ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಅಮರಶಿಲ್ಪಿ ಜಕಣಾಚಾರಿ ಕಲ್ಲನ್ನು ಕೆತ್ತಿ ಕೆತ್ತಿ ಸುಂದರ ಶಿಲೆಯನ್ನು ನಿರ್ಮಿಸಿದ ರೀತಿಯಲ್ಲಿ ಸಂಪೂರ್ಣ ತಾಲೂಕನ್ನು ಜನತೆ ಆಶಯದಂತೆ ಹಂತ ಹಂತವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿಕಾರಿಪುರ (ನ.11): ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಅಮರಶಿಲ್ಪಿ ಜಕಣಾಚಾರಿ ಕಲ್ಲನ್ನು ಕೆತ್ತಿ ಕೆತ್ತಿ ಸುಂದರ ಶಿಲೆಯನ್ನು ನಿರ್ಮಿಸಿದ ರೀತಿಯಲ್ಲಿ ಸಂಪೂರ್ಣ ತಾಲೂಕನ್ನು ಜನತೆ ಆಶಯದಂತೆ ಹಂತ ಹಂತವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಗುರುವಾರ ಪಟ್ಟಣದ ದೊಡ್ಡ ಪೇಟೆಯ ಸೋಮವಂಶ ಆರ್ಯ ಕ್ಷತ್ರಿಯ (ಚಿತ್ರಗಾರ್) ಸಮಾಜದ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಪಟ್ಟಣದ ಜನತೆ ನೀರಿನ ಸಮಸ್ಯೆ ತಲೆದೋರಿದಾಗ ಬೋರ್‌ವೆಲ್ ನೀರು ಕುಡಿಯಲು ಬಳಸುತ್ತಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಅಂಜನಾಪುರ ಜಲಾಶಯದಿಂದ ಪಟ್ಟಣಕ್ಕೆ ಕೋಟ್ಯಂತರ ರು. ವೆಚ್ಚದಲ್ಲಿ ನೇರ ಸಿಹಿನೀರು ಸರಬರಾಜಿಗೆ ಸಂಪರ್ಕ ಕಲ್ಪಿಸಲಾಗಿದೆ. ಸಂಪೂರ್ಣ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆಯಾಗಿದೆ ಎಂದ ಅವರು, ಯಡಿಯೂರಪ್ಪ ಅವರು ತಾಲೂಕಿನ 179 ಹಳ್ಳಿ ಜತೆಗೆ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣವನ್ನು ಅಮರಶಿಲ್ಪಿ ಜಕಣಾಚಾರಿ ರೀತಿಯಲ್ಲಿ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದರು. ಶಿಕಾರಿಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಜತೆಗೆ ತಾಲೂಕಿನ ಸಮಸ್ತ ಜನತೆಯ ಬದುಕು ಕಟ್ಟುವ ಕೆಲಸವನ್ನು ಯಡಿಯೂರಪ್ಪನವರು ಮಾಡಿದ್ದಾರೆ.
ಶಾಸಕ ಬಂಡಿ ಜತೆಗಿನ ಸಂಭಾಷಣೆ ತಮಾಷೆಗಾಗಿ: ಯಡಿಯೂರಪ್ಪ
ವರ್ಷದಲ್ಲಿಯೇ ಸಂಸದನಾಗಿ ವಿಮಾನ ನಿಲ್ದಾಣವನ್ನು ಶಿವಮೊಗ್ಗದಲ್ಲಿ ನಿರ್ಮಿಸಲಾಗಿದೆ. ತಿಂಗಳ ಕಾಲಾವಧಿಯಲ್ಲಿ ಏರ್‌ಪೋರ್ಚ್ ಉದ್ಘಾಟನೆಗೊಂಡು ಶಿವಮೊಗ್ಗ, ಬೆಂಗಳೂರು, ದೆಹಲಿ ಹಾಗೂ ಶಿವಮೊಗ್ಗ- ಬೆಂಗಳೂರಿಗೆ ಎರಡು ವಿಮಾನ ಸಂಚಾರ ಆರಂಭಗೊಳ್ಳಲಿದೆ. ಈ ಹಿಂದೆಯೂ ಹಾಗೂ ಇಂದು ಜನತೆ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಇಂದು ಏಕೆ ಅಭಿವೃದ್ದಿ ಆಗುತ್ತಿದೆ, ಹಿಂದೆ ಏಕೆ ಈ ರೀತಿಯ ಅಭಿವೃದ್ಧಿಗಳು ಆಗಲಿಲ್ಲ? ವಿಮಾನ ನಿಲ್ದಾಣ ಕೇವಲ ಶ್ರೀಮಂತರಿಗೆ ಮಾತ್ರವಲ್ಲ, ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಧಾವಿಸಿ ಬಂಡವಾಳ ಹೂಡಿಕೆಯಿಂದ ಸ್ಥಳೀಯ ಪ್ರತಿಭಾನ್ವಿತರಿಗೆ ಉದ್ಯೋಗ ದೊರೆಯಲಿದೆ ಎಂದರು.
