ನನ್ನ ಜೀವನದಲ್ಲಿ ನನಗೆ ಆದೇಶ ಮಾಡುವ ಅಧಿಕಾರವಿದ್ದದ್ದು ಅಂಬರೀಶ್‌ಗೆ ಮಾತ್ರ. ಬೇರೆ ಯಾರಿಗೂ ನಾನು, ಆ ಅಧಿಕಾರ ಕೊಟ್ಟಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ವಾಭಿಮಾನ ಹೆಸರು ಬಳಸಬೇಡಿ ಎಂದಿದ್ದ ಕಾಂಗ್ರೆಸ್ ಮುಖಂಡ ಡಾ. ಹೆಚ್.ಎನ್. ರವೀಂದ್ರ ಅವರ ವಿರುದ್ಧ ಚಾಟಿ ಬೀಸಿದರು.
ಮದ್ದೂರು (ಮಾ.25): ನನ್ನ ಜೀವನದಲ್ಲಿ ನನಗೆ ಆದೇಶ ಮಾಡುವ ಅಧಿಕಾರವಿದ್ದದ್ದು ಅಂಬರೀಶ್‌ಗೆ ಮಾತ್ರ. ಬೇರೆ ಯಾರಿಗೂ ನಾನು, ಆ ಅಧಿಕಾರ ಕೊಟ್ಟಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ವಾಭಿಮಾನ ಹೆಸರು ಬಳಸಬೇಡಿ ಎಂದಿದ್ದ ಕಾಂಗ್ರೆಸ್ ಮುಖಂಡ ಡಾ. ಹೆಚ್.ಎನ್. ರವೀಂದ್ರ ಅವರ ವಿರುದ್ಧ ಚಾಟಿ ಬೀಸಿದರು. ಬಿಜೆಪಿ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಿಮಾನ ಯಾರೊಬ್ಬರ ಸ್ವತ್ತೂ ಅಲ್ಲ, ಅದಕ್ಕೆ ಪೇಟೆಂಟೂ ಇಲ್ಲ. ಒಂದು ಪಕ್ಷಕ್ಕೆ ಹೋದರೆ ಸ್ವಾಭಿಮಾನ. ಇಲ್ಲದಿದ್ದರೆ ಇಲ್ಲವೇ. ಮಾತನಾಡುವವರು ಮಾತನಾಡಲಿ ಬಿಡಿ. ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಮೈಲೇಜ್ ಸಿಗುತ್ತೆ ಅಂದುಕೊಂಡಿರಬಹುದು.
ನನ್ನ ಗೆಲ್ಲಿಸೋಕೆ 15 ಲಕ್ಷ ಜನರು ಶ್ರಮಪಟ್ಟಿದ್ದಾರೆ. ಮತ ಹಾಕಿದ್ದಾರೆ. ಯಾರೋ ಒಬ್ಬರು ನನ್ನಿಂದ ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಏನು ಇಂಡಿಯಾದಲ್ಲಿ ಇಲ್ಲವಾ, ಅದೇನು ಪಾಕಿಸ್ತಾನದಲ್ಲಿ ಇದೆಯಾ. ಎಂಟು ವರ್ಷಗಳಿಂದ ನಮ್ಮ ದೇಶವನ್ನು ಆಳುತ್ತಿರುವ ಪಕ್ಷ. ನನ್ನ ನಿರ್ಧಾರ ನನ್ನದು. ನನಗೆ ಆದೇಶ ಮಾಡುವ ಅಧಿಕಾರವಿದ್ದದ್ದು ಅಂಬರೀಶ್‌ಗೆ ಮಾತ್ರ. ಅವರೊಬ್ಬರನ್ನು ಬಿಟ್ಟು ಇನ್ಯಾರಿಗೂ ನನಗೆ ಆದೇಶ ಮಾಡುವ ಅಧಿಕಾರವಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಸುಮಲತಾ ಬೆಂಬಲದಿಂದ ಮಂಡ್ಯದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ: ಸಿಎಂ ಬೊಮ್ಮಾಯಿ
