
ಚಾಮರಾಜನಗರ (ಅ.28): ಪ.ಜಾ ಹಾಗೂ ಪ.ಪಂ.ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡಿದ ಮುಖ್ಯಮಂತ್ರಿ, ಪ್ರಧಾನಿಗೆ ಅಭಿನಂದನೆ ಸಲ್ಲಿಸಲು ನ. 20 ರಂದು ಬಳ್ಳಾರಿಯಲ್ಲಿ ಬೃಹತ್ ಎಸ್ಟಿ ಸಮಾವೇಶ ಆಯೋಜಿಸಲಾಗಿದೆ ಎಂದು ಸಾರಿಗೆ ಮತ್ತು ಪ.ಪಂ.ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದರು. ಅಂಬೇಡ್ಕರ್ ಭವನದಲ್ಲಿ ನಡೆದ ಬಿಜೆಪಿ ಎಸ್ಟಿಸಮಾವೇಶ ಕುರಿತು ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಆಡಳಿತ ಪಕ್ಷದ, ಸರ್ಕಾರಗಳಿಗೆ ಈ ಸಮುದಾಯಗಳ ಕಷ್ಟ ಅರ್ಥವಾಗಿಲ್ಲ.
ಅಂಬೇಡ್ಕರ್ ನೀಡಿದ್ದ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗನುಗುಣ ಏರಿಕೆ ಮಾಡಬೇಕೆಂಬ ಕೂಗು ಇತ್ತು. ರಾಜಕೀಯ ಇಚ್ಛಾಶಕ್ತಿ ಕೊರೆತೆಯಿಂದ ಎಸ್ಟಿಸಮುದಾಯಗಳಿಗೆ ಮೀಸಲಾತಿ ಹೆಚ್ಚಳವಾಗಿರಲಿಲ್ಲ. ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಬಿಜೆಪಿ ಸರ್ಕಾರ ಬಂದರೆ, ಖಂಡಿತ ಮೀಸಲಾತಿ ಹೆಚ್ಚಳ ಮಾಡುತ್ತೇವೆಂದು ವಾಗ್ದಾನ ಮಾಡಿದ್ದು, ಸುಗ್ರಿವಾಜ್ಞೆ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಶ್ರೀರಾಮುಲು ಹೇಳಿದರು.
Bus Ticket Fare: ಸಾರಿಗೆ ಬಸ್ ದರ ಹೆಚ್ಚಳವಿಲ್ಲ : ಸಚಿವ ಶ್ರೀರಾಮುಲು
ಪ್ರಧಾನಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿ ಗೌರವಿಸಬೇಕು. ಕೆಚ್ಚೆದೆಯಿಂದ ಯಾವುದೇ ವಿರೋಧ ಲೆಕ್ಕಿಸದೇ ಎಸ್ಟಿಗೆ ಶೇ.3ರಷ್ಟುಇದ್ದ ಮೀಸಲಾತಿಯನ್ನು ಶೇ. 7ಕ್ಕೆ ಏರಿಕೆ, ಎಸ್ಟಿಗೆ ಶೇ. 15 ರಿಂದ ಶೇ. 17ಕ್ಕೆ ಏರಿಕೆ ಮಾಡಿದೆ. ಇದರಿಂದ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ದೊರಕಿ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅನುಕೂಲವಾಗುತ್ತಿದೆ. ಈ ಹಿಂದೆ ಪರಿವಾರ, ತಳವಾರವನ್ನು ಎಸ್ಟಿಗೆ ಸೇರ್ಪಡೆ ಮಾಡಿದೆ.
ಇದಕ್ಕೆ ವೇದಿಕೆಯಲ್ಲಿ ಕುಳಿತಿರುವ ಎಲ್ಲ ನಾಯಕರ ಹೋರಾಟ ಫಲ ಇದಾಗಿದೆ. ಸರ್ಕಾರ ವಾಲ್ಮೀಕಿ ಜಯಂತಿ ಆಚರಣೆ, ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನಗಳ ಮಾದರಿಯಲ್ಲಿ ವಾಲ್ಮೀಕಿ ಭವನಗಳನ್ನು ನಿರ್ಮಿಸಲು ತಲಾ 5 ಕೋಟಿ ರು. ಬಿಡುಗಡೆ ಮಾಡಿ. ಭವನಗಳು ನಿರ್ಮಾಣವಾಗಿ, ಸಮುದಾಯದ ಏಳಿಗೆಗೆ ಬಳಕೆಯಾಗುತ್ತಿವೆ ಎಂದರು.
