ರಾಹುಲ್‌, ಸಿದ್ದು ಹೇಳುವುದು ಆಚಾರ, ತಿನ್ನೋದು ಬದನೆಕಾಯಿ: ಸಂಸದ ಬೊಮ್ಮಾಯಿ ವಾಗ್ದಾಳಿ

Published : Oct 30, 2025, 05:58 AM IST
Basavaraj Bommai

ಸಾರಾಂಶ

ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಮಾತೆತ್ತಿದರೆ ಸಂವಿಧಾನ ರಕ್ಷಣೆಯ ಬಗ್ಗೆ ಹೇಳುತ್ತಾರೆ. ಆದರೆ, ಅವರು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಪೊಲೀಸ್ ಆಡಳಿತ ತರಲು ಪ್ರಯತ್ನಿಸುತ್ತಿದ್ದಾರೆ.

ಹಾವೇರಿ (ಅ.30): ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಮಾತೆತ್ತಿದರೆ ಸಂವಿಧಾನ ರಕ್ಷಣೆಯ ಬಗ್ಗೆ ಹೇಳುತ್ತಾರೆ. ಆದರೆ, ಅವರು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಪೊಲೀಸ್ ಆಡಳಿತ ತರಲು ಪ್ರಯತ್ನಿಸುತ್ತಿದ್ದಾರೆ. ಅವರಿಬ್ಬರು ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎಂಬಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಸಂವಿಧಾನ ವಿರೋಧಿ ಕೃತ್ಯಗಳು ನಡೆದಿವೆ. ಜನರ ವಾಕ್‌ ಸ್ವಾತಂತ್ರ್ಯ, ನಾಗರಿಕರ ಹಕ್ಕು ಮೊಟಕುಗೊಳಿಸುವ ಕ್ರಮವಾಗುತ್ತಿದೆ. ಆರ್‌ಎಸ್‌ಎಸ್ ವಿರುದ್ಧ ರಾಜ್ಯ ಸರ್ಕಾರ ಮಾಡಿದ್ದ ಆದೇಶ ಸಂವಿಧಾನ ಬಾಹಿರವಾಗಿದೆ ಎಂದು ನಾನು ಹೇಳಿದ್ದೆ. ಅದನ್ನೇ ಹೇಳಿರುವ ಹೈಕೋರ್ಟ್ ಧಾರವಾಡ ಪೀಠ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ಸರ್ಕಾರಕ್ಕೆ ನಂಬಿಕೆ ಇದ್ದರೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದರು.

ಸಂವಿಧಾನಕ್ಕೆ ಅಪಚಾರ: ಚುನಾವಣಾ ಆಯೋಗದ ಕುರಿತು ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಚುನಾವಣಾ ಆಯೋಗ ಸಂವಿಧಾನಬದ್ಧ ಸಂಸ್ಥೆ. ಆಯುಕ್ತರಿಗೆ ಟೀಕೆ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ಇದರ ಅರಿವು ಇಟ್ಟುಕೊಳ್ಳಬೇಕು. ಯಾವ ಆಯೋಗದ ಮೂಲಕ ಇವರು ಆಯ್ಕೆಯಾಗಿದ್ದಾರೆಯೋ ಅದನ್ನೇ ತಿರಸ್ಕಾರ ಮಾಡುತ್ತಿದ್ದು, ಕಾಂಗ್ರೆಸ್‌ ದೇಶದಲ್ಲಿ ಅರಾಜಕತೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ದೇಶದ ಸಿದ್ಧಾಂತವೇ ಆರ್‌ಎಸ್‌ಎಸ್ ಸಿದ್ಧಾಂತ: ರಾಜ್ಯ ಸರ್ಕಾರಕ್ಕೆ ಆರ್‌ಎಸ್‌ಎಸ್ ಸಂಘಟನೆಯನ್ನು ಏನೂ ಮಾಡಲು ಆಗುವುದಿಲ್ಲ. ಈ ದೇಶದ ಸಿದ್ಧಾಂತವೇ ಆರ್‌ಎಸ್‌ಎಸ್ ಸಿದ್ಧಾಂತವಾಗಿದೆ. ಇದು ಹಿಂದೂಗಳಿಗೆ ರಾಷ್ಟ್ರ ವಿರೋಧಿ ಸರ್ಕಾರವಾಗಿ ಕಾಣುತ್ತಿದೆ ಎಂದು ಆರೋಪಿಸಿದರು. ಈ ರಾಜ್ಯದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಸರ್ಕಾರ ನಾಗರಿಕರ ಹಕ್ಕನ್ನು ಸಂಪೂರ್ಣವಾಗಿ ಮೊಟಕುಗೊಳಿಸಿದೆ. ಕಾನೂನಿನಲ್ಲಿ ರಾಜಕೀಯ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದು ಅಂತಿದೆ. ಆರ್‌ಎಸ್‌ಎಸ್ ಸಂಘಟನೆ ಯಾವುದೇ ರಾಜಕೀಯ ಚಟುವಟಿಕೆಯ ಸಂಘಟನೆಯಲ್ಲ. ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಆರ್‌ಎಸ್‌ಎಸ್‌ನ ಸದಸ್ಯರು. ಯಾವ ಕೋರ್ಟ್ ಆದೇಶದಲ್ಲಿ ಸಂಘ ಸಂಸ್ಥೆ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದಂತಿದೆ ಎಂದು ಪ್ರಶ್ನಿಸಿದರು.

ಜನಶಕ್ತಿ-ರಾಜ್ಯಶಕ್ತಿ ಸಂಘರ್ಷ

ಕನ್ಹೇರಿ ಮಠದ ಸ್ವಾಮಿಗಳ ಸಾಧನೆ ಬಹಳ ದೊಡ್ಡದಿದೆ, ಅವರ ಸಾಧನೆ ನೋಡಬೇಕು ಅಂದರೆ, ಕನ್ಹೇರಿ ಮಠಕ್ಕೆ ಹೋಗಬೇಕು. ನಡೆಯುತ್ತಿರುವ ಇವತ್ತಿನ ಗೊಂದಲಕ್ಕೆ ಸ್ವಾಮೀಜಿ ಕೆಲವು ಶಬ್ದಗಳನ್ನು ಬಳಸಿದ್ದಾರೆ. ಅವರು ಸಾರ್ವಜನಿಕರಿಗೆ ಯಾವಾಗಲೂ ಬಹಳ ಪ್ರೀತಿಗೆ ಪಾತ್ರರಾದವರು. ಅಂತವರು ಬಂದರೆ ಕಾನೂನು ಸುವ್ಯವಸ್ಥೆಗೆ ಭಂಗವಾಗುತ್ತದೆ ಅಂದರೆ ಏನು? ಉತ್ತರ ಪ್ರದೇಶ, ಬಿಹಾರದಿಂದ ಬಹಳಷ್ಟು ಜನ ಧರ್ಮಗುರುಗಳು ಬರುತ್ತಾರೆ. ಇಲ್ಲಿ ಮೈಕ್‌ನಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡುತ್ತಾರೆ. ಒಬ್ಬರನ್ನು ಆದ್ರೂ ನಿರ್ಬಂಧ ಮಾಡಿದ್ದಾರಾ? ಅದಕ್ಕೆ ಈ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಬರುವಂತಹ ದಿನಗಳಲ್ಲಿ ಜನಶಕ್ತಿ, ರಾಜ್ಯಶಕ್ತಿ ನಡುವೆ ಸಂಘರ್ಷ ಆಗುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!