ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ: ಜೆಡಿಎಸ್‌ ಶಾಸಕರಿಗೆ ಸಂಸದೆ ಸುಮಲತಾ ಬಹಿರಂಗ ಆಹ್ವಾನ

By Govindaraj S  |  First Published Sep 14, 2022, 11:10 AM IST

ರಾಜಕಾರಣಿಗಳ ಆಣೆ-ಪ್ರಮಾಣ ವಿಚಾರ ಮಂಡ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಮಿಷನ್‌ ಪಡೆದಿರುವ ಆರೋಪದ ವಿಚಾರವಾಗಿ ಜೆಡಿಎಸ್‌ ಶಾಸಕರು ದಾಖಲೆಗಳೊಂದಿಗೆ ಬರಲಿ. 


ಮಂಡ್ಯ (ಸೆ.14): ರಾಜಕಾರಣಿಗಳ ಆಣೆ-ಪ್ರಮಾಣ ವಿಚಾರ ಮಂಡ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಮಿಷನ್‌ ಪಡೆದಿರುವ ಆರೋಪದ ವಿಚಾರವಾಗಿ ಜೆಡಿಎಸ್‌ ಶಾಸಕರು ದಾಖಲೆಗಳೊಂದಿಗೆ ಬರಲಿ. ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ಎದುರು ಆಣೆ-ಪ್ರಮಾಣ ಮಾಡೋಣ. ಆಗ ಯಾರು ನಿಜ ಹೇಳುತ್ತಿದ್ದಾರೆ. ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಜೆಡಿಎಸ್‌ ಶಾಸಕರಿಗೆ ಬಹಿರಂಗ ಆಹ್ವಾನ ನೀಡಿದರು.

ತಾಲೂಕಿನ ಬಿ.ಹೊಸೂರು ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನನ್ನ ಎಂಪಿ ಪ್ರಮಾಣಪತ್ರ ತರುತ್ತೇನೆ. ಅವರು ಎಂಎಲ್‌ಎ ಪ್ರಮಾಣಪತ್ರ ತೆಗೆದುಕೊಂಡು ಮೇಲುಕೋಟೆಗೆ ಬರಲಿ. ಅಲ್ಲೇ ಆಣೆ-ಪ್ರಮಾಣ ಮಾಡಿ ಮಾತನಾಡೋಣ. ಧೈರ್ಯವಿದ್ದರೆ ಮಾಧ್ಯಮದವರ ಮುಂದೆಯೂ ಬರಲಿ. ದಾಖಲೆಗಳನ್ನು ತರುವುದಕ್ಕೆ ಕಮಿಷನ್‌ ಕೊಟ್ಟಿರುವವರೇ ಸಿದ್ಧರಾಗಿದ್ದಾರೆ. ನಾನೇ ಸುಮ್ಮನಿರಿ. ಇಲ್ಲದಿದ್ದರೆ ನಿಮ್ಮ ಗುತ್ತಿಗೆ ಕೆಲಸಗಳೆಲ್ಲವೂ ಹಾಳಾಗುತ್ತೆ ಎಂದು ಹೇಳಿದ್ದೇನೆ. ಆದರೂ ಅವರು ನಾವು ಬರ್ತೇವೆ, ನಿಮಗೆ ಬೆಂಬಲವಾಗಿರುತ್ತೇವೆ ಎಂದು ಗುತ್ತಿಗೆದಾರರ ಸಂಘ ತಿಳಿಸಿರುವುದಾಗಿ ಹೇಳಿದರು.

