ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಯನ್ನು ವಾಪಸ್ ಪಡೆದಿರುವುದು ಕಾನೂನು ಬಾಹಿರ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ (ನ.25): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಯನ್ನು ವಾಪಸ್ ಪಡೆದಿರುವುದು ಕಾನೂನು ಬಾಹಿರ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದ್ಧವಾದ ಒಂದು ಸಂಸ್ಥೆ ತನಿಖೆ ನಡೆಸುತ್ತಿದೆ. ಹೈಕೋರ್ಟ್ ಪ್ರಕರಣ ಮುಂದುವರಿಸುವ ತೀರ್ಮಾನಕ್ಕೆ ಬಂದಾಗಿದೆ. ಸ್ವಲ್ಪ ದಿನದಲ್ಲಿ ಚಾರ್ಜ್ ಸೀಟ್ ಸಲ್ಲಿಸಬೇಕಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಕ್ಯಾಬಿನೆಟ್‌ನಲ್ಲಿ ಡಿಸಿಎಂ ವಿರುದ್ಧ ಇರುವ ಸಿಬಿಐ ತನಿಖೆ ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಈ ರೀತಿಯ ಹೊಸ ಪ್ರವೃತ್ತಿಗೆ ನಾಂದಿ ಹಾಡಿದೆ ಎಂದು ಟೀಕಿಸಿದರು.
ಕ್ಯಾಬಿನೆಟ್ ನ ಒಬ್ಬ ಸದಸ್ಯನ ಮೇಲೆ ವಿರುದ್ಧ ಆರೋಪ ಬಂದಾಗ ನ್ಯಾಯಾಂಗ ಚೌಕಟ್ಟಿನಲ್ಲಿ ತನಿಖೆ ನಡೆಯಬೇಕಾದರೆ, ಈ ರೀತಿ ಮಾಡಿದ್ದು, ಕಾನೂನು ಬಾಹಿರ. ರಾಜ್ಯಕ್ಕೆ ಬೇರೆ ರೀತಿ ಮೇಲ್ಪಂಕ್ತಿ ಹಾಕಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಇದನ್ನು ಸಮಾಜ ಹಾಗೂ ನ್ಯಾಯಾಂಗ ವ್ಯವಸ್ಥೆ ಗಮನಿಸುತ್ತಿದೆ. ಇದೊಂದು ನ್ಯಾಯಾಂಗ ನಿಂದನೆ. ಸ್ವತಂತ್ರ ಸಂಸ್ಥೆ ಈ ರೀತಿ ತನಿಖೆ ಮಾಡಬೇಕಾದರೆ ಅದನ್ನ ರಾಜಕೀಯಗೊಳಿಸುವ ಪ್ರಯತ್ನವಿದು. ಒಂದು ಸಂಸ್ಥೆಯನ್ನೇ ಅಪರಾಧಿ ಸ್ಥಾನಕ್ಕೆ ಇಡುವ ಪ್ರಯತ್ನ ಸರಿಯಲ್ಲ ಎಂದು ಹರಿಹಾಯ್ದರು,
ಡಿಕೆಶಿ ಕೇಸ್: ಸಚಿವ ಸಂಪುಟದ ತೀರ್ಮಾನ ಕಾನೂನಾತ್ಮಕವಾಗಿದೆ: ಸಚಿವ ಮಹದೇವಪ್ಪ
ಕಾಂಗ್ರೆಸ್ ಮಹಾನಾಯಕರ ಹೇಳಿಕೆಗಳನ್ನ ಗಮನಿಸಿದ್ದೇನೆ. ಇಡಿ, ಸಿಬಿಬಿ ಇದೆಲ್ಲಾ ದುರುಪಯೋಗ ಆಗುತ್ತಿದೆ. ನಾವು ಇದನ್ನ ಖಂಡಿಸ ಬೇಕು ಎಂದು ಹೋರಾಟಕ್ಕೆ ಕರೆಕೊಟ್ಟ ಹಾಗೆ ಕಾಂಗ್ರೆಸ್ಸಿನ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಈ ಸಂಸ್ಥೆ ಮಾಡಿದ್ದೆ ತಪ್ಪು, ಈ ಹಿಂದಿನ ಸರ್ಕಾರ ಮಾಡಿದ್ದು ತಪ್ಪು ಎನ್ನುವ ರೀತಿಯಾಗಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಅವರ ಸಾಧನೆಯಾಗಲ್ಲ. ಬರುವ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಚಾಟಿ ಬೀಸಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಎದುರಿಸಬೇಕಾದ ಒಂದು ಪ್ರಕರಣವನ್ನು ರಾಜಕೀಯವ ಬಳಸಿ, ಹೊಸದಾರಿ ಹುಡುಕುವುದನ್ನು ನ್ಯಾಯಾಂಗ ವ್ಯವಸ್ಥೆ ಒಪ್ಪಲ್ಲ ಎಂದು ಕುಟುಕಿದರು.