ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸುವ ಸಂಬಂಧ ರಾಜ್ಯ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವುದು ಅಗತ್ಯವೆಂದು ಪ್ರತಿಪಾದಿಸಿದ ಕೆಲ ಸಂಸದರು
ನವದೆಹಲಿ(ಡಿ.21): ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅನೌಪಚಾರಿಕವಾಗಿ ಔತಣಕೂಟದೊಂದಿಗೆ ಸಭೆ ನಡೆಸಿದ ರಾಜ್ಯ ಬಿಜೆಪಿ ಸಂಸದರು ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತಕ್ಕೆ ಮದ್ದು ಅರಿಯಲು ಮುಂದಾಗಿದ್ದಾರೆ.
ಗುರುವಾರ ರಾತ್ರಿ ಸಂಸದರೊಬ್ಬರ ಮನೆಯಲ್ಲಿ ಸುಮಾರು 12 ಬಿಜೆಪಿ ಸಂಸದರು ಸೇರಿ ರಾಜ್ಯ ಬಿಜೆಪಿಯ ಇಬ್ಬಣಗಳನ್ನು ಒಟ್ಟಾಗಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಒಂದು ಬಣ ಮುಂದಾಗಿರುವುದು, ಮತ್ತೊಂದು ಬಣ ವಕ್ಫ್ ಹೆಸರಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಎರಡನೇ ಹಂತದ ಹೋರಾಟಕ್ಕೆ ಮುಂದಾಗಿ ರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ಹಿನ್ನಡೆಯಾಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.
undefined
ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತೆ ಸಕ್ರಿಯ: ಯಡಿಯೂರಪ್ಪ ಉತ್ಸವಕ್ಕೆ ವಿಜಯೇಂದ್ರ ತಾತ್ಕಾಲಿಕ ಬ್ರೇಕ್!
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳನ್ನು ಒಟ್ಟುಗೂಡಿಸಬೇಕು. ಇಬ್ಬರೂ ಒಟ್ಟಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎರಡೂ ಬಣಗಳನ್ನು ಒಂದೇ ವೇದಿಕೆ ತರಬೇಕು ಎಂಬ ಹಿನ್ನೆಲೆಯಲ್ಲಿ ಸಂಸದರು ಸುದೀರ್ಘ ಮಾತುಕತೆ ನಡೆಸಿದರು.
ರಾಜ್ಯ ಬಿಜೆಪಿಯ ಕೋರ್‌ಕಮಿಟಿಯನ್ನು ಶಕ್ತಿಯುತ ಗೊಳಿಸಬೇಕು ಎಂದು ಅಭಿಪ್ರಾಯಪಟ್ಟ ಕೆಲ ಸಂಸದರು, ಈ ರೀತಿ ಅಸಮಾಧಾನ ಉಂಟಾದಾಗ ಪ್ರತಿ ಬಾರಿ ದೆಹಲಿಗೆ ಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ ಎಲ್ಲ ಸಮಸ್ಯೆಯನ್ನು ದೆಹಲಿ ನಾಯಕರೇ ಬಗೆಹರಿಸುವುದೂ ಕಷ್ಟ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸುವ ಸಂಬಂಧ ರಾಜ್ಯ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವುದು ಅಗತ್ಯವೆಂದು ಕೆಲ ಸಂಸದರು ಪ್ರತಿಪಾದಿಸಿದ್ದಾರೆ.
ಬಿಜೆಪಿ ಭಿನ್ನಮತ ನಡುವೆಯೇ ಮೋದಿ, ವಿಜಯೇಂದ್ರ ಸಮಾಲೋಚನೆ: ಕುತೂಹಲ ಮೂಡಿಸಿದ ಪ್ರಧಾನಿ ಭೇಟಿ!
ಬಣ ರಾಜಕೀಯಕ್ಕೆ ಅಂತ್ಯ ಹಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಶುಕ್ರವಾರ ಭೇಟಿ ಮಾಡಲು ಸಂಸದರು ಪ್ರಯತ್ನಿಸಿದರಾದರು ಅದು ಸಾಧ್ಯವಾಗಿಲ್ಲ. ಹೀಗಾಗಿ ನಡ್ಡಾ ಭೇಟಿಗೆ ಸಮಯ ಕೇಳಿದ್ದಾರೆಂದು ಗೊತ್ತಾಗಿದೆ. ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಘೋಷಣೆಯಾಗುವ ಮುನ್ನವೇ ಎರಡೂ ಬಣಗಳ ನಾಯಕರನ್ನು ಕರೆಯಿಸಿ ನೀವು ಮಾತಾಡಬೇಕೆಂದು ನಡ್ಡಾರನ್ನು ಒತ್ತಾಯಿಸಲಾಗುವುದು ಎಂದು ಹಿರಿಯ ಸಂಸದರೊಬ್ಬರು ತಿಳಿಸಿದ್ದಾರೆ.
ಸಭೆಯಲ್ಲಿ ಏನು ಚರ್ಚೆ?
• ಬಿಜೆಪಿಯ 12 ಸಂಸದರು ಸಭೆಯಲ್ಲಿ ಭಾಗಿ . ಪಕ್ಷದ ಬಣ ಬಡಿದಾಟದ ಬಗ್ಗೆ ಚರ್ಚೆ
• ಯತ್ನಾಳ್, ವಿಜಯೇಂದ್ರ ಬಣಗಳ ನಡುವಿನ ಭಿನ್ನಮತದ ಬಗ್ಗೆ ಮಾತುಕತೆ.
• ರಾಜ್ಯ ಬಿಜೆಪಿ ಹಿರಿಯ ನಾಯಕರ ಸಮಿತಿ ರಚನೆಗೆ ಸಂಸದರ ಒಲವು.
• ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ ಮಾಡಿ ಸಮಿತಿ ರಚಿಸುವಂತೆ ಮನವಿಗೆ ನಿರ್ಧಾರ.