ಬಿಜೆಪಿಗೆ ಬೆಂಬಲ ನೀಡಿರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಭಿಮಾನಿಗಳು ಇಷ್ಟಪಡುವುದು ಪಕ್ಷ ನೋಡಿ ಅಲ್ಲ. ನಮ್ಮ ನಡವಳಿಕೆ ನೋಡಿ. ನಾವು ಯಾವುದೇ ಪಕ್ಷದಲ್ಲಿದ್ದರೂ ಅಭಿವೃದ್ಧಿ ಪರವಾಗಿರಬೇಕು ಎಂದು ಬಯಸುತ್ತಾರೆ. ಅದನ್ನು ನೋಡಿ ನಮ್ಮನ್ನು ಪ್ರೀತಿಸುತ್ತಾರೆ. ಈ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಸರಿಯಲ್ಲ ಎಂದರು. ಬಿಜೆಪಿ ಪರ ಚುನಾವಣೆಯಲ್ಲಿ ಪ್ರಚಾರ ನಡೆಸುವ ಬಗ್ಗೆ ಕೇಳಿದಾಗ, ಆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಅದರ ಬಗ್ಗೆ ಸಂಪೂರ್ಣ ಚರ್ಚೆಯಾಗಬೇಕು. ಬಿಜೆಪಿ ರಾಜ್ಯ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್ ಇನ್ನೆರೆಡು ದಿನದಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರೊಂದಿಗೆ ಈ ವಿಚಾರವಾಗಿ ಮೊದಲಸುತ್ತಿನ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಹಳೇ ಮೈಸೂರು ಭಾಗದಲ್ಲಿ ಸುಮಲತಾ ಚುನಾವಣಾ ಪ್ರಚಾರ ಹೇಗಿರಲಿದೆ ಎಂದು ಕೇಳಿದಾಗ, ಅದರ ಬಗ್ಗೆಯೂ ನಿರ್ದಿಷ್ಟಪ್ಲಾನ್ ಮಾಡಿಲ್ಲ. ರೈತ ಸಂಘಕ್ಕೆ ಬೆಂಬಲ ನೀಡುವ ವಿಚಾರದಲ್ಲೂ ಚರ್ಚೆ ನಡೆಯಬೇಕು. ಪಕ್ಷ ಏನು ನಿರ್ಧಾರ ಮಾಡುವುದೋ ನೋಡಬೇಕಿದೆ ಎಂದಷ್ಟೇ ಹೇಳಿದರು. ರಾಜ್ಯ ರಾಜಕಾರಣಕ್ಕೆ ಬರುವಿರಾ ಎಂದು ಸುಮಲತಾರನ್ನು ಕೇಳಿದಾಗ, ನನ್ನ ಮೈಂಡ್‌ಗೆ ಬಂದರೆ ನಾನೇ ನಿರ್ಧಾರ ಮಾಡುತ್ತೇನೆ. ಅದನ್ನು ಬಹಿರಂಗವಾಗಿ ಹೇಳುತ್ತೇನೆ. ಲೋಕಸಭೆ ಚುನಾವಣೆ ಬಗ್ಗೆ ಮುಂದಿನ ವರ್ಷ ನೋಡೋಣ. ಪಕ್ಷದ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ. ನಾನು ಈವರೆಗೆ ಯಾವುದೇ ಚುನಾವಣೆಗೂ ಟಿಕೆಟ್ ಬೇಡಿಕೆ ಇಟ್ಟಿಲ್ಲ, ಬಯಸಿಯೂ ಇಲ್ಲ ಎಂದು ಹೇಳಿದರು.
ಸುಮಲತಾ ದೊಡ್ಡವರು, ಅವರ ಬಗ್ಗೆ ಮಾತಾಡುವಷ್ಟು ನಾನು ಬೆಳೆದಿಲ್ಲ: ಎಚ್‌ಡಿಕೆ
ಉರಿಗೌಡ-ನಂಜೇಗೌಡ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಆ ಬಗ್ಗೆ ಮಾತನಾಡಲು ಎಕ್ಸ್‌ಪರ್ಚ್‌ಗಳಿದ್ದಾರೆ. ಅವರನ್ನೇ ಕೇಳಿ. ಆ ವಿಚಾರವಾಗಿ ನಾನು ಪ್ರತಿಕ್ರಿಯಿಸೋಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಚುಟುಕಾಗಿ ಉತ್ತರಿಸಿದರು. ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಸಾದೊಳಲು ಕೃಷ್ಣೇಗೌಡ, ಬೋರಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಪಿ.ಮಹದೇವು ಇತರರಿದ್ದರು.