
ಗಂಗಾವತಿ (ಜು.21): ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳಿವೆ. ತಾವೇ ಕಚ್ಚಾಡಿಕೊಂಡು ಸರ್ಕಾರ ಕೆಡವಿಕೊಳ್ಳುತ್ತಾರೆ. ನಾವೇನೂ ಮಾಡಬೇಕಾಗಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಸುತ್ತಿಕೊಂಡಿದೆ. ಅರ್ಧಕ್ಕಿಂತ ಹೆಚ್ಚು ಸಚಿವರು ವಿವಿಧ ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಕಾಂಗ್ರೆಸ್‌ನದು ಬೋಗಸ್ ಗ್ಯಾರಂಟಿ. ಒಂದು ತಿಂಗಳು ಕೊಟ್ಟರೆ ಮೂರು ತಿಂಗಳು ಕೊಡೋದಿಲ್ಲ ಎಂದು ಆರೋಪಿಸಿದರು.
ಆಗಸ್ಟ್ 15ರ ನಂತರ ಹೋರಾಟ: ಒಳ ಮೀಸಲು ಜಾರಿಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಮಾದಿಗ ಸಮುದಾಯಕ್ಕೆ ಒಳ ಮೀಸಲು ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದ್ದು, ಎರಡು ವರ್ಷವಾದರೂ ಜಾರಿಗೊಳಿಸದೇ ಸಮಿತಿ ರಚಿಸುವ ನಾಟಕವಾಡುತ್ತಿದೆ. ಜಾರಿಗಾಗಿ ಆ.1ರ ವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡುತ್ತಿದ್ದು, ಸ್ಪಂದಿಸದಿದ್ದರೆ ಆ.15ರ ನಂತರ ಜಿಲ್ಲೆ, ತಾಲೂಕಾಧಿಕಾರಿಗಳ ಕಚೇರಿಗೆ ಬೀಗ ಜಡಿದು ರಾಜ್ಯ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದರು.
ರಾಹುಲ್ ಯಾವೂರ ದಾಸಯ್ಯ: ಎಐಸಿಸಿ ಸಭೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಹಿಂದುಳಿದ ವರ್ಗಗಳ ಬಿರುದು ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿ, ನರೇಂದ್ರ ಮೋದಿ 11ವರ್ಷ ದೇಶದ ಪ್ರಧಾನಿಯಾಗಿ, 12 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ಕೆಲಸ ಮಾಡಿದವರು. ದೇಶದ ಪ್ರಧಾನಿ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರು. ಹೀಗಿರುವಾಗ ರಾಹುಲ್ ಗಾಂಧಿ ಯಾವೂರ ದಾಸಯ್ಯ ಎಂದು ವ್ಯಂಗ್ಯವಾಡಿದರು.
ದೇಶದ ಹಿಂದುಳಿದ ವರ್ಗಗಳ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ವ್ಯಕ್ತಿ ರಾಹುಲ್ ಗಾಂಧಿ. ಅವರಿಗೂ ಹಿಂದುಳಿದ ವರ್ಗದವರಿಗೂ ಏನ್ ಸಂಬಂಧ? ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹಿಂದುಳಿದವರು ಯಾವ ರೀತಿ ಬದುಕುತ್ತಿದ್ದಾರೆ ಎನ್ನುವ ಕಲ್ಪನೆಯೂ ಅವರಿಗಿಲ್ಲ ಎಂದರು. ಸುರ್ಜೆವಾಲಾ ನಡೆಸಿದ ಶಾಸಕರ ಸಭೆ ಕುರಿತು ಪ್ರತಿಕ್ರಿಯಿಸಿ, ಪಕ್ಷವೊಂದರ ಪದಾಧಿಕಾರಿಗೆ ಸಂವಿಧಾನ ಬದ್ಧವಾಗಿ ಚುನಾಯಿತ ಶಾಸಕರ ಜತೆ ಸಭೆ ನಡೆಸಲು ಯಾವುದೇ ಅಧಿಕಾರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.