ನಿಮಗೆ ವ್ಯವಹಾರ ಬೇಕು ಅಂದಾಗ ನೈಸ್ ರಸ್ತೆ ಬೇಕಾಗಿತ್ತು. ಈಗ ವ್ಯವಹಾರ ಇಲ್ಲವಲ್ಲ ಅದಕ್ಕೆ ನೈಸ್ ರಸ್ತೆಯನ್ನು ವಿರೋಧ ಮಾಡುತ್ತಿದ್ದೀರಿ. ಅಷ್ಟಕ್ಕೂ ನೀವು ಮುಖ್ಯಮಂತ್ರಿ ಆಗಿದ್ದಾಗ ನೈಸ್ ರಸ್ತೆ ಯೋಜನೆ ಕುರಿತು ಒಂದೇ ಒಂದು ಸಭೆ ನಡೆಸಲಿಲ್ಲ ಏಕೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದರು.
ರಾಮನಗರ (ಆ.18): ನಿಮಗೆ ವ್ಯವಹಾರ ಬೇಕು ಅಂದಾಗ ನೈಸ್ ರಸ್ತೆ ಬೇಕಾಗಿತ್ತು. ಈಗ ವ್ಯವಹಾರ ಇಲ್ಲವಲ್ಲ ಅದಕ್ಕೆ ನೈಸ್ ರಸ್ತೆಯನ್ನು ವಿರೋಧ ಮಾಡುತ್ತಿದ್ದೀರಿ. ಅಷ್ಟಕ್ಕೂ ನೀವು ಮುಖ್ಯಮಂತ್ರಿ ಆಗಿದ್ದಾಗ ನೈಸ್ ರಸ್ತೆ ಯೋಜನೆ ಕುರಿತು ಒಂದೇ ಒಂದು ಸಭೆ ನಡೆಸಲಿಲ್ಲ ಏಕೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದರು. ಬಿಡದಿ ಪಟ್ಟಣದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದಿಂದ ಬಿಡದಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಮಂಜೂರಾಗಿರುವ ಕೆಸಿಸಿ ಬೆಳೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಸಿಗುತ್ತದೆ ಅಂತ ನೈಸ್ ರಸ್ತೆ ಬಗ್ಗೆಯೇ ಮಾತನಾಡುತ್ತಿದ್ದಾರೆ. ಆ ನೈಸ್ ರಸ್ತೆಗೆ ಸಹಿ ಹಾಕಿದವರು ಯಾರು? ಡಿ.ಕೆ. ಶಿವಕುಮಾರ್ ಅಥವಾ ಕಾಂಗ್ರೆಸ್‌ನ ಬೇರೆ ನಾಯಕರು ಯಾರಾದರು ಸಹಿ ಹಾಕಿದ್ದರಾ? ನಿಮಗೆ ಸಹಿ ಹಾಕಲು ಯಾರಾದರು ಹೇಳಿದ್ದರು? ನಿಮ್ಮವರೆ ತಾನೇ ಸಹಿ ಹಾಕಿದ್ದು. ನಿಮಗೆ ವ್ಯವಹಾರ ಬೇಕು ಅಂದಾಗ ನೈಸ್ ರಸ್ತೆ ಬೇಕಾಗಿತ್ತು. ಈಗ ವ್ಯವಹಾರ ಇಲ್ಲವಲ್ಲ ಅದಕ್ಕೆ ಮಾತನಾಡುತ್ತಿದ್ದೀರಾ ಎಂದು ಟೀಕಿಸಿದರು. ನೈಸ್ ರಸ್ತೆ ಹೆಸರಿನಲ್ಲಿ ಬೆಂಗಳೂರು - ಮೈಸೂರು ಭಾಗದ ರೈತರಿಗೆ ಅನ್ಯಾಯವಾಗಿದ್ದರೆ ಅದು ನಿಮ್ಮಿಂದ ಅನ್ನೋದನ್ನು ಮರೆಯಬಾರದು.
ಬೆಂಗಳೂರಲ್ಲಿ ನಿಮ್ಮ ಗಾಡಿಗೆ ಫ್ಯಾನ್ಸಿ ನಂಬರ್ ಬೇಕಾ?: ಬರೋಬ್ಬರಿ ಇಷ್ಟು ದುಡ್ಡು ಕೊಟ್ರೆ ಸಾಕು!
