ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ಮಂಡಿಸಬಹುದು: ಸಂಸದ ಬೊಮ್ಮಾಯಿ

Published : Nov 29, 2025, 06:19 AM IST
Basavaraj Bommai

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇದೇ ಥರ ಮುಂದುವರೆದರೆ ರಾಜ್ಯದ ರಾಜಕೀಯ ಅಲ್ಲೋಲ ಕಲ್ಲೋಲ ಆಗುವ ಸಾಧ್ಯತೆ ಇದೆ. ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆ ಇದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ (ನ.29): ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇದೇ ಥರ ಮುಂದುವರೆದರೆ ರಾಜ್ಯದ ರಾಜಕೀಯ ಅಲ್ಲೋಲ ಕಲ್ಲೋಲ ಆಗುವ ಸಾಧ್ಯತೆ ಇದೆ. ಕೇಂದ್ರದ ಕಾಂಗ್ರೆಸ್ ನಾಯಕರು ಇದನ್ನು ಬಗೆಹರಿಸಲು ಎರಡು ಮೂರು ಸೂತ್ರ ಬಿಟ್ಟರೂ, ಇಬ್ಬರೂ ನಾಯಕರೂ ಒಪ್ಪುತ್ತಿಲ್ಲ. ಇಬ್ಬರನ್ನೂ ಬಿಟ್ಟು ಬೇರೆ ಸೂತ್ರ ತಯಾರು ಮಾಡುವ ಮಾಹಿತಿ ಇದೆ. ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಹಗ್ಗ ಜಗ್ಗಾಟ ತೀವ್ರ ಸ್ವರೂಪ ಪಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಾಗಿದೆ. ಆಡಳಿತ ಸಂಪೂರ್ಣ ಕುಸಿತಗೊಂಡಿದೆ. ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇಬ್ಬರೂ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದೇ ಥರ ಮುಂದೆ ನಡೆದರೆ ರಾಜ್ಯದ ರಾಜಕೀಯ ಅಲ್ಲೋಲ ಕಲ್ಲೋಲ ಆಗುವ ಸಾಧ್ಯತೆ ಇದೆ.

ಕೇಂದ್ರದ ಕಾಂಗ್ರೆಸ್ ನಾಯಕರು ಇದನ್ನು ಬಗೆ ಹರಿಸಲು ಎರಡು ಮೂರು ಸೂತ್ರ ಬಿಟ್ಟರೂ, ಇಬ್ಬರೂ ನಾಯಕರೂ ಒಪ್ಪುತ್ತಿಲ್ಲ. ಇಬ್ಬರನ್ನೂ ಬಿಟ್ಟು ಬೇರೆ ಸೂತ್ರ ತಯಾರು ಮಾಡುವ ಸಾಧ್ಯತೆ ಇದೆ ಅಂತ ಮಾಹಿತಿ ಇದೆ. ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈಗ ಕಾಣದಿರುವ ಕುದುರೆ ಕಾಣಬಹುದು. ಫೋಟೊದಲ್ಲಿ ಇರುವ ಕುದುರೆ ಓಡುವುದಿಲ್ಲ. ರಾಜ್ಯದಲ್ಲಿ ಏನಾದರೂ ಆಗಬಹುದು ಎಂದು ಹೇಳಿದರು. ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ 8ರ ವರೆಗೂ ಸಮಯ ಇದೆ. ಅಂತಹ ಸಂದರ್ಭ ಬಂದರೆ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸಂಗ ಬರಬಹುದು ಎಂದರು.

ಕುದುರೆ ವ್ಯಾಪಾರ ಮಾಡುವುದು ಬಿಜೆಪಿಯವರ ಕೆಲಸ ಎಂದು ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ವರು 1969ರಿಂದಲೇ ಕುದುರೆ ವ್ಯಾಪಾರ ಆರಂಭ ಮಾಡಿದ್ದಾರೆ. ಆಗ ಜಾರಕಿಹೊಳಿ ಇನ್ನೂ ರಾಜಕಾರಣದಲ್ಲಿಯೇ ಇರಲಿಲ್ಲ, ಕಾಂಗ್ರೆಸ್ ಇತಿಹಾಸ ತೆಗೆದುನೋಡಿದರೆ ಗೊತ್ತಾಗಲಿದೆ. ಮಹಾರಾಷ್ಟ್ರದ ಎಲ್ಲಾ ಶಾಸಕರನ್ನು ಡಿ.ಕೆ. ಶಿವಕುಮಾರ ಕರೆದುಕೊಂಡು ಬಂದು ವಿಲಾಸ್‌ರಾವ್ ದೇಶಮುಖ ಅವರನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿರುವುದು ಗೊತ್ತಿಲ್ಲವಾ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ

ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೆಕ್ಕೆಜೋಳ ವಿಚಾರದಲ್ಲಿ ಸುಮ್ಮನೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ, ತಮ್ಮಲ್ಲಿ ದುಡ್ಡಿಲ್ಲ. ಮುಖ್ಯಮಂತ್ರಿಗಳು 10 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲು ಆದೇಶ ಮಾಡಿದ್ದಾರೆ. ಯಾಕೆ ಖರೀದಿ ಮಾಡುತ್ತಿಲ್ಲ. ಯಾಕೆ ಎಜೆನ್ಸಿ ನಿಗದಿ ಮಾಡಿಲ್ಲ. ಯಾಕೆ ಹಣ ಬಿಡುಗಡೆ ಮಾಡಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವ ಕುರಿತು ಸಚಿವ ಶಿವಾನಂದ ಪಾಟೀಲರು ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿ, ನಿಯೋಗ ತೆಗೆದುಕೊಂಡು ಹೋಗಿ ಏನು ಮಾಡುವುದು. ಅವರು ಮೊದಲು ಖರೀದಿ ಆರಂಭಿಸಿಲಿ, ನಾನು ಅವರ ಜಾಗದಲ್ಲಿ ಇದ್ದಿದ್ದರೆ ಆ ಕೆಲಸ ಮಾಡುತ್ತಿದ್ದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!