ರಾಜ್ಯ ಸಚಿವ ಸಂಪುಟ ಕ್ಲೈಮಾಕ್ಸ್‌ ಇಂದು?

Kannadaprabha News   | Asianet News
Published : Jan 31, 2020, 07:22 AM ISTUpdated : Jan 31, 2020, 03:29 PM IST
ರಾಜ್ಯ ಸಚಿವ ಸಂಪುಟ ಕ್ಲೈಮಾಕ್ಸ್‌ ಇಂದು?

ಸಾರಾಂಶ

ಶುಕ್ರವಾರ ಮಧ್ಯಾಹ್ನ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸೋಣ ಎಂಬ ಮಾತನ್ನು ಅಮಿತ್‌ ಶಾ ಅವರು ಹೇಳಿರುವುದರಿಂದ ಇದೀಗ ಆ ಮಾತುಕತೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲಿ ಎಲ್ಲವೂ ಇತ್ಯರ್ಥವಾದಲ್ಲಿ ಭಾನುವಾರ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು [ಜ.31]:  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಶುಕ್ರವಾರ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

"

ಗುರುವಾರ ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ ಅವರು ತಡರಾತ್ರಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿದರೂ ಸಂಪುಟ ವಿಸ್ತರಣೆ ಕುರಿತ ಸಮಾಲೋಚನೆ ನಡೆಯಲಿಲ್ಲ.

ಶುಕ್ರವಾರ ಮಧ್ಯಾಹ್ನ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸೋಣ ಎಂಬ ಮಾತನ್ನು ಅಮಿತ್‌ ಶಾ ಅವರು ಹೇಳಿರುವುದರಿಂದ ಇದೀಗ ಆ ಮಾತುಕತೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲಿ ಎಲ್ಲವೂ ಇತ್ಯರ್ಥವಾದಲ್ಲಿ ಭಾನುವಾರ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಗುರುವಾರದ ಭೇಟಿ ವೇಳೆಯೇ ಯಡಿಯೂರಪ್ಪ ಅವರು ಸಚಿವ ಸ್ಥಾನದ ಆಕಾಂಕ್ಷಿಗಳ ಹೆಸರುಗಳು ಮತ್ತು ವಿವರಗಳನ್ನು ಒಳಗೊಂಡ ಕಡತವನ್ನು ಅಮಿತ್‌ ಶಾ ಅವರಿಗೆ ನೀಡಿದ್ದಾರೆ. ಆ ಕಡತವನ್ನು ಆಧರಿಸಿ ಶುಕ್ರವಾರ ಮಾತುಕತೆ ನಡೆಸುವ ಸಂಭವವಿದೆ.

ಬಿಎಸ್‌ವೈ ದೆಹಲಿ ಬ್ರೇಕಿಂಗ್, ಯಾರಿಗೆಲ್ಲ ಶುಭ ಶುಕ್ರವಾರ?...

ಮೊದಲಿಗೆ ಭೇಟಿ ವೇಳೆಯೇ ಅಮಿತ್‌ ಶಾ ಅವರು ಶುಕ್ರವಾರ ಬೆಳಗ್ಗೆ 9.30ಕ್ಕೆ ಸಮಯ ಸೂಚಿಸಿದ್ದರು. ನಂತರ ಯಡಿಯೂರಪ್ಪ ಅವರು ಶಾ ನಿವಾಸದಿಂದ ಕರ್ನಾಟಕ ಭವನಕ್ಕೆ ವಾಪಸಾದ ಬಳಿಕ ಮತ್ತೆ ಸಮಯ ಬದಲಾಗಿದೆ. ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿ ಮುಗಿಸಿದ ನಂತರ ಮಧ್ಯಾಹ್ನ ಭೇಟಿ ಮಾಡಲು ಅಮಿತ್‌ ಶಾ ಅವರು ಯಡಿಯೂರಪ್ಪ ಅವರಿಗೆ ಸೂಚಿಸಿದರು.

ವಾಸ್ತವವಾಗಿ ಯಡಿಯೂರಪ್ಪ ಅವರು ಶುಕ್ರವಾರವೇ ಸಂಪುಟ ವಿಸ್ತರಣೆ ಮಾಡಲು ಸಜ್ಜಾಗಿ ಹೋಗಿದ್ದರು. ಗುರುವಾರ ರಾತ್ರಿ ಮಾತುಕತೆ ಮುಗಿಯಯಬಹುದು ಎಂಬ ಲೆಕ್ಕಾಚಾರದಿಂದ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿಗೆ ಹೊರಡಲು ವಿಮಾನ ಪ್ರಯಾಣವನ್ನೂ ನಿಗದಿಪಡಿಸಿದ್ದರು. ಆದರೆ, ಅಮಿತ್‌ ಶಾ ಅವರೊಂದಿಗಿನ ಮಾತುಕತೆ ಮುಂದೂಡಲ್ಪಟ್ಟಿದ್ದರಿಂದ ಪ್ರಯಾಣವನ್ನೂ ಮುಂದೂಡಿದರು.