ಬಿಜೆಪಿ ರಾಜ್ಯ ಪ್ರ.ಕಾ.ಸಿದ್ದರಾಜು, ಎಸ್ಟಿಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಮಾತನಾಡಿದರು, ಸಭೆಯಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಮೈಸೂರು ಮಹಾಪೌರರ ಶಿವಕುಮಾರ್, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಜಂಗಲ್ ಲಾಡ್ಜ್ ಮಾಜಿ ಅಧ್ಯಕ್ಷ ಅಪ್ಪಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್, ರಾಜ್ಯ ಎಸ್ಟಿಮೋರ್ಚಾ ಕಾರ್ಯದರ್ಶಿ ಮಂಜುಳಾ, ಎಸ್ಟಿಮೋರ್ಚಾ ಜಿಲ್ಲಾಧ್ಯಕ್ಷ ಜಯಸುಂದರ್, ಜಿ.ಪಂ ಮಾಜಿ ಅಧ್ಯಕ್ಷೆ ಶೈಲಜಾ ಮಲ್ಲೇಶ್, ಬಿಜೆಪಿ ಜಿಲ್ಲಾ ಪ್ರ.ಕಾ. ನಾಗಶ್ರೀ ಪ್ರತಾಪ್, ಡಾ. ಎ.ಆರ್. ಬಾಬು, ಮಲ್ಲೇಶ್ ಅಮ್ಮನಪುರ, ಪ. ಮಲ್ಲೇಶ್, ನಗರಸಭಾ ಅಧ್ಯಕ್ಷೆ ಆಶಾನಟರಾಜು, ಮಾಜಿ ಅಧ್ಯಕ್ಷ ಸುರೇಶನಾಯಕ್, ಸದಸ್ಯ ಶಿವರಾಜು, ಎಪಿಎಂಸಿ ಅಧ್ಯಕ್ಷ ಮನೋಜ್ ಕುಮಾರ್, ಗುಂಡ್ಲುಪೇಟೆ ಪುರಸಭಾ ಅಧ್ಯಕ್ಷ ಗಿರೀಶ್ ಇದ್ದರು.
ಬೇರೆಯವರ ಗೂಡಲ್ಲಿ ಸಿದ್ದರಾಮಯ್ಯ ರಾಜಕಾರಣ: ಬೇರೆಯವರನ್ನು ತುಳಿದು ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ, ದೇವೇಗೌಡರನ್ನು, ಪರಮೇಶ್ವರ್ ಅವರನ್ನು ತುಳಿದದ್ದಾಗಿದೆ. ಈಗ ಡಿಕೆಶಿ ಅವರನ್ನು ತುಳಿಯಲು ಹೊರಟಿದ್ದಾರೆ, ಯಾವುದೇ ಶ್ರಮ ಹಾಕದೇ ಅವರಿವರು ಕಟ್ಟೋ ಗೂಡಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು. ಜಾತಿಗಳ ಹೆಸರು, ಮಹಾನ್ ಪುರುಷರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ, ಅವರ ಸರ್ಕಾರ ಇದ್ದಾಗ ಮೀಸಲಾತಿ ಕೊಡಲಿಲ್ಲ. ಈಗ ಪ್ರೊತ್ಸಾಹ, ಸಲಹೆ ಕೊಟ್ಟೆವು ಎನ್ನುತ್ತಾರೆ.
ಮುಂದೆ ರಾಜಕೀಯದಲ್ಲಿ ಇರ್ತೇನೋ, ಇಲ್ವೋ..?: ಸಚಿವ ಶ್ರೀರಾಮುಲು
ಆದರೆ, ಮೀಸಲಾತಿ ಹೆಚ್ಚು ಮಾಡಬೇಕೆಂಬ ಇಚ್ಛಾಶಕ್ತಿಯೇ ಅವರಲ್ಲಿ ಇರಲಿಲ್ಲ ಎಂದು ಟೀಕಿಸಿದರು. ಕಾನೂನುಬದ್ಧ ಕ್ರಮಗಳನ್ನು ಬೊಮ್ಮಾಯಿ ತೆಗೆದುಕೊಂಡಿದ್ದು, ಈಗಾಗಲೇ ನಾವು ಹೊಸ ಮೀಸಲಾತಿಯಲ್ಲಿದ್ದೇವೆ, ಕಾನೂನಾತ್ಮಾಕವಾಗಿ ಗಟ್ಟಿಗೊಳಿಸುತ್ತಿದ್ದೇವೆ, ಮೀಸಲಾತಿ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಎಂದರು. ಈಗಾಗಲೇ ದೇಶದಲ್ಲಿ ಕಾಂಗ್ರೆಸ್‌ನ್ನು ಜನರು ತಿರಸ್ಕರಿಸಿದ್ದು, ಕರ್ನಾಟಕದಲ್ಲೂ ಈ ಬಾರಿ ಎಲ್ಲಾ ಸಮುದಾಯ ಕಾಂಗ್ರೆಸ್‌ನ್ನು ತಿರಸ್ಕರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.