ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ

Published : Dec 13, 2025, 06:19 AM IST
MP Renukacharya

ಸಾರಾಂಶ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಜನರ ಪಾಲಿಗೆ ಬಂದ ಪುಟ್ಟ, ಹೋದ ಪುಟ್ಟ ಎಂಬಂತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

ತುಮಕೂರು (ಡಿ.13): ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಜನರ ಪಾಲಿಗೆ ಬಂದ ಪುಟ್ಟ, ಹೋದ ಪುಟ್ಟ ಎಂಬಂತಿದೆ. ಮುಖ್ಯಮಂತ್ರಿ ಕುರ್ಚಿ ಮೇಲಾಟದಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತಾಗಿದೆ ಕರ್ನಾಟಕದ ಸ್ಥಿತಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು. ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಎಲ್ಲಾ ಮಂತ್ರಿಗಳು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿರುವ ಪರಿಣಾಮ ಆಡಳಿತ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿದೆ.

ರೈತರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದ್ದಾರೆ. ಕೇಂದ್ರ ಸರ್ಕಾರ ಭತ್ತ, ಮೆಕ್ಕೆಜೋಳ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದರೂ ಸಹ ರಾಜ್ಯ ಸರ್ಕಾರ ಮತ್ತೊಮ್ಮೆ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೊರಟಿದೆ. ಇದು ಖಂಡನೀಯ ಎಂದರು. ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸಿಎಂ ಮನೆಗೆ ಡಿಸಿಎಂ, ಡಿಸಿಎಂ ಮನೆಗೆ ಸಿಎಂ ಉಪಹಾರ ಪ್ರವಾಸ ಮಾಡುತ್ತಾ ರಾಜ್ಯದ ಹಿತ ಕಡೆಗಣಿಸಿದ್ದಾರೆ. ಹೈಕಮಾಂಡ್ ಲಕ್ಷ್ಮಣ ರೇಖೆಯನ್ನು ಮೀರಿ ಮುಖಂಡರು ವರ್ತಿಸುತ್ತಿದ್ದು, ಎಲ್ಲೋ ಒಂದುಕಡೆ ಮುಖ್ಯಮಂತ್ರಿಗಳ ಪುತ್ರ ಮತ್ತು ಅವರ ಬೆಂಬಲಿಗರಿಗೆ ಅಭದ್ರತೆ ಕಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.

ಡಿಕೆಶಿ ಬೆಂಬಲಿಗರು, ಯತೀಂದ್ರ ಸಿದ್ದರಾಮಯ್ಯ ಬೆಂಬಲಿಗರ ನಡುವಿನ ಪೈಪೋಟಿ ಎಲ್ಲೆ ಮೀರಿದೆ. ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಬಾಯಿಂದಲೇ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸಲು ಹೊರಟಂತಿದೆ. ಇದೊಂದು ರೀತಿ ಬೀದಿ ಜಗಳದಂತೆ ಮಾರ್ಪಾಟಾಗಿದೆ ಎಂದು ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು. ಭಾರತೀಯ ಜನತಾ ಪಾರ್ಟಿಯಿಂದ ಉಚ್ಛಾಟನೆಗೊಂಡಿರುವ ವ್ಯಕ್ತಿ ಬಿಜೆಪಿಯ ಬಗ್ಗೆ ಮಾತನಾಡುವ ಯಾವರೀತಿಯ ನೈತಿಕತೆಯನ್ನೂ ಹೊಂದಿಲ್ಲ. ಪ್ರತಿ ದಿನ ದೊಡ್ಡವರಾದ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳುವ ಮೂಲಕ ಹೂವಿನ ಜೊತೆ ನಾರು ಸ್ವರ್ಗಕ್ಕೆ ಹೋಯಿತು ಎಂಬಂತೆ ವರ್ತಿಸುತ್ತಿದ್ದಾರೆ.

ನಾನು ಮುಂದಿನ ಮುಖ್ಯಮಂತ್ರಿ ಎಂದು ಭ್ರಮೆಯಿಂದ ತೇಲುತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿ ಪ್ರವಾಸ ರಾಜ್ಯದ ಸ್ಥಿತಿಗತಿಗಳ ವಿವರ ನೀಡಲಷ್ಟೇ ಬಿಟ್ಟರೆ, ಡಿಕೆಶಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಕುರಿತು ಅಲ್ಲ ಎಂಬ ಮಾಹಿತಿ ನನಗಿದೆ. ಬಾಯಿ ಚಪಲಕ್ಕೆ ಸುಳ್ಳು ಸುದ್ದಿ ಹರಡುವುದನ್ನು ಬಿಡಬೇಕು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಯಾವ ಉದ್ದೇಶ ಇಟ್ಟುಕೊಂಡು ಡಿಕೆಶಿಗೆ ಬಾಹ್ಯ ಬೆಂಬಲ ಎಂದು ಹೇಳಿದ್ದಾರೋ ಗೊತ್ತಿಲ್ಲ.

