ಜನರ ಸಮಸ್ಯೆ ಆಲಿಸಲಾಗದಿದ್ದರೆ, ಅನುದಾನ ಇಲ್ಲದಿದ್ರೆ ಕಾಂಗ್ರೆಸ್‌ ಸರ್ಕಾರ ವಿಸರ್ಜಿಸಿ: ಸಂಸದ ರಮೇಶ ಜಿಗಜಿಣಗಿ

Published : Oct 31, 2025, 07:37 AM IST
ramesh jigajinagi

ಸಾರಾಂಶ

ಅಜ್ಜಿಗೆ ಅರಿವೇ ಚಿಂತೆಯಾದರೆ, ಮೊಮ್ಮಗಳಿಗೆ ಮದುವೆಯ ಚಿಂತೆ ಎಂಬಂತೆ ರಾಜ್ಯದ ಜನತೆಗೆ ಪ್ರವಾಹ ಮತ್ತು ಅತಿವೃಷ್ಟಿಯಿಂದಾದ ಹಾನಿ ಪರಿಹಾರದ ಚಿಂತೆಯಾದರೆ ಕಾಂಗ್ರೆಸ್ಸಿಗರಿಗೆ ಸಿಎಂ ಸ್ಥಾನ, ಮಂತ್ರಿ ಪದವಿಯ ಚಿಂತೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.

ವಿಜಯಪುರ (ಅ.31): ಅಜ್ಜಿಗೆ ಅರಿವೇ ಚಿಂತೆಯಾದರೆ, ಮೊಮ್ಮಗಳಿಗೆ ಮದುವೆಯ ಚಿಂತೆ ಎಂಬಂತೆ ರಾಜ್ಯದ ಜನತೆಗೆ ಪ್ರವಾಹ ಮತ್ತು ಅತಿವೃಷ್ಟಿಯಿಂದಾದ ಹಾನಿ ಪರಿಹಾರದ ಚಿಂತೆಯಾದರೆ ಕಾಂಗ್ರೆಸ್ಸಿಗರಿಗೆ ಸಿಎಂ ಸ್ಥಾನ, ಮಂತ್ರಿ ಪದವಿಯ ಚಿಂತೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಗತಿಸಿದರೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ‌‌. ಒಂದೇ ಒಂದು ಮಹತ್ತರ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗದೆ ಈ ಹಿಂದಿನ ಸರ್ಕಾರದ ಯೋಜನೆಗಳನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಜನ ಸಂಕಷ್ಟದಲ್ಲಿದ್ದು ಪರಿಹಾರಕ್ಕೆ ಅಂಗಲಾಚುತ್ತಿದ್ದರೆ ಶಾಸಕರು, ಸಚಿವರು, ಸಿಎಂ ಮತ್ತು ಡಿಸಿಎಂ ಆದಿಯಾಗಿ ಎಲ್ಲರೂ ಅಧಿಕಾರದ ಹಪಾಹಪಿಗೆ ಇಳಿದಿದ್ದಾರೆ. ಇವರ ಪರಸ್ಪರ ಕಚ್ಚಾಟ, ಪೈಪೋಟಿಯಿಂದಾಗಿ ಅಭಿವೃದ್ಧಿ ಪರ ಚರ್ಚೆ, ಜನಪರ‌ ಕಾಳಜಿ, ನೆರವಿನ ನಿರೀಕ್ಷೆಗಳೆಲ್ಲವೂ ಮಣ್ಣುಪಾಲಾಗುತ್ತಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ದಿನೇ ದಿನೇ ಜೋರಾಗಿದ್ದರೆ ಜಿಲ್ಲೆಗಳಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರೆಲ್ಲ ಎದ್ದು ಕುಳಿತಿದ್ದಾರೆ. ಇವರ ಈ ಕಚ್ಚಾಟ ಕಂಡು ಜನ ರೋಸಿ ಹೋಗಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಮಾತನಾಡದ ಶಾಸಕರು ಮಂತ್ರಿ ಪದವಿಗಾಗಿ ದಿನಕ್ಕೊಂದು ಸರ್ಕಸ್ ನಡೆಸಿದ್ದಾರೆ‌. ಕ್ಷಣಕ್ಕೊಂದು ನಾಟಕ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮಾಡಲಾಗದಿದ್ದರೆ, ಜನರ ಸಮಸ್ಯೆ ಆಲಿಸಲಾಗದಿದ್ದರೆ, ಅನುದಾನವೇ ಇಲ್ಲದಿದ್ದರೆ ಸರ್ಕಾರ ವಿಸರ್ಜನೆಗೊಳಿಸಿ ಮತ್ತೆ ಜನರ ಮುಂದೆ ಹೋಗಿ. ಆದರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ,‌ ಜನರ ದಿಕ್ಕು ತಪ್ಪಿಸುವ ಕೃತ್ಯವನ್ನು ಎಂದಿಗೂ ಮಾಡಬೇಡಿ ಎಂದಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗುಂಡಿಗಳು ರಾರಾಜಿಸುತ್ತಿವೆ. ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ತೊಗರಿ, ಹತ್ತಿ, ಮಕ್ಕೆಜೋಳ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಹಾಳಾಗಿದ್ದು ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ‌. ಹಿಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು ಸಕಾಲಕ್ಕೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಿಗುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಅಳಿದುಳಿದ ಕಬ್ಬು ಕಾರ್ಖಾನೆಗಳು ಕಳುಹಿಸಲು ಸನ್ನದ್ಧರಾಗಿದ್ದರೂ ಕಬ್ಬಿನ ದರ ನಿಗದಿ ಮಾಡಿಲ್ಲ. ಹೀಗಾಗಿ ಕಬ್ಬು ನೆರೆಯ ಮಹಾರಾಷ್ಟ್ರದ ಪಾಲಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಮತ್ತು ಸಂಕಷ್ಟಗಳ ಕಡೆ ಗಮನ ಕೊಡದೇ ಅಧಿಕಾರಕ್ಕಾಗಿ ಕಿತ್ತಾಟ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ

ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ದಿನಕ್ಕೊಂದು ವಿವಾದ, ಚರ್ಚೆ ಹುಟ್ಟು ಹಾಕುತ್ತಿದೆ. ಆ ಮೂಲಕ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ನಡೆಸಿದೆ. ಆರ್‌ಎಸ್ಎಸ್ ವಿರುದ್ಧ ಮಾತನಾಡುವುದು, ಹಿಂದು ಧರ್ಮದ ಸನ್ಯಾಸಿಗಳನ್ನು ಅವಮಾನಿಸುವುದು, ಜಾತಿ ಸಮೀಕ್ಷೆ ಹೆಸರಲ್ಲಿ ಧರ್ಮ ವಿಭಜಿಸುವುದು ಹೀಗೆ ಅನೇಕ ಕುಕೃತ್ಯಗಳಿಂದ ಜನರ ಸಮಸ್ಯೆ ಮತ್ತು ಸಂಕಷ್ಟಗಳನ್ನು ಮರೆಮಾಚಲು ಹೊರಟಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ ಮತ್ತು ಅನ್ಯಾಯ ಎಂದು ರಮೇಶ ಜಿಗಜಿಣಗಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು
ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