ಒಂದು ವೇಳೆ ಶುಕ್ರವಾರದ ಮಾತುಕತೆ ವೇಳೆ ಪಕ್ಷದ ವರಿಷ್ಠರು ದೆಹಲಿ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಬೇಡ ಎಂದೇನಾದರೂ ಹೇಳಿದಲ್ಲಿ ಮಾತ್ರ ವಿಳಂಬವಾಗಬಹುದು. ಇಲ್ಲದಿದ್ದರೆ 2-3 ದಿನಗಳಲ್ಲಿ ಸಂಪುಟ ವಿಸ್ತರಣೆ ನಿಶ್ಚಿತ ಎಂದು ಮೂಲಗಳು ತಿಳಿಸಿವೆ.

ಅರ್ಹ ಶಾಸಕರ ಪೈಕಿ ಎಷ್ಟುಮಂದಿಗೆ ಸಚಿವ ಸ್ಥಾನ ನೀಡಲಾಗುತ್ತದೆ? ಪಕ್ಷದ ಮೂಲ ಶಾಸಕರ ಪೈಕಿ ಎಷ್ಟುಮಂದಿಗೆ ಈಗ ಅವಕಾಶ ಸಿಗುತ್ತದೆ? ಈಗಿರುವ ಸಚಿವರ ಪೈಕಿ ಯಾರಿಗಾದರೂ ಕೊಕ್‌ ನೀಡಲಾಗುತ್ತದೆಯೇ? ಅಚ್ಚರಿಯ ಹೆಸರುಗಳು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಲಿವೆಯೇ ಎಂಬುದಕ್ಕೆ ಶುಕ್ರವಾರ ಉತ್ತರ ಸಿಗುವ ಸಾಧ್ಯತೆಯಿದೆ.

ಕಳೆದ ಡಿಸೆಂಬರ್‌ನಲ್ಲಿ ಉಪಚುನಾವಣೆ ನಡೆದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆರಂಭವಾಗಿದ್ದು, ಒಂದಿಲ್ಲೊಂದು ಕಾರಣದಿಂದ ಮುಂದೂಡುತ್ತಲೆ ಬಂದಿತ್ತು. ಆದರೆ, ಇದೀಗ ಅರ್ಹ ಶಾಸಕರ ಸಹನೆಯ ಕಟ್ಟೆಯೊಡುವ ಲಕ್ಷಣ ಕಾಣುತ್ತಿರುವುದರಿಂದ ಇನ್ನೂ ಹೆಚ್ಚು ವಿಳಂಬವಾಗಲಿಕ್ಕಿಲ್ಲ ಎಂದು ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದರು.

ಅರ್ಹ ಶಾಸಕರ ಪೈಕಿ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಹಿಂದೆಲ್ಲ ಬಹಿರಂಗವಾಗಿಯೇ ಹೇಳಿಕೊಂಡು ಬಂದಿದ್ದ ಬಿಜೆಪಿ ನಾಯಕರು ಇತ್ತೀಚೆಗೆ ಭಿನ್ನರಾಗ ಹಾಡತೊಡಗಿದ್ದರಿಂದ ತುಸು ಅನುಮಾನ ವ್ಯಕ್ತವಾಗಿದೆ. ಒಟ್ಟು 11 ಮಂದಿ ಅರ್ಹ ಶಾಸಕರ ಪೈಕಿ 9 ಮಂದಿ ಶಾಸಕರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿದೆ. ಆದರೆ, ಬೆಳಗಾವಿ ಜಿಲ್ಲೆಯ ಮಹೇಶ್‌ ಕುಮಟಳ್ಳಿ ಹಾಗೂ ಶ್ರೀಮಂತ್‌ ಪಾಟೀಲ್‌ ಅವರನ್ನು ಮನವೊಲಿಸಿ ಹಿಂದೆ ಸರಿಸುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ. ಅದು ಯಶಸ್ವಿಯಾಗಿದೆಯೇ ಅಥವಾ ಇಲ್ಲವೇ ಎಂಬುದು ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾದ ಬಳಿಕವೇ ಗೊತ್ತಾಗಬಹುದು.

ಇನ್ನು ಪಕ್ಷದ ಮೂಲ ಶಾಸಕರಾದ ಉಮೇಶ್‌ ಕತ್ತಿ, ಅರವಿಂದ್‌ ಲಿಂಬಾವಳಿ ಅವರ ಹೆಸರುಗಳು ಸಚಿವ ಸ್ಥಾನದ ಪಟ್ಟಿಯಲ್ಲಿ ಕೇಳಿಬಂದಿವೆ. ಜೊತೆಗೆ ಅಚ್ಚರಿ ಎಂಬಂತೆ ಹಾಲಪ್ಪ ಆಚಾರ್‌ ಅವರ ಹೆಸರೂ ಪ್ರಸ್ತಾಪವಾಗಿದೆ.

ಇದನ್ನೂ ನೋಡಿ:  ನೂತನ ಶಾಸಕ ಬಿ.ಸಿ. ಪಾಟೀಲ್ ಹೇಳೋದೇನು?

"

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿ.ಕೆ.ಶಿವಕುಮಾರ್‌ ಒಂದು ಬಾರಿ ಸಿಎಂ ಆಗೇ ಆಗುತ್ತಾರೆ: ಶಾಸಕ ಎಸ್‌.ಟಿ.ಸೋಮಶೇಖರ್‌
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