
ಬೆಳಗಾವಿ (ಡಿ.13): ಎಲ್ಲಾ ಗೊಂದಲಗಳ ಕುರಿತು ಈಗಾಗಲೇ ಸಿಎಂ, ಡಿಸಿಎಂ ಮಾತನಾಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಹೇಳಿಕೆ ಕೊಡುವ ಸಂದರ್ಭದಲ್ಲಿ ಬಹುಶಃ ಇದಕ್ಕಿಂತ ಬೇರೆ ಮಾರ್ಗದರ್ಶನ ನಮಗೆ ಬೇಕಿಲ್ಲ. ಮುಖ್ಯಮಂತ್ರಿಗಳು ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಅದು ನಮಗೂ ಕೂಡ ಮಾರ್ಗದರ್ಶನ ಆಗಿದೆ. ಅದೇ ನಮಗೆ ಅಂತಿಮ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡಿನ್ನರ್ ಮೀಟಿಂಗ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಡಿನ್ನರ್ ಪಾರ್ಟಿಗೆ ಹೋಗಿಲ್ಲ. ಸಂಪುಟ ಸಭೆ ಇತ್ತು. ಹಾಗಾಗಿ, ನಾನು ಹೋಗಿಲ್ಲ. ಯಾವಾಗಲೂ ಇಲ್ಲಿ ಡಿನ್ನರ್ ಪಾರ್ಟಿ ನಡೆಯುತ್ತಿರುತ್ತದೆ ಎಂದರು.
ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಸೇವೆಗೆ ₹20 ಸಾವಿರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲೋ ಒಂದು ಕಡೆ ಆ ರೀತಿ ಘಟನೆ ಆಗಿರಬಹುದು. ಆದರೂ ಪರಿಶೀಲಿಸುತ್ತೇನೆ. ಗೊತ್ತಿಲ್ಲದೇ ಮಾತನಾಡಲು ಆಗುವುದಿಲ್ಲ. 108 ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ದೇಶದಲ್ಲೆ ಪ್ರಥಮ ಬಾರಿಗೆ ನಾವೇ ವಹಿಸಿಕೊಳ್ಳಲು ಈಗಾಗಲೇ ಕ್ರಮ ವಹಿಸಿದ್ದೇವೆ ಎಂದು ತಿಳಿಸಿದರು. ಬರುವ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಪೂರ್ತಿಯಾಗಿ 108 ಆಂಬ್ಯುಲೆನ್ಸ್‌ಗಳನ್ನು ಸರ್ಕಾರವೇ ನಡೆಸಲಿದೆ. ನೇಮಕಾತಿ ಮಾಡಿಕೊಳ್ಳುತ್ತೇವೆ. ಆಗ ಎಲ್ಲವೂ ನಮ್ಮ ನಿಯಂತ್ರಣದಲ್ಲಿ ಇರಲಿದೆ. ಹೊಣೆಗಾರಿಕೆ ಮತ್ತು ಜವಾಬ್ದಾರಿ ನಮ್ಮ ಆರೋಗ್ಯ ಇಲಾಖೆ ಮೇಲೆ ಇರುತ್ತದೆ. ಖಾಸಗಿ ಏಜೆನ್ಸಿಗಳು ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇತ್ತೀಚಿನ ವರ್ಷಗಳಲ್ಲಿ ಸಿಸೇರಿಯನ್ ಹೆರಿಗೆ ಹೆಚ್ಚಳವಾಗಲು ಗರ್ಭಿಣಿ ಮಹಿಳೆಯರ ಭಯ, ಆತಂಕ ಸೇರಿದಂತೆ ಕುಟುಂಬದ ಸದಸ್ಯರೂ ಕಾರಣರಾಗಿದ್ದಾರೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಐದು ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ. 34-38, ಖಾಸಗಿ ಆಸ್ಪತ್ರೆಗಳಲ್ಲಿ ಶೇ.62ರಷ್ಟು ಹೆರಿಗೆ ನಡೆಯುತ್ತಿದೆ. ದೊಡ್ಡ ನಗರಗಳಲ್ಲಿ ಸಿಸೇರಿಯನ್ ಸಂಖ್ಯೆ ಜಾಸ್ತಿಯಾಗಿದೆ. ಯಾಕೆ ಸಿಸೇರಿಯನ್ ಹೆರಿಗೆ ಜಾಸ್ತಿಯಾಗುತ್ತಿದೆ ಎಂಬುದನ್ನು ತಿಳಿಯಲು ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಯಲ್ಲಿ ಆಡಿಟ್ ಮಾಡಲಾಗುತ್ತದೆ ಎಂದರು.
ಇನ್ನು, ಖಾಸಗಿ ಆಸ್ಪತ್ರೆಗಳು ಹಣ ವಸೂಲಿಗಾಗಿ ಅನಗತ್ಯವಾಗಿ ಹೆರಿಗೆ ಮಾಡಿರುವ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಸಚಿವರು ತಿಳಿಸಿದರು. ಇದಕ್ಕೆ ಸಹಜ ಹೆರಿಗೆ ಬಗ್ಗೆ ಆತಂಕ, ಭಯ ಇದೆ. ಗ್ರಾಮೀಣ ಭಾಗದಲ್ಲಿ ಸಹಜ ಹೆರಿಗೆ ಪ್ರಮಾಣ ಜಾಸ್ತಿ ಇದೆ. ಆದರೆ ವಿದ್ಯಾವಂತರು, ಖಾಸಗಿ ಆಸ್ಪತ್ರೆಗಳು ಹಣ ವಸೂಲಿಗಾಗಿ ಅನಗತ್ಯವಾಗಿ ಹೆರಿಗೆ ಮಾಡಿರುವ ಕುರಿತಂತೆ ಯಾವುದೇ ದೂರು ಬಂದಿಲ್ಲ ಎಂದ ಅವರು, ಕಡಿಮೆ ಹೆರಿಗೆ ನಡೆಯುವ ಆಸ್ಪತ್ರೆಗಳಲ್ಲಿ ಇರುವ ಸ್ತ್ರೀ ರೋಗ ತಜ್ಞ ವೈದ್ಯರನ್ನು ಹೆಚ್ಚು ಹೆರಿಗೆ ನಡೆಯುವ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.