ಬಿಜೆಪಿ ಮುಖಂಡರ ವಲಸೆ ಬಗ್ಗೆ ತೆರೆಮರೆಯಲ್ಲಿ ಚಟುವಟಿಕೆಗಳು ನಡೆದಿರುವ ಹೊತ್ತಿನಲ್ಲೇ ಪಕ್ಷದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು (ಆ.26): ಬಿಜೆಪಿ ಮುಖಂಡರ ವಲಸೆ ಬಗ್ಗೆ ತೆರೆಮರೆಯಲ್ಲಿ ಚಟುವಟಿಕೆಗಳು ನಡೆದಿರುವ ಹೊತ್ತಿನಲ್ಲೇ ಪಕ್ಷದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ತಮ್ಮ ಹೊನ್ನಾಳಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಉಭಯ ನಾಯಕರಿಗೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಾನು ಬಿಜೆಪಿಯಲ್ಲೇ ಇದ್ದೇನೆ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡಲು ಭೇಟಿಯಾಗಿಲ್ಲ. ನನಗೆ ಕಾಂಗ್ರೆಸ್‌ನಿಂದ ಆಹ್ವಾನವೂ ಬಂದಿಲ್ಲ. ವರಮಹಾಲಕ್ಷ್ಮೇ ಹಬ್ಬದ ಶುಭಾಶಯ ತಿಳಿಸಿ ಹೊನ್ನಾಳಿ, ನ್ಯಾಮತಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಮನವಿ ಮಾಡಲು ಆಗಮಿಸಿದ್ದೆ. ನಾನು ಚುನಾವಣೆಯಲ್ಲಿ ಸೋತಿದ್ದರೂ ಆ ತಾಲೂಕಿನ ಜನರು ರಾಜಕೀಯ ಭವಿಷ್ಯ ನೀಡಿದ್ದಾರೆ. ಹೀಗಾಗಿ ಬರಪೀಡಿತ ತಾಲೂಕು ಆಗಿ ಘೋಷಿಸಲು ಮನವಿ ಮಾಡಿದ್ದೇನೆ ಎಂದರು.
ಎಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿದ ಪ್ರಧಾನಿ ಮೋದಿ: ಬಿಜೆಪಿ ನಾಯಕರ ದಂಡು
ಗ್ಯಾರಂಟಿಗಳ ಅನುಷ್ಠಾನ ತರುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ತಿಂಗಳಾಗಿದ್ದರೂ ಕೊಟ್ಟಭರವಸೆಗಳ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಾಲೂಕಿನ ನೇರಲಗುಂಡಿ, ಬೇವಿನಹಳ್ಳಿ, ಹನುಮನಹಳ್ಳಿ ಬಡಾವಣೆ, ತಿಮ್ಲಾಪುರ ತಾಂಡ, ತಿಮ್ಲಾಪುರ, ಯಕ್ಕನಹಳ್ಳಿ, ಚಿಕ್ಕಹಾಲಿವಾಣ ಬಡಾವಣೆ, ಯರೇಹಳ್ಳಿ, ಯರೇಚಿಕ್ಕನಹಳ್ಳಿ, ನೆಲವೊನ್ನೆ ತಾಂಡ, ಕುಂಬಳೂರು, ಕೂಲಂಬಿ, ತಿಮ್ಲಾಪುರ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ವಿತರಿಸಿ ಮಾತನಾಡಿ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಇಲಾಖೆ ಈ ವರ್ಷಕ್ಕೆ ಮಾತ್ರವೇ ಹಣ ಇಟ್ಟಿದ್ದು ಮುಂದಿನ ವರ್ಷದಿಂದ ಹಣ ಕೊಡಲು ಆಗಲ್ಲ ಎಂದು ಹೇಳಿದ್ದಾರೆ ಎಂದ ರೇಣುಕಾಚಾರ್ಯ.
ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿಯಲಿದೆ. ಈಗಾಗಲೇ ದಿನೋಪಯೋಗಿ ವಸ್ತುಗಳಾದ ತರಕಾರಿ, ಹಾಲು ಸೇರಿ ವಿವಿಧ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು ಸಾರ್ವಜನಿಕರು ಸಾಕಷ್ಟುತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಸರ್ಕಾರ ಕಲ್ಪಿಸಿದರೂ, ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ ಮೊದಲು ಗ್ರಾಮೀಣ ಪ್ರದೇಶಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಗೃಹಲಕ್ಷ್ಮಿ ಯೋಜನೆಗೆ ಮೊದಲು ಯಾವುದೇ ಷರತ್ತುಗಳ ಸರ್ಕಾರ ವಿಧಿಸಿರಲಿಲ್ಲ ಆದರೇ ಇದೀಗ ಷರತ್ತುಗಳ ವಿಧಿಸುತ್ತಿದ್ದು, ಯಾವುದೇ ಷರತ್ತುಗಳಿಲ್ಲದೆ ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ಜಾರಿ ಮಾಡಬೇಕೆಂದರು.
ಪ್ರಧಾನಿ ಮೋದಿ ಸ್ವಾಗತಿಸುವ ಗಣ್ಯರಲ್ಲಿ ಸಿಎಂ, ರಾಜ್ಯಪಾಲರೇ ಇಲ್ಲ!
ಕರಪತ್ರವಿತರಣೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಹಾಸಂಪರ್ಕ ಅಭಿಯಾನದಡಿ ಹೊನ್ನಾಳಿ-ನ್ಯಾಮತಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಜನರ ಮನೆ ಬಾಗಿಲಿಗೆ ತಲುಪಿಸಿ ಕೇಂದ್ರ ಸರ್ಕಾರದ ಸಾಧನೆಗಳ ಜನರಿಗೆ ತಿಳಿಸುವ ಜೊತೆಗೆ ನರೇಂದ್ರ ಮೋದಿಯವರ ಮತ್ತೊಮ್ಮೆ ಪ್ರಧಾನಿಯಾಗಿಸಲು ಎಲ್ಲರೂ ಕೈಜೋಡಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಈ ವೇಳೆ ಬಿಜೆಪಿ ಉಪಾಧ್ಯಕ್ಷ ನೆಲವೊನ್ನೆ ಮಂಜುನಾಥ್, ಕುಂದೂರು ಅನಿಲ್,ಹನುಮಂತಪ್ಪ, ರುದ್ರೇಶಪ್ಪ ಸೇರಿ ಮತ್ತಿತರರಿದ್ದರು.