು ಸ್ಪಷ್ಟವಾಗಿಲ್ಲ. ಮೇಲಾಗಿ, ಸೋತವರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದರ ಬಗ್ಗೆಯೂ ಯಾರೊಬ್ಬರೂ ಮಾಹಿತಿ ನೀಡಿಲ್ಲ.

ಮತ್ತೊಂದು ಡಿಸಿಎಂ ಹುದ್ದೆ ಇಲ್ಲ ಎನ್ನುವ ಸಿಎಂ ಹೇಳಿಕೆಗೆ ಶ್ರೀರಾಮುಲು ಫಸ್ಟ್ ರಿಯಾಕ್ಷನ್...

ಆದರೆ, ಇತ್ತೀಚೆಗೆ ಒಬ್ಬೊಬ್ಬರಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂಬುದು ವ್ಯಕ್ತವಾಗುತ್ತದೆ. ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಸೋತವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ವಿಧಾನಮಂಡಲದ ಯಾವುದಾದರೊಂದು ಸದನದ ಸದಸ್ಯರಾದ ನಂತರವೇ ಅಧಿಕಾರಯುತ ಸ್ಥಾನ ನೀಡಬಹುದಾಗಿದೆ. ಸದ್ಯಕ್ಕೆ ಪರಿಷತ್‌ ಸ್ಥಾನಗಳೂ ತೆರವಾಗಿಲ್ಲ. ಬರುವ ಜೂನ್‌ವರೆಗೆ ಕಾಯಲೇಬೇಕಾಗುತ್ತದೆ.

ಕಳೆದ ವಾರ ಯಡಿಯೂರಪ್ಪ ಅವರು ಸೋತವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಹೇಳಿಕೆ ನೀಡಿದ ನಂತರ ಈ ಗೊಂದಲ ಹೆಚ್ಚಾಗಿದ್ದು, ಇದೀಗ ಯಡಿಯೂರಪ್ಪ ಅವರೇ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಸೋತ ಇಬ್ಬರೂ ಅನರ್ಹ ಶಾಸಕರು ಪ್ರತಿನಿತ್ಯ ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತ ನಡೆದರೆ ಮುಜುಗರವಂತೂ ನಿಶ್ಚಿತ.

click me!