ತಮಿಳುನಾಡಿನ ಹೊಸೂರು ಉದ್ಧಾರ ಆಗಲು ನೀವು ಕಾರಣ. ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರದ ಕಡೆಗೆ ಜನರು ಹೋಗುತ್ತಿದ್ದಾರೆ ಅಂದರೆ ಅದಕ್ಕೆ ನೀವು ಕಾರಣ. ನೈಸ್ ರಸ್ತೆಯನ್ನು ಸಂಪೂರ್ಣಗೊಳಿಸಿದ್ದರೆ ರೈತರ ಆಸ್ತಿಮೌಲ್ಯ 5ರಿಂದ 10 ಕೋಟಿ ರುಪಾಯಿ ಬೆಲೆ ಬಾಳುತ್ತಿತ್ತು. ಮುಖ್ಯಮಂತ್ರಿ ಆಗಿದ್ದಾಗ ನೈಸ್ ರಸ್ತೆ ಯೋಜನೆ ಕುರಿತು ಒಂದೇ ಒಂದು ಸಭೆ ಕರೆಯಲಿಲ್ಲ. ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದೀರಿ. ನೀವು ರೈತರಿಗೆ ಮಾಡಿರುವ ಅನ್ಯಾಯವನ್ನು ಮರೆಯಬೇಡಿ ಎಂದು ಸುರೇಶ್ ವಾಗ್ದಾಳಿ ನಡೆಸಿದರು.
ನೈಸ್ ರಸ್ತೆ ಬಗ್ಗೆ ಏನಾದರು ಒಂದು ತೀರ್ಮಾನ ತೆಗೆದುಕೊಳ್ಳಲೇ ಬೇಕಿದೆ. ನ್ಯಾಯಾಲಯದಲ್ಲಿ ಕೇಸ್ ಮಾಡಲು ಆಗುವುದಿಲ್ಲ ಅಂತಲ್ಲ. ನಮಗೂ ವಯಸ್ಸು ಆಗುತ್ತಾ ಹೋಗುತ್ತದೆ. ಉಂಟು ಅಥವಾ ಇಲ್ಲ ಏನಾದರೂ ತೀರ್ಮಾನ ಆಗಲೇಬೇಕು. ಇದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಬೇಕು ಎಂದರು. ಟಿವಿಯಲ್ಲಿ ಸ್ಟೇಟ್‌ಮೆಂಟ್ ಕೊಟ್ಟಾಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ರೈತರ ಜೀವಕ್ಕೆ ಸಮಾಧಾನ ಆಗಬೇಕಾದರೆ ನೈಸ್ ರಸ್ತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಇಲ್ಲದಿರುವ ಲಿಟಿಗೇಷನ್ ಸೃಷ್ಟಿಸಿದರೆ ಲಿಟಿಗೇಷನ್ ನಡೆಯುತ್ತಲೇ ಇರುತ್ತದೆ.
ನನ್ನಿಂದ ಹಿಡಿದು ನನ್ನ ಮೊಮ್ಮಕ್ಕಳ ಕಾಲದವರೆಗೂ ಲಿಟಿಗೇಷನ್ ನಡೆಯುತ್ತದೆಯೇ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ. ಯಾರು ಎಷ್ಟುದಿನ ಬದುಕುತ್ತಾರೊ ಗೊತ್ತಿಲ್ಲ. ಇರುವಷ್ಟುದಿನ ಬಡವರಿಗೆ, ರೈತರಿಗೆ ಅನುಕೂಲವಾಗುವ ಕೆಲಸ ಮಾಡಬೇಕು. ಅದನ್ನು ಮಾಡಲು ನಿಮ್ಮ ಸಲಹೆ ಬೇಕಿದೆ. ಚುನಾವಣೆ ಬಂದಾಗ ಟೀಕೆ ಮಾಡಲಿ, ಈಗ ರೈತರಿಗೆ ಏನಾಗಬೇಕು ಎಂಬುದರ ಬಗ್ಗೆ ಸಕಾರಾತ್ಮವಾದ ಸಲಹೆಗಳನ್ನು ನೀಡಲಿ ಎಂದು ಸುರೇಶ್ ಹೇಳಿದರು.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಘೋಷಿಸಿದಂತೆ ಅವುಗಳ ಅನುಷ್ಠಾನಕ್ಕೆ ಚಾಲನೆ ನೀಡಿದೆ. ಬಡವರ ಏಳಿಗೆಯನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಹೊಟ್ಟೆನೋವು ಬಂದಿದ್ದು, ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ ಗ್ಯಾರಂಟಿಗಳ ಅನುಕೂಲ ಪಡೆಯುವುದಿಲ್ಲವೆಂದು ಬಹಿರಂಗವಾಗಿ ಘೋಷಣೆ ಮಾಡಿ ತೋರಿಸಿ ಎಂದು ಸವಾಲು ಹಾಕಿದರು. ಐದು ಗ್ಯಾರಂಟಿಗಳನ್ನು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿ ಮಾಡಿಲ್ಲ. ಮಹಿಳೆಯರು ಖುಷಿಯಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ದೇವಸ್ಥಾನದ ಹುಂಡಿಗಳಲ್ಲಿ 3-4 ಸಾವಿರ ಕೋಟಿ ಕಾಣಿಕೆ ಹಾಕಿದ್ದಾರೆ.
