ದೇಶದಲ್ಲಿ ಆಪತ್ತಿನಲ್ಲಿರುವುದು ಸಂವಿಧಾನವಲ್ಲ, ಕಾಂಗ್ರೆಸ್: ಸಂಸದ ಶ್ರೀನಿವಾಸ್ ಪ್ರಸಾದ್

By Kannadaprabha News  |  First Published Mar 1, 2024, 2:30 AM IST

ದೇಶದಲ್ಲಿ ಸಂವಿಧಾನ ಆಪತ್ತಿನಲ್ಲಿ ಇಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಇದಿದ್ದರೆ ನಾವು ಸುಮ್ಮನಿರುತ್ತಿರಲಿಲ್ಲ. ಆಪತ್ತಿನಲ್ಲಿರುವುದು ಕಾಂಗ್ರೆಸ್ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು. 


ಮೈಸೂರು (ಮಾ.01): ದೇಶದಲ್ಲಿ ಸಂವಿಧಾನ ಆಪತ್ತಿನಲ್ಲಿ ಇಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಇದಿದ್ದರೆ ನಾವು ಸುಮ್ಮನಿರುತ್ತಿರಲಿಲ್ಲ. ಆಪತ್ತಿನಲ್ಲಿರುವುದು ಕಾಂಗ್ರೆಸ್ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ನಡೆಯುತ್ತಿರುವುದು ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಜಾಗೃತಿ ಜಾಥಾ ಅಲ್ಲ. ಅದು, ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಸಂವಿಧಾನ ಜಾಥಾ. ಕಾಂಗ್ರೆಸ್ ಕೇವಲ ಓಟಿಗಾಗಿ ಸಂವಿಧಾನ ಅಪಾಯದಲ್ಲಿದೆ ಎಂದು ಬಿಂಬಿಸುತ್ತಿದ್ದಾರೆ. 

ಕಾಂಗ್ರೆಸ್ ಅಪತ್ತಿನಲ್ಲಿದೆಯೇ ಹೊರತು ಸಂವಿಧಾನವಲ್ಲ ಎಂದು ಅವರು ತಿರುಗೇಟು ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಚೆನ್ನಾಗಿಯೇ ಇದೆ. ಆದರೆ ರಾಜ್ಯ ಸರ್ಕಾರ ತಮ್ಮ ಗ್ಯಾರೆಂಟಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ನಮ್ಮ ಸಂವಿಧಾನ ಗಟ್ಟಿಯಾಗಿದೆ. ಯಾರೂ ಅಲುಗಾಡಿಸಲು ಆಗುವುದಿಲ್ಲ. ಸಂವಿಧಾನಕ್ಕೆ ಧಕ್ಕೆಯಾದರೆ ರಾಜಕೀಯದಲ್ಲಿ ಇರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಅವರು ಸವಾಲು ಹಾಕಿದರು. ಅವರೆಲ್ಲರೂ ಅಧಿಕಾರಕ್ಕೆ ಅಂಟಿ ಕುಳಿತುಕೊಂಡಿದ್ದಾರೆ. ಖರ್ಗೆ ಮುರುಕಲು ಕುರ್ಚಿ ಅಧ್ಯಕ್ಷ. ಚುನಾವಣೆಗಾಗಿ ಸ್ಟಂಟ್ ಮಾಡುತ್ತಿದ್ದಾರೆ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

Latest Videos

undefined

ದೇಶದ್ರೋಹಿ ಕೃತ್ಯ ಯಾರೇ ಮಾಡಿದರೂ ಕ್ಷಮಿಸಲ್ಲ: ಶಾಸಕ ಶರತ್ ಬಚ್ಚೇಗೌಡ

ಎನ್.ಡಿ.ಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಇಂಡಿಯಾ ಮೈತ್ರಿಕೂಟದ ನಾಯಕರೇ ಹೇಳುತ್ತಿದ್ದಾರೆ. ನಾನು 25 ವರ್ಷ ಕಾಂಗ್ರೆಸ್ ನಲ್ಲಿದ್ದವನು. ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್ ಗೆ ಪರ್ಯಾಯವಾಗಿ ಜನತಾ ಪಕ್ಷ ಉದಯವಾದರೂ ಅದು ಬೆಳೆಯಲಿಲ್ಲ. ಆದರೀಗ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದರು. ಗ್ಯಾರಂಟಿ ಯೋಜನೆಯನ್ನು ಟೀಕಿಸುವುದಿಲ್ಲ. ಆದರೆ ಬಡವರಿಗಾಗಿ ಮಾಡಲಿ. 10 ತಿಂಗಳಲ್ಲಿ ಬಡವರನ್ನು ಬಡತನದಿಂದ ಮೇಲೆಕ್ಕೆತ್ತಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರಲ್ಲಿ ಏನಾದರೂ ಮಂತ್ರದಂಡ ಇದೆಯೇ? ಸರ್ವಾಧಿಕಾರಿ ನರೇಂದ್ರ ಮೋದಿ ಎಂದು ಎಲ್ಲೆಡೆ ಕೂಗಿ ಹೇಳಲಾಗುತ್ತಿದೆ. 

