
ಬೆಂಗಳೂರು (ಮಾ.05): ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯೆ ಸುಮಲತಾ ಅಂಬರೀಶ್ ಅವರ ಮುಂದಿನ ರಾಜಕೀಯ ನಡೆಗೂ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಪೈಕಿ ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂಬುದರ ಬಗ್ಗೆ ಬಹುತೇಕ ಮುಂದಿನ ವಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಮಂಡ್ಯದಲ್ಲಿ ತಮ್ಮ ಆಪ್ತರು ಹಾಗೂ ಬೆಂಬಲಿಗರೊಂದಿಗೆ ಹಲವು ಸುತ್ತಿನ ಸಭೆ ನಡೆಸಿರುವ ಸುಮಲತಾ ಅವರು ಶನಿವಾರ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಭೆ ನಡೆಸಿ ಅಭಿಪ್ರಾಯ ಆಲಿಸಿದರು.
ಈ ತಿಂಗಳ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಸಂಬಂಧ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದು, ಅಷ್ಟರೊಳಗಾಗಿ ಸುಮಲತಾ ಅವರು ತೀರ್ಮಾನ ಕೈಗೊಳ್ಳಬಹುದು. ಶನಿವಾರದ ಬೆಂಬಲಿಗರ ಸಭೆಯಲ್ಲಿ ಯಾವುದೇ ಸ್ಪಷ್ಟನಿಲವಿಗೆ ಬರಲಾಗಲಿಲ್ಲ. ಹೀಗಾಗಿ, ಮುಂದಿನ ವಾರ ಮಂಡ್ಯದಲ್ಲಿ ಮತ್ತೊಂದು ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಎಲ್ಲೆಲ್ಲೋ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣ ನಮಗೇಕೆ? ಜಿಲ್ಲೆಯಲ್ಲೇ ಸಾಕಷ್ಟು ಹಗರಣಗಳಿವೆ: ಸುಮಲತಾ
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಮಂಡ್ಯದಿಂದ ಹಲವು ಮುಖಂಡರು ಬಂದಿದ್ದಾರೆ. ಅವರೊಂದಿಗೆ ಚರ್ಚಿಸಿದ್ದೇನೆ. ಯಾವುದೇ ಪಕ್ಷ ಸೇರುವ ಬಗ್ಗೆ ಚರ್ಚೆ ಮಾಡಿಲ್ಲ. ಈ ಬಗ್ಗೆ ನಾನು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಇನ್ನೂ ಜಿಲ್ಲೆಯ ಹಲವರ ಜತೆ, ವರಿಷ್ಠರ ಜತೆ ಚರ್ಚಿಸಬೇಕು. ನನ್ನ ಲಾಭ-ನಷ್ಟನೋಡಿ ನಿರ್ಧಾರ ಮಾಡಲ್ಲ. ನನ್ನ ಜತೆಗೆ ಇರುವವರ ಬಗ್ಗೆ ನೋಡಿಕೊಂಡು ನಿರ್ಧಾರ ಮಾಡಬೇಕಿದೆ. ಲೋಕಸಭೆ ಅಥವಾ ವಿಧಾನಸಭೆ ಆಸಕ್ತಿಯೋ ಎಂಬುದರ ಬಗ್ಗೆ ನಾನು ಹೇಳಲ್ಲ. ನನ್ನನ್ನು ಯಾವ ರೀತಿ ನೋಡಲು ಜನ ಇಷ್ಟಪಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಈ ಬಗ್ಗೆ ನನ್ನ ಜನ ಯೋಚನೆ ಮಾಡಬೇಕಿದೆ. ಪರಿಸ್ಥಿತಿ ಕೂಡ ನಮಗೆ ಪೂರಕವಾಗಿರಬೇಕು ಎಂದು ಹೇಳಿದರು.
ಪ್ರಧಾನಿ ಮೋದಿ ಸಮ್ಮುಖ ಯಾವ ನಾಯಕರೂ ಪಕ್ಷ ಸೇರೋಲ್ಲ: ಕೇಂದ್ರ ಸಚಿವ ಜೋಶಿ
ನಾನು ಸಂಸದೆಯಾಗಿ ನಾಲ್ಕು ವರ್ಷ ಆಗಿದೆ. ನಿಯಮದ ಪ್ರಕಾರ ಸ್ವತಂತ್ರವಾಗಿ ಗೆದ್ದ ಸಂಸದರು ಆರು ತಿಂಗಳ ಒಳಗೆ ಯಾವುದೇ ರಾಜಕೀಯ ಪಕ್ಷ ಸೇರಬಹುದು. ನಂತರ ಸೇರಲು ಸಾಧ್ಯವಿಲ್ಲ. ಹಾಗೆ ಯಾವುದೋ ಒಂದು ಪಕ್ಷ ಸೇರುವುದಿದ್ದರೆ ಆರಂಭದಲ್ಲೇ ಸೇರುತ್ತಿದ್ದೆ. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಜಿಲ್ಲೆಯ ಅಭಿವೃದ್ಧಿ ಮಾಡಿದ್ದೇನೆ. ಯಾವ ಪಕ್ಷ ಸೇರಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂಬುದರ ಬಗ್ಗೆ ಜಿಲ್ಲೆಯ ಹಿರಿಯರು, ಕುಟುಂಬದ ಸದಸ್ಯರು, ಹಿತೈಷಿಗಳ ಜತೆ ಚರ್ಚಿಸಬೇಕು. ನನ್ನ ರಾಜಕೀಯ ಭವಿಷ್ಯ, ವೈಯಕ್ತಿಕ ಲಾಭ-ನಷ್ಟನೋಡಿ ನಿರ್ಧಾರ ಮಾಡುವುದಿಲ್ಲ. ಜತೆಯಲ್ಲಿರುವ ಜನರಿಗೆ ಯಾವುದು ಒಳ್ಳೆಯದು-ಕೆಟ್ಟದ್ದು ಯೋಚಿಸಿ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.