ಮಾರ್ಗ ಮಧ್ಯೆ 2 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಹಣದ ಚಲಾವಣೆ ನಡೆದು ಬಡವರು ಏಳಿಗೆ ಕಾಣುತ್ತಿದ್ದಾರೆ. ಇದನ್ನು ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು. ನೀವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಘೋಷಣೆ ಮಾಡಿದ ಒಂದೇ ಒಂದು ಕಾರ್ಯವನ್ನು ಜಾರಿಗೆ ತಂದಿರುವ ಉದಾಹರಣೆ ಇದ್ದರೆ ಹೇಳಿ. ಅಧಿಕಾರ ಬಂದರೆ ಸಾಕು ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಉದ್ಯಮಿಗಳ ಜೊತೆ ಕಾಲ ಕಳೆಯುತ್ತಿದ್ದರು. ನಿಮಗೆ ನಿಮ್ಮ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲ. ಇವತ್ತು ಬಾಯಿ ಬಡಿದುಕೊಳ್ಳುತ್ತಿದ್ದೀರಿ ಎಂದು ಕುಮಾರಸ್ವಾಮಿ ವಿರುದ್ಧ ಸುರೇಶ್ ವಾಗ್ದಾಳಿ ನಡೆಸಿದರು.
ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಸೇರಿದಂತೆ ಯಾವುದೇ ಇಲಾಖೆಗಳಲ್ಲಿ ಕಾಮಗಾರಿಗಳ ಬಿಲ್ ಮಂಜೂರು ಮಾಡಿಲ್ಲ. ಮೂರು ನಾಲ್ಕು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಬಿಲ್ ಪಾವತಿ ಮಾಡುತ್ತೇವೆ. ಅದಕ್ಕೆ ಕಮಿಷನ್ ಪಡೆಯುತ್ತಿದ್ದಾರೆಂದು ಹೆದರಿಸುತ್ತಿದ್ದಾರೆ. ರಾಮನಗರವನ್ನು ಎಷ್ಟುಉದ್ಧಾರ ಮಾಡಿದ್ದೀರಿ ಹೇಳಿ. ನಿಮ್ಮ ಬದಲಾವಣೆ ಆಗಿದಿಯೇ ಹೊರತು ರೈತರ ಪರಿಸ್ಥಿತಿ ಬದಲಾಗಿಲ್ಲ ಎಂದು ಹೇಳಿದರು.
ಇನ್ನೂ ಮೂರೇ ತಿಂಗಳು ಮುಂದಾನಾಗುತ್ತೆ ಕಾದು ನೋಡಿ: ಸಿ.ಟಿ.ರವಿ ಸ್ಫೋಟಕ ಹೇಳಿಕೆ
ಶಾಸಕ ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಎಸ್.ರವಿ, ಮಾಜಿ ಸದಸ್ಯ ಸಿ.ಎಂ. ಲಿಂಗಪ್ಪ, ಬಿಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷ ಯರೇಹಳ್ಳಿ ಮಂಜು, ಬಿಡದಿ ಸೊಸೈಟಿ ನಿರ್ದೇಶಕರಾದ ಕುಮಾರ್, ಮಹೇಶ್, ಜೀವನ್ ಬಾಬು, ನರಸಿಂಹಯ್ಯ, ಲೀಲಾವತಿ, ರಘು, ಸಿಇಒ ಕಿರಣ್, ಬಿಡದಿ ಪುರಸಭೆ ಸದಸ್ಯ ಸಿ.ಉಮೇಶ್, ರಾಮಚಂದ್ರ, ಹೊಂಬಯ್ಯ, ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ಮುಖಂಡರಾದ ಡಿ.ಎಂ. ವಿಶ್ವನಾಥ್, ಉಮಾಶಂಕರ್, ಎಚ್.ಎಲ್. ಚಂದ್ರು, ಕಾವ್ಯ, ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.