ಇದು ಎಲೆಕ್ಷನ್ ಸ್ಟಂಟ್ ಅಷ್ಟೇ. ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೋ ಇಲ್ಲವೋ ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ. ಇದನ್ನು ಜನರು ತೀರ್ಮಾನಿಸುತ್ತಾರೆ ಎಂದು ಅವರು ಹೇಳಿದರು. ಚುನಾವಣೆಯಲ್ಲಿ ದುಡ್ಡಿನ ಹಾಹಾಕಾರ ಸೃಷ್ಟಿಯಾಗುತ್ತಿದೆ. ಇಡೀ ರಾಜಕೀಯ ವ್ಯವಸ್ಥೆಯೇ ಬಹಳ ಕೆಟ್ಟಿದೆ. ಸಿಕ್ಕ ಸಿಕ್ಕವರು ರಾಜಕೀಯಕ್ಕೆ ಬರುತ್ತಿದ್ದಾರೆ. ರಿಯಲ್ ಎಸ್ಟೇಟ್, ಬಿಲ್ಡರ್ ಗಳು, ಹಣವಂತರು ರಾಜಕೀಯದ ಮುನ್ನೆಲೆಗೆ ಬರುತ್ತಿದ್ದಾರೆ. ಇವರಿಗೆ ಬದ್ಧತೆ ಇಲ್ಲ. ರಾಜಕೀಯ ಎಂದರೆ ದುಡ್ಡು ಹಾಕಿ ದುಡ್ಡು ತೆಗೆಯುವ ದಂಧೆಯಂತಾಗಿದೆ. ಜನರು ಕೂಡ ಅಷ್ಟೇ ಕೆಟ್ಟು ಹೋಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮದು ರಾಷ್ಟ್ರೀಯ ಪಕ್ಷ. ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಸರ್ವೇ ಮಾಡಿ ನಿರ್ಧರಿಸುತ್ತಾರೆ. ಮಾರ್ಚ್ ಮೊದಲ ವಾರ ಟಿಕೆಟ್ಘೋಷಣೆ ಆಗುವ ಸಾಧ್ಯತೆ ಇದೆ. ನನ್ನಂತಹ ಅನುಭವ ಇರುವವನು, ಇಂಥವರಿಗೆ ಟಿಕೆಟ್ ಕೊಡಿ ಎಂದು ಕೇಳುವುದು ಸರಿಯಲ್ಲ. ನನ್ನ ಅಳಿಯಂದಿರು ಕೂಡ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮಾರ್ಚ್ ಮೊದಲ ವಾರ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ಇದೆ. ಮೈಸೂರು? ಕೊಡಗು ಕ್ಷೇತ್ರದಿಂದ ನಾನೇ ಅಭ್ಯರ್ಥಿ ಎಂದು ಪ್ರತಾಪ ಸಿಂಹ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಕುಟುಂಬದವರಿಗೆ ಟಿಕೆಟ್ ಕೊಡದಿದ್ದರೆ ಬೇಸರವೇನೂ ಆಗುವುದಿಲ್ಲ. ಹೈಕಮಾಂಡ್ ತೀರ್ಮಾನವನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ನಾನೇನೂ ಅನುಭವವಿಲ್ಲದ ವ್ಯಕ್ತಿಯಲ್ಲ. ಬಾ ಮೈದನಿಗೆ ಕೊಡಿ, ಅಳಿಯನಿಗೆ ಕೊಡಿ ಅನ್ನಲಾಗದು. ಸಮೀಕ್ಷೆ ಮಾಡಿ ಯಾರ ಪರವಾಗಿ ಒಲವು ಇದೆ ಎಂಬುದನ್ನು ನೋಡಿ ಕೊಡುತ್ತಾರೆ. ನನ್ನ ಸಲಹೆ ಕೇಳಿದಾಗ ಹೇಳುತ್ತೇನೆ ಹೊರತು ಯಾರಿಗೆ ಕೊಡಬೇಕು ಎಂದು ಹೇಳುವುದಿಲ್ಲ ಎಂದರು.

ನಾನು ಉಡಾಫೆ ರಾಜಕಾರಣ ಮಾಡಲ್ಲ: ಶಾಸಕ ಎಚ್‌.ಸಿ.ಬಾಲಕೃಷ್ಣ

ದೇಶದಲ್ಲಿ ಬಿಜೆಪಿ ಪರ ವಾತಾವರಣವಿದೆ. ಇದನ್ನು ರಾಜಕೀಯ ತಂತ್ರಗಾರಿಕೆ ರೂಪಿಸುವವರೂ ಹೇಳಿದ್ದಾರೆ. ಕಾಂಗ್ರೆಸ್ ಇಷ್ಟು ದುಃಸ್ಥಿತಿಗೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಲಿ ನಾಯಕರ ಕೊರತೆಯೂ ಇದೆ. ಇದ್ದ ನಾಯಕರನ್ನು ಕೆಟ್ಟದಾಗಿ ನಡೆಸಿಕೊಂಡು ಪಕ್ಷ ಬಿಡುವಂತೆ ಮಾಡಿದರು. ಈ ನಡುವೆ ಬಿಜೆಪಿ ಶ್ರೀರಾಮಮಂದಿರ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ. ಬಿಜೆಪಿಗೆ ಮತ ಹಾಕಬೇಕು ಎಂದು ಬಯಸುತ್ತಿದ್ದಾರೆ ಎಂದರು.

click me!