ಗಾರ್ಮೆಂಟ್ಸ್ ಕಾರ್ಖಾನೆ ಆರಂಭದಿಂದ ಸಹಸ್ರಾರು ಯುವಕ, ಯುವತಿಯರು ಉದ್ಯೋಗ ಗಳಿಸಿದ್ದಾರೆ. ಈ ರೀತಿಯಲ್ಲಿ ತಾಲೂಕು ಜಿಲ್ಲೆಯನ್ನು ಕಟ್ಟುವ ಕೆಲಸವಾಗಿದೆ. ಯಡಿಯೂರಪ್ಪ ಅವರು ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಹೇಳಿಕೊಡುವ ಕೆಲಸವನ್ನು ಮಾಡಿದ್ದಾರೆ. ಒಂದು ದಿನದ ಊಟಕ್ಕಿಂತ ಜೀವನಪೂರ್ತಿ ಊಟ ದೊರಕಿಸುವ ದಿಸೆಯಲ್ಲಿ ಯಡಿಯೂರಪ್ಪನವರು ಅಪಾರ ಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸ್ವಾತಂತ್ರ್ಯಪೂರ್ವದಿಂದ ತಾಳಗೊಪ್ಪ-ಬೆಂಗಳೂರು ಮಾರ್ಗದ ರೈಲು ಮಾರ್ಗ ಮಾತ್ರವಿದ್ದು, ನಂತರದಲ್ಲಿ ಹೊಸ ರೈಲುಗಳ ಸಂಚಾರವಿರಲಿಲ್ಲ.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಹಲವು ಹೊಸ ರೈಲು ಸಂಚಾರದ ಜತೆಗೆ ಇದೀಗ ಮಲೆನಾಡಿನ ಜನತೆಯ ಬಹು ಮಹತ್ವಾಕಾಂಕ್ಷೆಯ ಶಿವಮೊಗ್ಗ ರಾಣೇಬೆನ್ನೂರು ರೈಲು ಯೋಜನೆ ಸಹಸ್ರಾರು ಕೋಟಿ ಅನುದಾನ ನೀಡಿ ಕಾಮಗಾರಿ ವೇಗಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ನೀರಾವರಿ ಯೋಜನೆ, ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಆಸ್ಪತ್ರೆಗಳು, ರಾಷ್ಟ್ರೀಯ ಹೆದ್ದಾರಿ, ಪ್ರವಾಸಿ ತಾಣದ ಅಭಿವೃದ್ಧಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಹೀಗೆ ಹತ್ತುಹಲವು ಯೋಜನೆಗಳನ್ನು ಯಡಿಯೂರಪ್ಪನವರು ಜನತೆಗೆ ನೀಡಿದ್ದಾರೆ. ಆ ಮೂಲಕ ಆಧುನಿಕ ಜಕಣಾಚಾರಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು.
ರಾಜ್ಯದ ಜನತೆ ಸಿದ್ದರಾಮಯ್ಯ ಜೇಬಲ್ಲಿದ್ದಾರಾ?: ಬಿಎಸ್‌ವೈ
ಸಂಸದರನ್ನು ಸಮಾಜ ವತಿಯಿಂದ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ರೇಖಾಬಾಯಿ, ಸದಸ್ಯ ಗುರುರಾಜ್ ಜಗತಾಪ್, ಪಾಲಾಕ್ಷಪ್ಪ ಭದ್ರಾಪುರ, ಬೆಣ್ಣೆ ದೇವೇಂದ್ರಪ್ಪ, ರೇಣುಕ ಸ್ವಾಮಿ, ಜಕಣಾಚಾರ್ಯ ಪ್ರಶಸ್ತಿ ವಿಜೇತ ಶಿಲ್ಪಿ ಕಾಶಿನಾಥ್, ಚಿತ್ರಗಾರ್ ಸಮಾಜ ಅಧ್ಯಕ್ಷ ಪರಶುರಾಮ ಪೌಣಾರ ಸಮಾಜದ ಬಂಧುಗಳು ಮುಖಂಡ ಹಳ್ಳೂರು ಪರಮೇಶ್ವರಪ್ಪ, ಗಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.