Tap to resize

Latest Videos

ಸುಮಲತಾ ಪಕ್ಷ ಸೇರ್ಪಡೆ ಸದ್ಯಕ್ಕಿಲ್ಲ: 2023 ಚುನಾವಣೆವರೆಗೆ ಕಾದುನೋಡುವ ಸಾಧ್ಯತೆ

ಅಂಬರೀಶ್‌ ಅವರನ್ನು ವಸತಿ ಖಾತೆ ಸಚಿವ ಸ್ಥಾನದಿಂದ ಏಕೆ ತೆಗೆದು ಹಾಕಿದರು ಎಂಬ ಬಗ್ಗೆ ಸಿದ್ದರಾಮಯ್ಯನವರನ್ನು ಕೇಳಲಿ ಎಂಬ ರವೀಂದ್ರ ಶ್ರೀಕಂಠಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಅಂಬರೀಶ್‌ ಈಗ ನಮ್ಮ ಮುಂದೆ ಇಲ್ಲ. ಅವರು ಜಿಲ್ಲೆಗೆ ನೀಡಿದ ಕೊಡುಗೆ ಏನೆಂಬುದು ಜನರಿಗೆ ಗೊತ್ತಿದೆ. ವೈದ್ಯಕೀಯ ಕಾಲೇಜು ಬರುವುದಕ್ಕೆ ಅವರು ಕಾರಣ. ಮಹಿಳಾ ವಿಶ್ವವಿದ್ಯಾನಿಲಯಕ್ಕೆ 18 ಎಕರೆ ಜಾಗ ಕೊಡಿಸಿ ಕಟ್ಟಡ ಕಟ್ಟಿಸಿದ್ದಾರೆ. ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಈಗ ಅಂಬರೀಶ್‌ ಇಲ್ಲ, ನಾನಿದ್ದೇನೆ. ಧೈರ್ಯವಿದ್ದವರು ನನ್ನ ಮುಂದೆ ಬಂದು ಮಾತನಾಡಲಿ. ಅಂಬರೀಶ್‌ ಏನೆಂಬುದು ನನಗೆ ಗೊತ್ತು. ನಾನೇಕೆ ಸಿದ್ದರಾಮಯ್ಯನವರ ಬಳಿ ಹೋಗಿ ಕೇಳಲಿ. ಬೇಕಿದ್ದರೆ ಅವರೇ ಹೋಗಿ ಕೇಳಲಿ ಎಂದು ತಿರುಗೇಟು ನೀಡಿದರು.

ಅಂಬರೀಶ್‌ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು. ಆರೋಪ ಮಾಡುವವರು ಅಂಬರೀಶ್‌ ಕಾಲಿನ ಧೂಳಿಗೂ ಸಮಾನರಲ್ಲ ಎಂದು ಕಿಡಿಕಾರಿದ ಸುಮಲತಾ, ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಮಾನ ಇದ್ದವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು. ಮಾನ ಇಲ್ಲದವರ ಮೇಲೆ ಏನು ಹಾಕೋದು ಎಂದು ಪ್ರಶ್ನಿಸಿದರು.

ಶಾಸಕರ ವಿರುದ್ಧ ಸಂಸದೆ ವಾಗ್ದಾಳಿ: ನಾನು ಅವರ ರೀತಿ ಕದ್ದು ಮುಚ್ಚಿ ಕೆಲಸ ಮಾಡೋಲ್ಲ. ನಾನು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇನೆ. ಕೆಲವರು ಅಂಬರೀಶ್‌ ವಿರುದ್ಧ ಆರೋಪ-ಟೀಕೆ ಮಾಡುತ್ತಿದ್ದಾರೆ. ಅದು ಅವರ ಅಭಿಮಾನಿಗಳಿಗೆ ನೋವು ತಂದಿದೆ. ನಮ್ಮ ನಡುವೆ ಇಲ್ಲದವರು ಸಮರ್ಥನೆ ಮಾಡಿಕೊಳ್ಳಲು ಇರುವುದಿಲ್ಲ. ಅಂತಹವರ ಬಗ್ಗೆ ಮಾತನಾಡುವುದು ಅವರ ವ್ಯಕ್ತಿತ್ವ-ಸಂಸ್ಕೃತಿಯನ್ನು ತೋರಿಸುತ್ತದೆ. ಅಂಬರೀಶ್‌ ಅವರ ಬಗ್ಗೆ ಮಾತನಾಡುವುದು ಹೇಡಿಗಳ ಲಕ್ಷಣ. ಈಗ ನಾನು ಇದ್ದೇನೆ. ನನ್ನ ಬಗ್ಗೆ ಮಾತನಾಡಿ. ಇವರ ಮಾತುಗಳು ಜನರಿಗೆ ಇಷ್ಟ ಆಗೋಲ್ಲ. ಸುಮ್ಮನೆ ಬರುತ್ತಾರೆ, ಸುಮ್ಮನೆ ಹೋಗುತ್ತಾರೆ ಅಂತಾರೆ. ನಾನು ಎಷ್ಟು ಶ್ರಮ ಹಾಕಿದ್ದೇನೆ ಎಂದು ನನ್ನ ಕೆಲಸ ಹೇಳುತ್ತೆ ಎಂದು ಛಾಟಿ ಬೀಸಿದರು.