ಅವರು ನಮಗೆಲ್ಲರಿಗೂ ಮಾರ್ಗದರ್ಶನ ಮಾಡುವಂತಹ ಹಿರಿಯರು, ರಾಜ್ಯದ ಹಿತ ಬಯಸುವವರು, ಅವರ ಹೇಳಿಕೆ ಬಗ್ಗೆ ನಾನು ಮಾತನಾಡಲಾರೆ ಎಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ನಮ್ಮದು ಹಿಂದುತ್ವ ರಾಜಕಾರಣ, ಡಿಕೆಶಿ ಅವರದ್ದು, ಓಲೈಕೆಯ ರಾಜಕಾರಣ. ನಮ್ಮಿಬ್ಬರಿಗೂ ಸರಿ ಬರುವುದಿಲ್ಲ. ಹಾಗಾಗಿ ಕಾಂಗ್ರೆಸ್, ಬಿಜೆಪಿ ಸೇರಿ ಅಧಿಕಾರ ಹಂಚಿಕೆ ಕನಸಿನ ಮಾತು.ಈ ರಾಜ್ಯದ ಜನರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಮೂಲಕ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ಹುನ್ನಾರ

ಶ್ರೀಕ್ಷೇತ್ರ ಧರ್ಮಸ್ಥಳದ ವಿಚಾರವಾಗಿ ಬುರುಡೆ ಗ್ಯಾಂಗ್‌ ಆರೋಪ ಷಡ್ಯಂತ್ರ ಎಂದು ಆರಂಭದಲ್ಲಿಯೇ ನಾನು ಸೇರಿದಂತೆ ಬಿಜೆಪಿ ಹೇಳಿತ್ತು. ಆದರೂ ಸರ್ಕಾರ ಎಸ್.ಐ.ಟಿ. ರಚಿಸಿತ್ತು. ಈಗ ನಮ್ಮ ಹೇಳಿಕೆ ನಿಜ ಎಂದು ಸಾಭೀತಾಗಿದೆ. ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ಆರೋಪದ ಹಿಂದೆ ರಾಜ್ಯ ಸರ್ಕಾರದ ಹುನ್ನಾರವೂ ಇದೆ. ತಲೆ ಬರುಡೆ ಹಿಡಿದುಕೊಂಡು ಬಂದಾಗಲೇ ಪ್ರಶ್ನಿಸಬೇಕಾಗಿತ್ತು. ಎಸ್.ಐಟಿ ತನಿಖೆಯಿಂದ ಕ್ಷೇತ್ರದ ಪಾವಿತ್ರ್ಯ ಮತ್ತಷ್ಟು ಗಟ್ಟಿಕೊಂಡಿದೆ. ಎಡಪಂಕ್ತಿಯರ ಹೇಳಿಕೆಗೆ ಮಣಿದು ಎಸ್.ಐ.ಟಿ. ರಚಿಸಿದ ಸರ್ಕಾರ ಕೈಸುಟ್ಟುಕೊಂಡಿದೆ. ಇದು ಸರ್ಕಾರಕ್ಕೆ ಆಗಿರುವ ಕಪಾಳಮೋಕ್ಷ, ಷಡ್ಯಂತ್ರ ಮಾಡಿದ ಬುರುಡೆ ಗ್ಯಾಂಗ್‌ಅನ್ನು ಒದ್ದು ಒಳಗೆ ಹಾಕಬೇಕು. ಇಲ್ಲವೇ ಗುಂಡಿಡಬೇಕು ಎಂದು ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ, ಮಧುಗಿರಿ ಮಾಧ್ಯಮ ಪ್ರಮುಖ ಅರುಣ್, ಯುವ ಮುಖಂಡ ಗಜೇಂದ್ರ ಹಾಗೂ ಕುಮಾರ್ ಮತ್ತಿತರರು ಜೊತೆಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಿತ್ತೂರು ಕರ್ನಾಟಕ ಹೆಸರಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಶಾಸಕ ರಾಜು ಕಾಗೆ ಆಗ್ರಹ
ಸಿಎಂ ಸಿದ್ದರಾಮಯ್ಯ ಹೇಳಿಕೆಯೇ ನಮಗೆ ಅಂತಿಮ ಮಾರ್ಗದರ್ಶನ: ಸಚಿವ ದಿನೇಶ್ ಗುಂಡೂರಾವ್