ನಾನು ಭ್ರಷ್ಟಳಾಗಿದ್ದರೆ ಬಹಿರಂಗ ಚರ್ಚೆಗೆ ಸಿದ್ಧ: ನಾನು ಭ್ರಷ್ಟಳಾಗಿದ್ದರೆ ಅಥವಾ ಭ್ರಷ್ಟಾಚಾರವೆಸಗಿದ್ದರೆ ದಾಖಲೆಗಳೊಂದಿಗೆ ಬನ್ನಿ. ಯಾವಾಗಲಾದರೂ ಎಲ್ಲಿಯಾದರೂ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ. 24*7 ಯಾವಾಗ ಚರ್ಚೆಗೆ ಬರಲು ನಾನು ರೆಡಿಯಾಗಿದ್ದೇನೆ. ಇದು ನಾನು ನಿಮ್ಮ ಮುಂದಿಡುತ್ತಿರುವ ಸವಾಲು ಎಂದು ಸಂಸದೆ ಸುಮಲತಾ ಅಂಬರೀಶ್‌ ಜೆಡಿಎಸ್‌ ಶಾಸಕರ ವಿರುದ್ಧ ಗುಡುಗಿದರು. ಬಿ.ಹೊಸೂರು ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬರೀಶ್‌ ಅವರ ಕುಟುಂಬದಲ್ಲಿ ಭ್ರಷ್ಟಾಚಾರ ಎನ್ನುವುದಿಲ್ಲ. ಈ ಜನ್ಮದಲ್ಲಿ ಭ್ರಷ್ಟಾಚಾರ ಮಾಡುವುದೂ ಇಲ್ಲ. ದೇವರು ನಮ್ಮನ್ನು ಚೆನ್ನಾಗಿ ಇಟ್ಟಿದ್ದಾನೆ. ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಬರಬೇಕಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಕುಂಬಳಕಾಯಿ ಕಳ್ಳರು ಎಲ್ಲೆಡೆ ಇದ್ದರೆ ನಾನೇನ್‌ ಮಾಡ್ಲಿ: ದಳಪತಿಗಳಿಗೆ ಸುಮಲತಾ ತಿರುಗೇಟು

ನನ್ನ ವಿರುದ್ಧ ಆರೋಪ ಮಾಡುವವರು ಜಾಮೀನಿನ ಮೇಲೆ ಇದ್ದಾರೆ. ಹಲ್ಲು ಕೀಳಿಸಿಕೊಳ್ಳಲು ಲಂಡನ್‌ಗೆ ಹೋಗುವುದಾಗಿ ಸಿಬಿಐ ಕೋರ್ಟ್‌ ಪರ್ಮಿಷನ್‌ ತಗೊಂಡಿದ್ದಾರೆ. ಅವರ ಮೇಲೆ ಎಂತೆಂಥಾ ಆರೋಪ ಇದೆ. ಅದು ನಾನು ಮಾಡಿರೋ ಆರೋಪ ಅಲ್ಲ. ಸಿಬಿಐ ನ್ಯಾಯಾಲಯದಲ್ಲಿದೆ ಅವರ ಅವ್ಯವಹಾರ. ಮೊನ್ನೆಯಷ್ಟೇ ಸಿಬಿಐ ಐದು ಮಂದಿ ಕ್ರಿಮಿನಲ್‌ಗಳಿಗೆ ಶಿಕ್ಷೆ ಕೊಟ್ಟಿದೆ. ನಾಳೆ ಇವರಿಗೂ ಅದೇ ಗತಿಯಾದರೆ ಏನು ಮಾಡುವರು. ಇಂತಹವರಿಂದ ನನ್ನ ಮೇಲೆ ಆರೋಪ ಬರುವುದು ಯಾವ ನ್ಯಾಯ ಎಂದು ಸಂಸದೆ ಸುಮಲತಾ ಪ್ರಶ್ನಿಸಿದರು.

click me!